ಕರ್ನಾಟಕ

ಭೂಪೆನ್ ಹಜಾರಿಕಗೆ ನೀಡಿದ ‘ಭಾರತ ರತ್ನ’ಕ್ಕೆ ಆಕ್ಷೇಪ; ಖರ್ಗೆ ವಿರುದ್ಧ ದೂರು!

Pinterest LinkedIn Tumblr


ಅಸ್ಸಾಂ​: ಗಾಯಕ ಭೂಪೆನ್ ಹಜಾರಿಕ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ದೂರು ದಾಖಲಾಗಿದೆ. ನಡೆದಾಡುವ ದೇವರೆಂದೇ ಕರೆಯುವ ಸಿದ್ದಗಂಗಾ ಶ್ರೀಗಳಿಗೆ ಭಾರತ ನೀಡದೇ, ಭೂಪೆನ್ ಹಜಾರಿಕ ಅವರಿಗೆ ನೀಡಿದ್ದನ್ನು ಖರ್ಗೆ ಪ್ರಶ್ನಿಸಿದ್ದರು. ಅಲ್ಲದೇ ಕೇವಲ ಒಬ್ಬ ಗಾಯಕನಿಗೆ ನೀಡೋ ಬದಲು ಆಧ್ಯಾತ್ಮ ಗುರುಗಳಾದ, ಶಿವಕುಮಾರಸ್ವಾಮಿಗಳಿಗೆ ಭಾರತ ರತ್ನ ನೀಡಬಹುದಿತ್ತು ಎಂದು ಮಲ್ಲಿಕಾರ್ಜುನ್​ ಖರ್ಗೆ ಅಭಿಪ್ರಾಯಪಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಆರ್​ಟಿಐ ಕಾರ್ಯಕರ್ತ ರಾಜು ಮಹಾಂತ ಎಂಬಾತ ಅಸ್ಸಾಂನ ಮೊರಿಗಾನ್​ ಪೊಲೀಸ್​ ಠಾಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ದೂರು ದಾಖಲಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಅಸ್ಸಾಂ ಜನತೆಯ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಹೀಗಾಗಿ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ಕವಿ, ಸಾಹಿತಿ, ಗಾಯಕ ಹಾಗೂ ಸಂಗೀತ ಸಂಯೋಜಕರು ಸಹ ಆಗಿದ್ದ ಹಜಾರಿಕರವರು ಕಲಾ ವಿಭಾಗಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಅವರ ಬಗ್ಗೆ ಎಲ್ಲರಿಗೂ ಹೆಮ್ಮೆಯಿದೆ. ಆದರೆ ಅವರನ್ನು ಕೇವಲವಾಗಿ ನೋಡಿದ ಮಲ್ಲಿಕಾರ್ಜುನ ಖರ್ಗೆ ಕೂಡಲೇ ಕ್ಷಮೆ ಕೇಳಬೇಕು ಎಂದು ಬಿಜೆಪಿ ಕಾರ್ಯಕರ್ತ ಹಿಮಂತ ಬಿಸ್ವಾ ಒತ್ತಾಯಿಸಿದ್ಧಾರೆ.

ಇನ್ನೊಂದೆಡೆ ಅಸ್ಸಾಂ ವಿದ್ಯಾರ್ಥಿಗಳ ಸಂಘವು, ಗಾಯಕ ಭುಪೆನ್​ ಹಜಾರಿಕಾ ಅವರಿಗೆ ನೀಡಿರುವ ಭಾರತ ರತ್ನ ಪ್ರಶಸ್ತಿ ವಿಚಾರದಲ್ಲಿ ಕಾಂಗ್ರೆಸ್​ ರಾಜಕೀಯ ಮಾಡಬಾರದು ಎಂದು ಹೇಳಿದೆ.

ಈ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ, ಭೂಪೆನ್​ ಹಜಾರಿಕ ಅವರು ನಮ್ಮ ದೇಶದ ಅತ್ಯಂತ ಪ್ರತಿಭಾನ್ವಿತ ಕಲಾವಿದರಲ್ಲಿ ಒಬ್ಬರು. ಸಂಗೀತ, ಕವಿತೆ, ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ಧಾರೆ. ಅವರು ಅಸ್ಸಾಂನ ಸಂಸ್ಕೃತಿ ಮತ್ತು ಕಲೆಯನ್ನು ವಿಶ್ವಕ್ಕೆ ಪರಿಚಯಿಸಿದ್ಧಾರೆ. ಹಜಾರಿಕ ಅವರು ಬರೆದಿರುವ ಕೃತಿಗಳು ನಮ್ಮ ರಾಷ್ಟ್ರದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಕಲೆ ಮತ್ತು ಸಂಗೀತ ಕ್ಷೇತ್ರದಲ್ಲಿ ಅವರ ಸಾಧನೆ ಇಂದಿಗೂ ಅಜರಾಮರವಾಗಿದೆ. ಆದರೆ, ಶ್ರೀಗಳಿಗೆ ನೀಡದೇ, ಇವರಿಗೆ ನೀಡಿದ ಕೇಂದ್ರದ ನಡೆಯ ಬಗ್ಗೆ ನನಗೆ ಆಕ್ಷೇಪವಿತ್ತು ಎಂದು ತಿಳಿಸಿದ್ಧಾರೆ.

Comments are closed.