ಹೈದರಾಬಾದ್: ತೆಲಂಗಾಣದಲ್ಲೀಗ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇತ್ತೀಚೆಗಿನ ಪಂಚರಾಜ್ಯ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್-ಟಿಡಿಪಿ ಮೈತ್ರಿ ಎದುರು ಸಿಎಂ ಕೆಸಿಆರ್ ನೇತೃತ್ವದ ಟಿಆರ್ಎಸ್ ಪಕ್ಷ ಭರ್ಜರಿ ಜಯಭೇರಿ ಬಾರಿಸುವ ಮೂಲಕ ತೆಲಂಗಾಣದಲ್ಲಿ ಗದ್ದುಗೆ ಹಿಡಿಯಿತು. ಇದೀಗ ಮತ್ತೆ ಲೋಕಸಭೆ ಚುನಾವಣೆಯಲ್ಲಿ ಕೂಡ ಅದೇ ರೀತಿ ತನ್ನ ಶಕ್ತಿ ಪ್ರದರ್ಶಿಸಲು ಟಿಆರ್ಎಸ್ ಮುಂದಾಗಿದೆ. ಇನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವ ಕಾಂಗ್ರೆಸ್, ಟಿಆರ್ಎಸ್ ಮತ್ತು ಜನಸೇನಾ ಪಕ್ಷದ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿ ಅಖಾಕ್ಕಿಳಿದಿದ್ದಾರೆ.
ಈ ಮಧ್ಯೆ ಸಿಎಂ ಕೆಸಿಆರ್ ಪುತ್ರಿ ಕವಿತಾ ಪ್ರತಿನಿಧಿಸುವ ನಿಜಾಮಾಬಾದ್ ಕ್ಷೇತ್ರ ಭಾರೀ ಸದ್ದು ಮಾಡುತ್ತಿದೆ. ಟಿಆರ್ಎಸ್ ಹಾಲಿ ಸಂಸದೆ ಕವಿತಾ ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದು, ಇವರ ವಿರುದ್ಧವಾಗಿ ಸುಮಾರು 200 ಕ್ಕೂ ಹೆಚ್ಚು ರೈತರು ನಾಮಪತ್ರ ಸಲ್ಲಿಸಿದ್ದಾರೆ. ಅಲ್ಲದೇ ಸಾವಿರಕ್ಕೂ ಹೆಚ್ಚು ರೈತರು ಈ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಕವಿತಾ ಅವರನ್ನು ಸೋಲಿಸಲು ಮುಂದಾಗಿರುವುದು ಗಮನಾರ್ಹ ಸಂಗತಿ.
ಇನ್ನು ಹಾಲಿ ಟಿಆರ್ಎಸ್ ಸಂಸದೆ ಕವಿತಾ ಇಲ್ಲಿಯವರೆಗೂ ಯಾವುದೇ ರೈತರ ಸಮಸ್ಯೆಗಳನ್ನು ಆಲಿಸಲಿಲ್ಲ. ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ನಮ್ಮ ಸರ್ಕಾರ ಎಲ್ಲೆಡೆ ರೈತಸ್ನೇಹಿ ಯೋಜನೆಗಳನ್ನು ಮಾಡುತ್ತಿದೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ಧಾರೆ. ಹೀಗಾಗಿ ಅವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲಿಸಲು ಮುಂದಾಗಿದ್ದೇವೆ ಎಂದು ಮಾಧ್ಯಮದವರಿಗೆ ರೈತ ಹೋರಾಟಗಾರರು ತಿಳಿಸಿದ್ದಾರೆ.
ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಕೆಸಿಆರ್ ಪುತ್ರಿ ಕವಿತಾ ಅವರು, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದ್ದರು. ಪ್ರತ್ಯೇಕ ತೆಲಂಗಾಣ ಹೋರಾಟದಿಂದಲೇ ತನ್ನ ತಂದೆಯಂತೆ ಮುನ್ನಲೆಗೆ ಬಂದ ಇವರಿಗೆ ಈಗ ಭಾರೀ ಸಂಕಷ್ಟ ಎದುರಾಗಿದೆ. ಕಳೆದ ಸಲ ನಿಜಾಮಾಬಾದ್ನಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಭಾರೀ ಪ್ರಮಾಣ ಅತಂರದಿದಂದ ಗೆಲುವು ಸಾಧಿಸಿದ್ದ ಕವಿತಾ ಅವರು, ಈ ಬಾರಿ ಗೆಲ್ಲಲಿದ್ಧಾರೆಯೇ? ಎಂದು ಕಾದು ನೋಡಬೇಕಿದೆ.
ಇನ್ನೊಂದೆಡೆ ತೆಲಂಗಾಣದಲ್ಲಿ ಲೋಕಸಭೆ ಚುನಾವಣೆ 2019ರಲ್ಲಿ ಸ್ಪರ್ಧಿಸದಿರಲು ತೆಲುಗು ದೇಶಂ ಪಾರ್ಟಿ (ಟಿಡಿಪಿ) ನಿರ್ಧರಿಸಿದೆ. 1982ರ ನಂತರ ಇದೇ ಮೊದಲ ಬಾರಿಗೆ ತೆಲಂಗಾಣ ಪ್ರಾಂತ್ಯದಲ್ಲಿ ಟಿಡಿಪಿ ಸ್ಪರ್ಧಿಸುತ್ತಿಲ್ಲ ಎನ್ನಲಾಗಿದೆ. ಜತೆಗೆ ಟಿಡಿಪಿ ಮತ್ತು ಕಾಂಗ್ರೆಸ್ ರೈತರನ್ನು ಪ್ರೇರೆಪಿಸಿ ನಮ್ಮ ವಿರುದ್ಧ ಎತ್ತಿಕಟ್ಟಲಾಗಿದೆ ಎಂದು ಟಿಆರ್ಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
Comments are closed.