ಕರ್ನಾಟಕ

ಕುಮಾರಸ್ವಾಮಿ ಕರಿ ಎತ್ತು, ಡಿಕೆಸಿ ಬಿಳಿ ಎತ್ತು; ಇವು ಕಳ್ಳೆತ್ತುಗಳು ಎಂದ ರೈತ!

Pinterest LinkedIn Tumblr


ಮಂಡ್ಯ: ಸಕ್ಕರೆ ನಾಡಿನಲ್ಲೀಗ ರಾಜಕೀಯ ಮತ್ತಷ್ಟು ಕಾವೇರುತ್ತಿದೆ. ಬಹಿರಂಗವಾಗಿಯೇ ಸಿಎಂ ಎಚ್​​​.ಡಿ ಕುಮಾರಸ್ವಾಮಿ ಅವರೀಗ ಅಂಬರೀಶ್​​ ಪತ್ನಿ ಸುಮಲತಾ ಮತ್ತವರ ಬೆನ್ನಿಗೆ ನಿಂತ ನಟ ದರ್ಶನ್​ ಹಾಗೂ ಯಶ್​​ ವಿರುದ್ಧ ವಾಗ್ದಾಳಿ ನಡೆಸುತ್ತಿದ್ಧಾರೆ. ಈಗಾಗಲೇ ನಿಖಿಲ್​​ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದು, ಮಂಡ್ಯ ಚುಣಾವಣಾ ಕಣ ಈಗ ಇನ್ನಷ್ಟು ರಾಜಕೀಯ ಕೆಸರೆರಚಾಟಗಳಿಗೆ ವೇದಿಕೆಯಾಗಿದೆ. ಇತ್ತ ಜೆಡಿಎಸ್​​ ವಿರುದ್ಧವೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಅವರು, ಜಾಣ್ಮೆಯಿಂದಲೇ ಟೀಕೆಗಳಿಗೆ ಉತ್ತರಿಸುವ ಮೂಲಕ ವರಿಷ್ಠರಿಗೆ ತಿರುಗೇಟು ನೀಡುತ್ತಿದ್ದಾರೆ.

ನಿಖಿಲ್​​​ ನಾಮಪತ್ರ ಸಲ್ಲಿಸಿದ ಬಳಿಕ ಸೋಮವಾರ(ನಿನ್ನೆ) ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿಯವರು ತೆರೆದ ಬಸ್‌ನಲ್ಲಿ ನಿಂತು ಜನರನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಬಿಜೆಪಿ ನಾಯಕರು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯುಡಿಯೂರಪ್ಪ ಪ್ರಚಾರಕ್ಕೆ ಕೂಡ ಬರುತ್ತಾರಂತೆ. ನಾನು ಕಳೆದ ಬಜೆಟ್ ಘೋಷಿಸಿದಾಗ ಮಂಡ್ಯ ಬಜೆಟ್ ಎಂದು ಟೀಕಿಸಿದ ನೀವು ಯಾವ ನೈತಿಕತೆಯಿಂದ ಮತ ಕೇಳಲು ಬರುತ್ತೀರಿ ಎಂದು ಪ್ರಶ್ನಿಸಿದರು.

ಹಾಗೆಯೇ ನಾನು ಅಧಿಕಾರ ದುರುಪಯೋಗ ಮಾಡಿಕೊಂಡಿರುವುದಾಗಿ ದೂರು ನೀಡಿದ್ದಾರೆ. ನಾನು ಅಂತಹ ರಾಜಕಾರಣ ಮಾಡಿಲ್ಲ. ಜನರ ಪ್ರೀತಿಯಿಂದ ಅಧಿಕಾರ ಮಾಡುತ್ತಿದ್ದೇನೆ. ಜಿಲ್ಲೆಯ ರೈತ ಆತ್ಮಹತ್ಯೆ ಮಾಡಿಕೊಂಡಾಗ ಮತ್ತು ಬಸ್ ದುರಂತ ಸಂಭವಿಸಿದಾಗ ನಾನು ಆಗಮಿಸಿದ್ದೆ. ಯಾರೋ ಮೊನ್ನೆ ನಾವು ಜೋಡೆತ್ತು ಎಂದರತೇ, ಮಂಡ್ಯದಲ್ಲಿ ಬಸ್ ದುರಂತ ಸಂಭವಿಸಿದಾಗ ಎಲ್ಲಿ ಹೋಗಿದ್ದರು. ​​ನಾನು, ಡಿಕೆಶಿ ನಿಜವಾದ ಜೋಡೆತ್ತು. ಬೇರೆ ಜೋಡೆತ್ತು ಬಂದು ನೀವು ಬೆಳೆದ ಬೆಳೆಯನ್ನು ತಿಂದು ಹೋಗುತ್ತವೆ. ಅವು ಕಳೆತ್ತುಗಳು ಎನ್ನುವ ಮೂಲಕ ಮತ್ತೇ ನಟ ದರ್ಶನ್, ಯಶ್‌ಗೆ ಟಾಂಗ್ ನೀಡಿದರು.

ಸಿಎಂ ಕುಮಾರಸ್ವಾಮಿಯವರ ಈ ಹೇಳಿಕೆ ಈಗ ಭಾರೀ ವಿವಾದಕ್ಕೀಡಾಗಿದೆ. ಮಂಡ್ಯದ ರೈತರೊಬ್ಬರು ಸಿಎಂ ‘ನಾನು ಮತ್ತು ಡಿಕೆಶಿ ಜೋಡೆತ್ತು’ ಎಂದಿದ್ದರ ಬಗ್ಗೆ ಲೇವಡಿ ಮಾಡಿದ್ದಾರೆ. ಇವೆರಡು ನಿಜವಾದ ಜೋಡೆತ್ತುಗಳಲ್ಲ, ಕಳ್ಳೆತ್ತುಗಳು. ಇವು ಒಂಟೆತ್ತುಗಳು, ಇವನ್ನ ನಾವೇ ಕಳೆದ ಅಯ್ಯನ ಗುಡಿ ಜಾತ್ರೆಯಲ್ಲಿ ತಂದು ಜೊತೆಯಾಕಿದ್ದೀವಿ‌. ಇದರಲ್ಲಿ ಒಂದು ಹಾಸನದ ಕರಿ ಎತ್ತು, ಮತ್ತೊಂದು ಕನಕಪುರದ ಬಿಳಿ ಎತ್ತು ಎಂದು ವ್ಯಂಗ್ಯವಾಡಿದ್ದಾರೆ.

ಜತೆಗೆ ಹಾಸನದ ಕರಿ ಎತ್ತಿನ‌ ಜೊತೆ ಸೇರಿಕೊಂಡು ಈ ಕನಕಪುರದ ಬಿಳಿ ಎತ್ತು ಕೆಟ್ಟೋಗಿದೆ. ನಾವು ಕನಕಪುರ ಬಿಳಿ ಎತ್ತಿಗೆ ಕಿವಿ ಮಾತು ಹೇಳ್ತಿದ್ದೇವೆ. ಕಳೆದ ಎರಡು ವರ್ಷದ ಹಿಂದೇ ಕಾಂಗ್ರೆಸ್​​ ಸರ್ಕಾರಕ್ಕೆ ಸಿಎಂ ಕುಮಾರಸ್ವಾಮಿ ಮಾಡಿದ ದ್ರೋಹ ಮರೆತುಬಿಟ್ರಾ ಎಂದು ರೈತ ಸಚಿವ ಡಿ.ಕೆ ಶಿವಕುಮಾರ್​​ ಅವರಿಗೆ ಪ್ರಶ್ನಿಸಿದ್ದಾರೆ. ಈ ರೈತನ ವ್ಯಂಗ್ಯದ ಲೇವಡಿ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್​​ ಆಗಿದೆ.

Comments are closed.