ಕರ್ನಾಟಕ

ಎಸ್.ಎಸ್.ಎಲ್.ಸಿ ಪರೀಕ್ಷೆ: ಸಾಮಾಜಿಕ ಜಾಲತಾಣದಲ್ಲಿ ಇಂದು ನಡೆಯಲಿರುವ ಇಂಗ್ಲೀಷ್ ಪ್ರಶ್ನೆ ಪತ್ರಿಕೆ ಸೋರಿಕೆ?

Pinterest LinkedIn Tumblr


ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ 2018- 19 ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಬುಧವಾರ (ಮಾರ್ಚ್​ 27 ರಂದು) ನಿಗದಿಯಾಗಿದ್ದ ಇಂಗ್ಲೀಷ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಒಂದು ದಿನ ಮೊದಲೇ ಲೀಕ್ ಆಗಿದೆ.

ವಾಟ್ಸ್​ಆ್ಯಪ್​ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಈ ಪ್ರಶ್ನೆ ಪತ್ರಿಕೆಯು ಹರಿದಾಡುತ್ತಿದ್ದು, ಇತ್ತ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಈ ಬಗ್ಗೆ ನಿರ್ಲಕ್ಷ್ಯವಹಿಸಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.

ಈಗಾಗಲೇ ಒಂದಷ್ಟು ವಿದ್ಯಾರ್ಥಿಗಳ ಕೈಗೆ ಈ ಪ್ರಶ್ನೆ ಪ್ರಶ್ನೆ ಪತ್ರಿಕೆಯು ಸೇರಿದ್ದು, ಹೀಗಾಗಿ ನಾಳೆ ನಡೆಯಲಿರುವ ಪರೀಕ್ಷೆಯನ್ನು ಮುಂದೂಡುವ ಸಾಧ್ಯತೆ ಇದೆ. ಅಲ್ಲದೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿರುವ ಪ್ರಶ್ನೆ ಪತ್ರಿಕೆಯ ಹಿಂದಿರುವ ಕಾಣದ ಕೈಗಳ ಕುರಿತು ರಾಜ್ಯ ಸರ್ಕಾರ ತನಿಖೆಯನ್ನು ಕೈಗೊಳ್ಳಲಿದೆ ಎಂದು ಹೇಳಲಾಗಿದೆ.

ಈ ಬಾರಿ ಒಟ್ಟು 8 ಲಕ್ಷದ 41 ಸಾವಿರದ 666 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇದರಲ್ಲಿ 4 ಲಕ್ಷದ 47 ಸಾವಿರದ 864 ಬಾಲಕರಿದ್ದಾರೆ. ಹಾಗೆಯೇ 3 ಲಕ್ಷದ 93 ಸಾವಿರದ 802 ಬಾಲಕಿಯರು ಪರೀಕ್ಷೆಯನ್ನು ಎದುರಿಸಲಿದ್ದಾರೆ.

ಸೋಮವಾರ ವಾಟ್ಸ್‌ಆ್ಯಪ್‌ನಲ್ಲಿ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಗೊಂದಲ ಮೂಡಿಸಿತ್ತು. ಬೆಳಗ್ಗೆ ಗಣಿತ ಪ್ರಶ್ನೆ ಆರಂಭವಾಗುತ್ತಿದ್ದಂತೆ ಖಾಸಗಿ ಅಭ್ಯರ್ಥಿಯೊಬ್ಬ ಪ್ರಶ್ನೆ ಪತ್ರಿಕೆಯ ಚಿತ್ರಗಳನ್ನು ಸೆರೆ ಹಿಡಿದು ವಾಟ್ಸ್‌ಆ್ಯಪ್‌ ಮೂಲಕ ರವಾನೆ ಮಾಡಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಮುಜಾಹಿದ್‌ ಪಾಶಾರನ್ನು ಬಂಧಿಸಿರುವುದಾಗಿ ಮೈಸೂರು ಡಿಡಿಪಿಐ ಪಾಂಡುರಂಗ ದೃಢ ಪಡಿಸಿದ್ದರು. ಇದೀಗ ಇಂಗ್ಲೀಷ್ ಪ್ರಶ್ನೆ ಪತ್ರಿಕೆ ಸಹ ಲೀಕ್ ಆಗಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಗೊಂದಲಕ್ಕೀಡಾಗಿದ್ದಾರೆ.

ಈಗ ಲೀಕ್ ಆಗಿರುವ ಇಂಗ್ಲೀಷ್ ಪ್ರಶ್ನೆ ಪತ್ರಿಕೆಯನ್ನು ಅಸಲಿ ಎಂಬ ಬಗ್ಗೆ ಇನ್ನೂ ಕೂಡ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಯಾವುದೇ ಅಧಿಕೃತ ಹೇಳಿಕೆ ಪ್ರಕಟಿಸಿಲ್ಲ.

Comments are closed.