ಕರ್ನಾಟಕ

‘ತೇಜಸ್ವಿ ಸೂರ್ಯ ಗೋ ಬ್ಯಾಕ್‌’ ಎಂದು ತೇಜಸ್ವಿನಿ ಅನಂತ ಕುಮಾರ್‌ ಬೆಂಬಲಿಗರ ಆಕ್ರೋಶ

Pinterest LinkedIn Tumblr


ಬೆಂಗಳೂರು: ಇಲ್ಲಿನ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ದಿವಂಗತ ಅನಂತ ಕುಮಾರ್‌ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಟಿಕೆಟ್‌ ತಪ್ಪಿರುವುದು ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಆಕ್ರೋಶ ಮೂಡುವಂತೆ ಮಾಡಿದೆ. ಯುವ ನಾಯಕ ಮತ್ತು ಈ ಕ್ಷೇತ್ರದಿಂದ ಬಿಜೆಪಿಯ ಅಚ್ಚರಿಯ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ತಮಗೆ ಟಿಕೆಟ್‌ ಖಾತ್ರಿಯಾಗುತ್ತಿದ್ದಂತೆ ಇಂದು ಬೆಳಿಗ್ಗೆ ತೇಜಸ್ವಿನಿ ಅನಂತಕುಮಾರ್‌ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ತೇಜಸ್ವಿನಿ ಅವರ ಮನೆಯ ಮುಂದೆ ಜಮಾಯಿಸಿದ ಅವರ ಬೆಂಬಲಿಗರು ತೇಜಸ್ವಿ ಸೂರ್ಯ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ‘ತೇಜಸ್ವಿ ಸೂರ್ಯ ಗೋ ಬ್ಯಾಕ್‌’ ಎಂಬ ಘೋಷಣೆಗಳು ಕೇಳಿಬಂದವು. ಈ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಅವರು ತೇಜಸ್ವಿನಿ ಅನಂತಕುಮಾರ್‌ ಅವರ ಜೊತೆ ಮಾತುಕತೆ ನಡೆಸುತ್ತಿದ್ದರು.

ಇದೇ ಸಂದರ್ಭದಲ್ಲಿ ಮಾತನಾಡಿದ ತೇಜಸ್ವಿನಿ ಅನಂತಕುಮಾರ್‌ ಅವರು ‘ಪಕ್ಷ ತೆಗೆದುಕೊಂಡಿರುವ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರೋಣ, ಯುವ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಗೆಲುವಿಗೆ ನಾವೆಲ್ಲರೂ ಶ್ರಮಿಸಬೇಕು ; ನಾವೆಲ್ಲ ಪಕ್ಷದ ಸಿದ್ಧಾಂತವನ್ನ ಗೌರವಿಸುವವರು, ದೇಶ ಮೊದಲು ವ್ಯಕ್ತಿ ಆಮೇಲೆ ಎನ್ನುವುದು ಬಿಜೆಪಿ ಸಿದ್ಧಾಂತ. ಹಾಗಾಗಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಸೂರ್ಯ ಪರ ಕೆಲಸ ಮಾಡೋಣ’ ಎಂದು ಹೇಳಿದರು. ಒಂದು ಮೂಲಗಳ ಪ್ರಕಾರ ತೇಜಸ್ವಿ ಸೂರ್ಯ ಅವರ ಆಯ್ಕೆ ಕುರಿತಾದ ಮಾಹಿತಿ ಬಿ.ಎಸ್‌. ಯಡಿಯೂರಪ್ಪನವರಿಗೂ ಇರಲಿಲ್ಲ ಎನ್ನಲಾಗುತ್ತಿದೆ.

28 ವರ್ಷದ ಯುವ ನಾಯಕನಿಗೆ ಬೆಂಗಳೂರು ದಕ್ಷಿಣದಂತಹ ಹೈ ವೋಲ್ಟೇಜ್‌ ಕ್ಷೇತ್ರದಿಂದ ಪ್ರತಿನಿಧಿಸಲು ಅವಕಾಶ ಸಿಕ್ಕಿರುವುದು ಸಹಜವಾಗಿಯೇ ತೇಜಸ್ವಿ ಸೂರ್ಯ ಅವರನ್ನು ಆಶ್ಚರ್ಯಗೊಳಿಸಿದೆ ಮಾತ್ರವಲ್ಲದೇ ಈ ಕ್ಷೇತ್ರದಲ್ಲಿ ಬಿ.ಕೆ. ಹರಿಪ್ರಸಾದ್‌ ಅವರಂತಹ ಹಿರಿಯ ಪ್ರಭಾವಿ ನಾಯಕರನ್ನು ಎದುರಿಸಿ ಗೆಲ್ಲಬೇಕಾಗಿರುವ ಹಾಗೂ ತೇಜಸ್ವಿನಿ ಅನಂತಕುಮಾರ್‌ ಅವರ ಅಭಿಮಾನಿಗಳ ಆಕ್ರೋಶವನ್ನೂ ತಣಿಸಿ ಅವರನ್ನು ತನ್ನೊಂದಿಗೆ ಸೇರಿಸಿಕೊಂಡು ಈ ಚುನಾವಣೆಯನ್ನು ಎದುರಿಸುವ ಸವಾಲು ಯುವ ನಾಯಕ ತೇಜಸ್ವಿ ಸೂರ್ಯ ಅವರ ಮುಂದಿದೆ.

Comments are closed.