ಅಂತರಾಷ್ಟ್ರೀಯ

ಪಾಕ್ ನಲ್ಲಿ ಹೊಸ ಇತಿಹಾಸ ಬರೆದ ಹಿಂದೂ ಮಹಿಳೆ!

Pinterest LinkedIn Tumblr


ಕರಾಚಿ: ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯೊಬ್ಬರು ಇದೇ ಮೊದಲ ಬಾರಿಗೆ ಸಿವಿಲ್ ಕೋರ್ಟ್​ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ. ಸುಮನ ಕುಮಾರಿ ಹೆಸರಿನ ಯುವ ನ್ಯಾಯಾಧೀಶೆಯು ಖಂಬರ್-ಶಾಹ್​ದಾದ್​ಕೋಟ್​ ಜಡ್ಜ್​​ ಆಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ.

ಸುಮನ ಮೂಲತಃ ಖಂಬರ್-ಶಾಹ್​ದಾದ್​ಕೋಟ್​ ಜಿಲ್ಲೆಯವರಾಗಿದ್ದು, ಇದೀಗ ಇದೇ ಜಿಲ್ಲೆಯ ಕೋರ್ಟ್​ಗೆ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ತನ್ನ ಊರಿನಲ್ಲಿ ನ್ಯಾಯದ ಘನತೆಯನ್ನು ಎತ್ತಿ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್​ನಲ್ಲಿ ಎಲ್​ಎಲ್​ಬಿ ಕಾನೂನು ಪದವಿಯನ್ನು ಪಡೆದಿರುವ ಸುಮನ, ಬಳಿಕ ಕರಾಚಿಯ ಝಬಿಸ್ತ್​ ಯುನಿವರ್ಸಿಟಿಯಲ್ಲಿ ಕಾನೂನಿನಲ್ಲಿ ಮಾಸ್ಟರ್​ ಡಿಗ್ರಿ ಪಡೆದುಕೊಂಡಿದ್ದಾರೆ.

ಮಗಳಿಗೆ ಪಾಕ್​ನಲ್ಲಿ ಉನ್ನತ ಸ್ಥಾನ ಲಭಿಸಿರುವುದಕ್ಕೆ ಸಂತಸ ಹಂಚಿಕೊಂಡಿರುವ ತಂದೆ ಪವನ್ ಕುಮಾರ್​ ಬೊಡನ್, ಮಗಳು ಕಷ್ಟಪಟ್ಟು ಈ ಸ್ಥಾನಕ್ಕೇರಿದ್ದಾಳೆ. ಸವಾಲಿನ ವೃತ್ತಿಯನ್ನು ಆಕೆ ಆರಿಸಿಕೊಂಡಿದ್ದು, ಈ ಮೂಲಕ ಪ್ರಮಾಣಿಕಳಾಗಿ ಕೆಲಸ ಮಾಡುತ್ತಾಳೆ ಎಂಬ ನಂಬಿಕೆಯಿದೆ ಎಂದು ತಿಳಿಸಿದ್ದಾರೆ.

ಸುಮನ ಅವರ ತಂದೆ ಪಾಕಿಸ್ತಾನದಲ್ಲಿ ನೇತ್ರ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹಾಗೆಯೇ ಸಹೋದರಿ ಸಾಫ್ಟ್​ವೇರ್​ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಯುವ ನ್ಯಾಯಾಧೀಶೆಯ ಮತ್ತೊಬ್ಬ ಸಹೋದರಿ ಚಾರ್ಟೆಡ್​ ಅಕೌಂಟೆಡ್​ ಹುದ್ದೆಯಲ್ಲಿದ್ದಾರೆ.

ಕಾನೂನಿನ ವಿಷಯವಲ್ಲದೆ, ಸಂಗೀತವನ್ನು ಸುಮನ ತುಂಬಾ ಇಷ್ಟ ಪಡುತ್ತಾರೆ. ಇವರ ನೆಚ್ಚಿನ ಗಾಯಕಿ ಭಾರತದ ಲತಾ ಮಂಗೇಶ್ಕರ್​ ಎಂಬುದು ವಿಶೇಷ. ಹಾಗೆಯೇ ಪಾಕ್ ಮೂಲದ ಬಾಲಿವುಡ್​ ಗಾಯಕ ಅತಿಫ್ ಅಸ್ಲಂ ಅವರ ಹಾಡುಗಳೆಂದರೆ ಯುವ ನ್ಯಾಯಾಧೀಶೆಗೆ ಅಚ್ಚುಮೆಚ್ಚು.

Comments are closed.