ಕರ್ನಾಟಕ

‘ಲೋಕಸಭೆ ಚುನಾವಣೆಯಲ್ಲಿ 22 ಸ್ಥಾನಗಳಲ್ಲಿ ಗೆಲವು ಸಾಧಿಸಿದರೆ 24 ಗಂಟೆಯೊಳಗೆ ಸಮ್ಮಿಶ್ರ ಸರ್ಕಾರ ಉರುಳುತ್ತೆ’

Pinterest LinkedIn Tumblr

ಬೆಳಗಾವಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ 22 ಸ್ಥಾನಗಳಲ್ಲಿ ಗೆಲವು ಸಾಧಿಸಿದರೆ 24 ಗಂಟೆಯೊಳಗೆ ಸಮ್ಮಿಶ್ರ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈತ್ರಿ ಸರ್ಕಾರದ ವಿರುದ್ಧ ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ. ಮೈತ್ರಿ ಕುರಿತು ಆಯಾ ಪಕ್ಷಗಳ ಮುಖಂಡರಲ್ಲೇ ಅಸಮಾಧಾನವಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತದೆ. ಆ ನಂತರ ರಾಜ್ಯದಲ್ಲಿ ಮೈತ್ರಿ ಸರ್ಕಾರ ಉಳಿಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ ಲೋಕಸಭಾ ವ್ಯಾಪ್ತಿಯ ಸವದತ್ತಿ ತಾಲೂಕಾ ಯರಗಟ್ಟಿಯಲ್ಲಿ ನಿನ್ನೆ ಹಮ್ಮಿಕೊಂಡ ಮೋದಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಜೊತೆ 20-20 ತಿಂಗಳ ಆಳ್ವಿಕೆ ಒಪ್ಪಂದ ಮಾಡಿಕೊಂಡು ನಮ್ಮ ಬೆನ್ನಿಗೆ ಚೂರಿ ಹಾಕಿದ್ದರು. ಇಂದು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಂಠಿತಗೊಂಡಿದೆ. ನೀರಾವರಿ ಯೋಜನೆಗಳು ನಿಂತು ಹೋಗಿವೆ. ಸರ್ಕಾರ ವರ್ಗಾವಣೆಯ ವ್ಯವಹಾರದಲ್ಲಿ ಮೈಮರೆತಿದೆ. ಭ್ರಷ್ಟಾಚಾರದಲ್ಲಿ ತೊಡಗಿದೆ. ಇಂಥ ಸರ್ಕಾರಕ್ಕೆ ಜನರು ತಕ್ಕಪಾಠ ಕಲಿಸಬೇಕು ಎಂದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆದಷ್ಟು ಬೇಗ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು. ರಾಜ್ಯದಲ್ಲಿ ಬಹುತೇಕ ಹಾಲಿ ಸಂಸದರಿಗೆ ಟಿಕೆಟ್ ನೀಡುವ ಉದ್ದೇಶವಿದೆ. ಬದಲಾವಣೆಯಾದರೆ ಒಂದೆರಡು ಕ್ಷೇತ್ರಗಳಲ್ಲಿ ಮಾತ್ರ ಆಗಬಹುದು ಎಂದು ಹೇಳಿದರು. ರಾಜ್ಯದಲ್ಲಿ 22 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಬಿಜೆಪಿ ಸಾಕಷ್ಟು ಪ್ರಯತ್ನ ನಡೆಸುತ್ತಿದೆ ಎಂದರು.

ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಒಂಭತ್ತು ತಿಂಗಳು ಕಳೆದರೂ ಇದುವರೆಗೆ ಸಾಲ ಮನ್ನಾ ಮಾಡದೆ ಜನರಿಗೆ ನಂಬಿಕೆ ದ್ರೋಹ ಮಾಡಿದೆ ಎಂದು ಆರೋಪಿಸಿದರು.

Comments are closed.