ಕರ್ನಾಟಕ

ರಾಜ್ಯದಲ್ಲಿ 22 ಸ್ಥಾನ ಗೆಲ್ಲುವವರೆಗೂ ಮನೆ ಸೇರುವುದಿಲ್ಲ; ಯಡಿಯೂರಪ್ಪ

Pinterest LinkedIn Tumblr


ಹಾವೇರಿ: ಲೋಕಸಭಾ ಚುನಾವಣೆಯಲ್ಲಿ 22 ಸ್ಥಾನ ಗೆಲ್ಲುವವರೆಗೂ ಮನೆ ಸೇರುವುದಿಲ್ಲ. ಚುನಾವಣೆ ಮುಗಿಯುವವರೆಗೂ ಮನೆಯ ಯೋಚನೆಯನ್ನೂ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಶಪಥ ಮಾಡಿದ್ದಾರೆ.

ಹಾವೇರಿಯಲ್ಲಿ ಮೋದಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಗೆ ಸರಿಸಾಟಿ ಯಾರೂ ಇಲ್ಲ. ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗುವುದು ಅಷ್ಟೇ ಸತ್ಯ. ಅದಕ್ಕಾಗಿ ಕರ್ನಾಟಕದಿಂದ 22 ಸೀಟ್ ಗೆಲ್ಲಿಸೋದು ನಮ್ಮ ಜವಾಬ್ದಾರಿ. 3 ದಿನದಿಂದ ಬಂಡೀಪುರ ಕಾಡು ಹೊತ್ತಿ ಉರಿಯುತ್ತಿದೆ. ಹೆಲಿಕಾಪ್ಟರ್ ಮೂಲಕ ನೀರನ್ನು ಸಿಂಪಡಿಸಬಹುದಿತ್ತು. ನೀರನ್ನು ಸಿಂಪಡಿಸಿದ್ದರೆ ಕಾಡು ಉಳಿಯುತ್ತಿತ್ತು. ಆದರೆ, ರಾಜ್ಯ ಸರ್ಕಾರ ಸತ್ತು ಹೋಗಿದೆ ಎಂದು ಕಿಡಿಕಾರಿದ್ದಾರೆ.

ಬೆಂಗಳೂರು ಏರೋ ಶೋನಲ್ಲಿ ಕಾರುಗಳಿಗೆ ಬೆಂಕಿ ಹತ್ತಿದ್ದಾಗ ಅಲ್ಲಿ ಯಾವುದೇ ವ್ಯವಸ್ಥೆ ಇರಲಿಲ್ಲ. ಇದು ಸರ್ಕಾರದ ಆಡಳಿತದ ದುಸ್ಥಿತಿ. ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಆದರೆ, ಸಚಿವರು ಹೊಡೆದಾಡಿಕೊಂಡು ಸಾಯುತ್ತಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿಯನ್ನು ಮೋದಿ ಸುಧಾರಿಸಿದ್ದಾರೆ. ಈ ದೇಶದ ದಲಿತರಿಗೆ ಕಾಂಗ್ರೆಸ್ ಬಗ್ಗೆ ವಿಶ್ವಾಸ ಇಲ್ಲ. ಅಧಿಕಾರಕ್ಕೆ ಬಂದು 24 ಘಂಟೆ ಸಾಲಮನ್ನಾ ಮಾಡುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದರು. ಆದರೆ, ಎಲ್ಲ ಅಭಿವೃದ್ಧಿ ಕೆಲಸಗಳನ್ನೂ ನಿಲ್ಲಿಸಿದ್ದಾರೆ. ಪ್ರತಿನಿತ್ಯ ವರ್ಗಾವಣೆ ದಂಧೆ ನಡೆಸಿದ್ದಾರೆ. ಪ್ರತಿಯೊಂದು ವರ್ಗಾವಣೆಗೆ 15ರಿಂದ 20 ಲಕ್ಷ ವಸೂಲಿ ಮಾಡುತ್ತಿದ್ದಾರೆ ಎಂದು ಬಿಎಸ್​ವೈ ಆರೋಪಿಸಿದ್ದಾರೆ.

ಇನ್ನೂ 7 ವಾರ ಸಮಯ ಕೊಡಿ. ನಮ್ಮ ತಪ್ಪಿನಿಂದ ಬಹಳ ಹತ್ತಿರದಲ್ಲಿ ಅಧಿಕಾರ ವಂಚಿತರಾಗಿದ್ದೇವೆ. ಹೆಚ್ಚು ಸ್ಥಾನಗಳನ್ನು ಪಡೆದ ನಾವು ವಿರೋಧಪಕ್ಷದಲ್ಲಿ ಕುಳಿತಿದ್ದೇವೆ. ಕಡಿಮೆ ಸೀಟ್ ಪಡೆದ ಜೆಡಿಎಸ್​ ಅಧಿಕಾರ ನಡೆಸುತ್ತಿದೆ. ನಾನು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಜೆಡಿಎಸ್​- ಕಾಂಗ್ರೆಸ್​ ಹೊಂದಾಣಿಕೆ ಮಾಡಿಕೊಂಡಿದೆ. ಈ ಬಾರಿ ಮನೆಯ ಮುಂದೆ ಕಮಲದ ದೀಪ ಹಚ್ಚುವ ಮೂಲಕ ದೀಪಾವಳಿ ಆಚರಿಸಬೇಕು ಎಂದು ಹಾವೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.

Comments are closed.