ಬಾಗಲಕೋಟೆ: ದೇವೇಗೌಡರಿಗೆ 28 ಮಕ್ಕಳಿದ್ದಿದ್ದರೆ ಎಲ್ಲರನ್ನೂ ಚುನಾವಣೆಗೆ ನಿಲ್ಲಿಸುತ್ತಿದ್ದರು. ತಮಗೆ 28 ಮಕ್ಕಳು ಹುಟ್ಟಲಿಲ್ಲವಲ್ಲ ಎಂದು ಈಗ ದುಃಖಿಸುತ್ತಿರಬಹುದು ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ದೇವೇಗೌಡರು ಕುಟುಂಬ ರಾಜಕಾರಣ ಮಾಡುತ್ತಾರೆ ಎಂದು ಬಿಜೆಪಿ ಸದಾ ಆರೋಪ ಮಾಡುತ್ತಲೇ ಇದೆ. ಇಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಬಾಗಲಕೋಟೆಯಲ್ಲಿ ಮಾತನಾಡಿ, ದೇವೇಗೌಡರ ಕುಟುಂಬದ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ದೇವೇಗೌಡರಿಗೆ 14 ಮಕ್ಕಳಿದ್ದಿದ್ದರೂ 14 ಸೊಸೆಯರ ಜೊತೆ 28 ಕ್ಷೇತ್ರಗಳಲ್ಲಿ ಕಣಕ್ಕಿಳಿಸುತ್ತಿದ್ದರು ಎಂದು ಅಪಹಾಸ್ಯ ಮಾಡಿದ ಅವರು, ನಾನು ಅವರ ಕುಟುಂಬದ ಬಗ್ಗೆ ಮಾತನಾಡಲ್ಲ ಎಂದರು.
ರೇವಣ್ಣ ಕ್ಷಮೆ ಕೇಳಬೇಕು:
ಸಚಿವ ರೇವಣ್ಣ ಸುಮಲತಾ ಅವರಿಗೆ ಅಪಮಾನ ಮಾಡಿದ್ದಾರೆ. ಸುಮಲತಾ ಸೇರಿದಂತೆ ಇಡೀ ಮಹಿಳಾ ಕುಲಕ್ಕೆ ಅವರು ಕ್ಷಮೆ ಕೇಳಬೇಕು. ಕ್ಷಮೆ ಕೇಳದಿದ್ದರೆ ದೇವೇಗೌಡರು ಜೆಡಿಎಸ್ ಪಕ್ಷದ ತೆನೆ ಹೊತ್ತ ಮಹಿಳೆ ಚಿಹ್ನೆ ಹಾಕುವ ಅರ್ಹತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಮುಂದುವರೆದು ಮಾತನಾಡಿದ ಅವರು, ನಿನ್ನೆ ಮಾಧ್ಯಮದಲ್ಲಿ ಒಂದು ವಿಚಾರ ನೋಡಿದೆ. ಒಂದು ವೇಳೆ ರೇವಣ್ಣ ಸತ್ತಿದ್ದರೆ ಮರುದಿನವೇ ಭವಾನಿ ರೇವಣ್ಣ ಅಭ್ಯರ್ಥಿಯಾಗುತ್ತಿದ್ದರು ಎಂದು ಮಂಡ್ಯದ ಯುವಕನೊಬ್ಬ ಹೇಳುತ್ತಿದ್ದ. ಸುಮಲತಾ ನಾಟಕ ಮಾಡುತ್ತಾರೆ ಅಂತಾ ರೇವಣ್ಣ ಹೇಳುತ್ತಾರೆ. ನೀವೇನು ಮಾಡುತ್ತಿದ್ದೀರಿ ಎಂದು ರೇವಣ್ಣಗೆ ತಿರುಗೇಟು ನೀಡಿದರು.
ಸುಮಲತಾ ಕಣ್ಣೀರು ಹಾಕುತ್ತಿರುವುದಕ್ಕೆ ಇಡೀ ರಾಜ್ಯವೇ ಮರುಗುತ್ತಿದೆ. ಆದರೆ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಮಾತ್ರ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ರಾಜಕಾರಣದಲ್ಲಿ ನಮ್ಮ ಸ್ಥಾನ ನೋಡಿಕೊಂಡು ಮಾತನಾಡಬೇಕು. ನಾವು ರೇವಣ್ಣನ ಹೇಳಿಕೆಯನ್ನು ಉಗ್ರವಾಗಿ ಖಂಡಿಸುತ್ತೇವೆ. ರೇವಣ್ಣ ಸುಮಲತಾರ ಬಳಿ ಕ್ಷಮೆ ಕೇಳಲಿ ಎಂದರು. ದೇವೇಗೌಡರು ಮತ್ತು ಅವರ ಕುಟುಂಬದವರು ತಮ್ಮನ್ನು ತಾವು ಮಣ್ಣಿನ ಮಕ್ಕಳು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಉಳಿದವರೇನು ಕಲ್ಲಿನ ಮಕ್ಕಳೇ ಎಂದು ಪ್ರಶ್ನಿಸಿದರು.
Comments are closed.