ಕರ್ನಾಟಕ

ಚಿಂತಾಮಣಿ ವಿಷ ಪ್ರಸಾದಕ್ಕೂ ಅನೈತಿಕ ಸಂಬಂಧ ಕಾರಣ

Pinterest LinkedIn Tumblr


ಚಿಕ್ಕಬಳ್ಳಾಪುರ: ಇಬ್ಬರು ಅಮಾಯಕರನ್ನು ಬಲಿ ಪಡೆದ ಚಿಂತಾಮಣಿ ಗಂಗಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತಕ್ಕೆ ಅನೈತಿಕ ಸಂಬಂಧ ಕಾರಣವಾಗಿದ್ದು, ಪ್ರಸಾದಕ್ಕೆ ವಿಷ ಹಾಕಿರುವುದು ನಿಜ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಈ ಸಂಬಂಧ ಇಂದು ಚಿಕ್ಕಬಳ್ಳಾಪುರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ವಲಯ ಐಜಿಪಿ ಬಿ ದಯಾನಂದ್ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಆರೋಪಿಗಳಾದ ಲಕ್ಷ್ಮೀ (46), ಅಮರಾವತಿ(25), ಪಾರ್ವತಮ್ಮ(40) ಹಾಗೂ ಲೋಕೇಶ್ ನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಲೋಕೇಶ್ ಜೊತೆ ಆರೋಪಿ ಲಕ್ಷ್ಮೀ ಅಕ್ರಮ ಸಂಬಂಧ ಹೊಂದಿದ್ದರು ಎಂದು ದಯಾನಂದ್ ಅವರು ತಿಳಿಸಿದ್ದಾರೆ.
ಚಿಂತಾಮಣಿ ನಿವಾಸಿ ಲಕ್ಷ್ಮಿ ಕಳೆದ 10 ವರ್ಷಗಳಿಂದ ದೇವಸ್ಥಾನದ ಪಕ್ಕದಲ್ಲಿರುವ ಲೋಕೇಶ್ ಎಂಬುವವನ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಳು. ತಮ್ಮ ದೈಹಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗೌರಿಯನ್ನು ಕೊಲ್ಲಲು ಸಂಚುರೂಪಿಸಿ ಪ್ರಸಾದಕ್ಕೆ ವಿಷ ಬೆರೆಸಿದ್ದಾರೆ. ಇದಕ್ಕೆ ಲೋಕೇಶ್ ಸಹ ಸಾಥ್ ನೀಡಿದ್ದಾರೆ ಎಂದರು.
ಗಂಗಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿದ್ದ ಆರು ಮಂದಿ ತೀವ್ರ ಅಸ್ವಸ್ಥಗೊಂಡು ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆರ್‌ಎಲ್‌ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕವಿತಾ ಮತ್ತು ಸರಸ್ವತಿ ಎಂಬುವವರು ಮೃತಪಟ್ಟಿದ್ದರು.

Comments are closed.