ಕರ್ನಾಟಕ

ಶೋಕಾಸ್​ ನೋಟಿಸ್​ಗೆ ಹೆದರುವುದಿಲ್ಲ, ರಾಜೀನಾಮೆ ನೀಡುವುದು ಮುಖ್ಯಮಂತ್ರಿಗೆ ಬಿಟ್ಟಿದ್ದು; ಶಾಸಕ ಎಸ್​.ಟಿ. ಸೋಮಶೇಖರ್​

Pinterest LinkedIn Tumblr

ಬೆಂಗಳೂರು: ಸಿದ್ದರಾಮಯ್ಯ ಅವರೇ ಈಗಲೂ ನಮ್ಮ ಮುಖ್ಯಮಂತ್ರಿ ಎಂಬ ಶಾಸಕ ಎಸ್​.ಟಿ. ಸೋಮಶೇಖರ್​ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿದೆ. ಸೋಮಶೇಖರ್​ ಹೇಳಿಕೆಗೆ ಪ್ರತಿಕ್ರಿಸಿದ್ದ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಕಾಂಗ್ರೆಸ್​ ಲಕ್ಷ್ಮಣ ರೇಖೆಯನ್ನು ದಾಟುತ್ತಿದೆ. ಹೀಗೇ ಆದರೆ ರಾಜೀನಾಮೆ ನೀಡಲು ಸಿದ್ಧ ಎಂದು ಖಡಕ್​ ವಾರ್ನಿಂಗ್​ ನೀಡಿದ್ದರು. ನಂತರ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಬಹಿರಂಗವಾಗಿ ಮೈತ್ರಿ ವಿರುದ್ಧ ಹೇಳಿಕೆ ನೀಡುವ ಶಾಸಕರಿಗೆ ಶೋಕಾಸ್​ ನೊಟೀಸ್​ ಜಾರಿ ಮಾಡುವುದಾಗಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಸೋಮಶೇಖರ್​​ ಶೋಕಾಸ್​ ನೊಟೀಸ್​ಗೆ ಹೆದರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ನ್ಯೂಸ್​ 18 ಕನ್ನಡದ ಜತೆ ಮಾತನಾಡಿದ ಎಸ್​.ಟಿ. ಸೋಮಶೇಖರ್​ ತಮ್ಮ ಹೇಳಿಕೆಗೆ ತಾವು ಬದ್ಧ, ಯಾವುದೇ ಕಾರಣಕ್ಕೆ ಹಿಂದೆ ಸರಿಯುವ ಮಾತಿಲ್ಲ ಎಂದಿದ್ದಾರೆ. “ನಾನು ನೀಡಿದ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಕೆಪಿಸಿಸಿ ಶೋಕಾಸ್​ ನೊಟೀಸ್​ ಜಾರಿಗೊಳಿಸಿದರೆ ನಾನು ಹೆದರುವುದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜೀನಾಮೆ ನೀಡುವ ವಿಚಾರ ಅವರಿಗೆ ಬಿಟ್ಟದ್ದು,” ಎಂದು ಸೋಮಶೇಖರ್​ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಕಾಂಗ್ರೆಸ್​ ಪಕ್ಷದೊಳಗೆ ಕೇಳಿ ಬರುತ್ತಿರುವ ಪ್ರಬಲ ಕೂಗನ್ನು ಮತ್ತೆ ಎತ್ತಿ ಹಿಡಿದ್ದಾರೆ.

ಮುಂದುವರೆದ ಅವರು ತಾವು ಯಾವುದೇ ತಪ್ಪು ಮಾಡಿಲ್ಲ, ಹೀಗಿರುವಾಗ ಮಾತು ಹಿಂದೆ ಪಡೆಯುವ ಪ್ರಶ್ನೆಯೇ ಬರುವುದಿಲ್ಲ ಎಂದಿದ್ದಾರೆ. ಜತೆಗೆ ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರೆ ನಾನು ಈಗಲೇ ನೀಡುತ್ತೇನೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳನ್ನು ಇಂದ ಭೇಟಿ ಮಾಡುವುದಾಗಿಯೂ ಸೋಮಶೇಖರ್​ ಹೇಳಿದ್ದಾರೆ.

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಈ ಘಟನೆ ಭಾರೀ ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಈ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ತಕ್ಷಣ ಪ್ರತಿಕ್ರಿಯಿಸಿ ಶೋಕಾಸ್​ ನೊಟೀಸ್​ ನೀಡುವುದಾಗಿ ತಿಳಿಸಿದ್ದರು. ಸೋಮಶೇಖರ್​ ಅವರ ಹೇಳಿಕೆ ಮೈತ್ರಿ ಧರ್ಮದ ವಿರುದ್ಧವಾಗಿದ್ದೆ ಶೋಕಾಸ್​ ನೊಟೀಸ್​ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದ್ದರು.

Comments are closed.