ಕರ್ನಾಟಕ

ಸಭೆಯಿಂದ ನನ್ನನ್ನು ಯಾರೂ ಆಚೆ ಹಾಕಿಲ್ಲ; ದಿನೇಶ್​ ಗುಂಡೂರಾವ್​ ಸ್ಪಷ್ಟನೆ

Pinterest LinkedIn Tumblr


ಬೆಂಗಳೂರು: ಲೋಕಸಭೆ ಚುನಾವಣೆ ಸಿದ್ಧತೆ ಕುರಿತು ಜಿಲ್ಲಾವಾರು ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಅವರನ್ನು ಹೊರಗಿಟ್ಟು ಚರ್ಚೆ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ಸಂಬಂಧಿಸಿ ದಿನೇಶ್​ ಗುಂಡೂರಾವ್​ ಸ್ಪಷ್ಟನೆ ನೀಡಿದ್ದು, ನನ್ನನ್ನು ಯಾರೂ ಸಭೆಯಿಂದ ಆಚೆ ಹಾಕಿಲ್ಲ, ನಾನೇ ಹೊರಹೋಗಿದ್ದೆ ಎಂದಿದ್ದಾರೆ.

ಚುನಾವಣೆ ಕುರಿತು ಐದು ಲೋಕಸಭೆ ಕ್ಷೇತ್ರಗಳ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಸೋತವರು, ಗೆದ್ದವರ ಜೊತೆ ಇಂದು ಸಭೆ ನಡೆಸಲಾಗಿತ್ತು. ಕೆ.ಸಿ.ವೇಣುಗೋಪಾಲ್ ಸಭೆಯಲ್ಲಿ ಪಾಲ್ಗೊಂಡಿದ್ದರೆ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಭೆಯಿಂದ ಹೊರಗಿದ್ದರು. ಮಾಹಿತಿ ಸೋರಿಕೆ ಮಾಡುತ್ತಾರೆ ಎಂಬ ಶಂಕೆ ಮೇಲೆ ಕೆಪಿಸಿಸಿ ಅಧ್ಯಕ್ಷರನ್ನೇ ಹೊರಗಿಟ್ಟು ಸಭೆ ಮಾಡಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ, ಈಗ ಅವರು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಗುಂಡೂರಾವ್​, “ವೇಣುಗೋಪಾಲ್ ನನ್ನ ಬಿಟ್ಟು ಸಭೆ ಮಾಡಿಲ್ಲ. ಅದೆಲ್ಲ ಊಹಾಪೋಹ. ನಾನು ಸಭೆಯಲ್ಲಿದ್ದರೆ, ಅವರಿಗೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಸಾಧ್ಯವಾಗದೇ ಇರಬಹುದು ಎಂಬ ಕಾರಣಕ್ಕೆ ನಾನೇ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ವೇಣುಗೋಪಾಲ್ ಅವರಿಗೆ ಹೇಳಿದ್ದೆ,” ಎಂದಿದ್ದಾರೆ.

ಮಾಧ್ಯಮದವರ ವಿರುದ್ಧ ಕಿಡಿಕಾರಿದ ಬಗ್ಗೆ ಗುಂಡೂರಾವ್​ ಕ್ಷಮೆಯಾಚಿಸಿದ್ದಾರೆ. “ನನ್ನ ಮಾತಿನಿಂದ ಮಾಧ್ಯಮದವರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಕೆಲವೊಮ್ಮೆ ಬಾಯಿ ತಪ್ಪಿ ಮಾತನಾಡುತ್ತೇವೆ. ಮಾಧ್ಯಮದವರಿಗೆ ಪ್ರಶ್ನೆ ಕೇಳುವ ಹಕ್ಕಿದೆ. ಸಾರ್ವಜನಿಕ ವಲಯದಲ್ಲಿರುವ ನಾವು ಉತ್ತರಿಸಬೇಕು. ಮಾಧ್ಯಮದವರ ಸ್ವಾತಂತ್ರ್ಯವನ್ನ ಒಪ್ಪಿಕೊಳ್ತೇನೆ. ನಾನು ಬಾಯಿ ತಪ್ಪಿ ಮಾತಾಡಿದ್ದೇನೆ,” ಎಂದಿದ್ದಾರೆ.

Comments are closed.