ರಾಷ್ಟ್ರೀಯ

ಏಪ್ರಿಲ್​ ಒಳಗೆ ವಾಹನದಲ್ಲಿ ಈ ಬಟನ್​ ಇಲ್ಲದಿದ್ರೆ ಜಪ್ತಿ!

Pinterest LinkedIn Tumblr


ಭಾರತದಲ್ಲಿ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಕೆಲ ಸಂಚಾರ ನಿಯಮಗಳನ್ನು ಜಾರಿಗೆ ತಂದಿದೆ. ಇದರ ಅನ್ವಯ ಪ್ರತಿಯೊಂದು ಸಾರ್ವಜನಿಕ ಸಾರಿಗೆಗಳಲ್ಲಿ ಕಡ್ಡಾಯವಾಗಿ VLTs ಮತ್ತು ಪ್ಯಾನಿಕ್ ಬಟನ್​ ಅನ್ನು ಅಳವಡಿಸಬೇಕೆಂದು ತಿಳಿಸಲಾಗಿದೆ. ಈ ನಿಯಮವು ಹೊಸ ವರ್ಷದಿಂದ ಜಾರಿಯಲ್ಲಿದ್ದು, ಏಪ್ರಿಲ್​ 1, 2019 ರೊಳಗೆ ಹಳೆಯ ವಾಹನಗಳಲ್ಲಿ ಪ್ಯಾನಿಕ್​ ಬಟನ್​ ಅಳವಡಿಸಲು ಗಡುವು ನೀಡಲಾಗಿದೆ.

ಜನವರಿ 1, 2019 ರ ಬಳಿಕ ನೋಂದಾಯಿತವಾಗಿರುವ ಎಲ್ಲಾ ವಾಹನಗಳಲ್ಲಿ ಈ ಬಟನ್​ ಅನ್ನು ಕಡ್ಡಾಯಗೊಳಿಸಲಾಗಿದೆ. ಕಳೆದ ಬಜೆಟ್​ ವೇಳೆಯೇ ಹೊಸ ನಿಮಯ AIS140 ಅನ್ನು ಪ್ರಸ್ತಾಪಿಸಲಾಗಿತ್ತು. ಈ ನಿಯಮದ ಅನುಸಾರ ಸಾರ್ವಜನಿಕ ವಾಹನಗಳಲ್ಲಿ ಕಡ್ಡಾಯವಾಗಿ VLTs ಮತ್ತು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಪ್ಯಾನಿಕ್ ಬಟನ್ ಅಳವಡಿಸುವುದು ನಿರ್ಬಂಧ ಮಾಡಲಾಗಿದೆ. ಆದರೆ ಈ ನಿಯಮವು ರಿಕ್ಷಾ ಮತ್ತು ಇ- ರಿಕ್ಷಾಗಳಿಗೆ ಅನ್ವಯಿಸುವುದಿಲ್ಲ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ನವೀಕರಣ ಹೇಗೆ?
ಹಳೆಯ ವಾಹನಗಳಲ್ಲಿ AIS140 ಅನ್ನು ನವೀಕರಿಸಲು ಹಲವು ಆಯ್ಕೆಗಳಿವೆ. ವಾಹನಗಳ ಮಾಲೀಕರು ಆಫ್ಟರ್ ಮಾರ್ಕೆಟ್​ ಡಿವೈಸ್​ ವೆಂಡರ್​, ಒಇಎಂ ಅನ್ನು ಅಪ್​ಡೇಟ್​ ಮಾಡಿಕೊಳ್ಳಬಹುದು. ಅಥವಾ ಯಾವುದಾದರೂ ಟ್ರಾನ್ಸ್​ಪೋರ್ಟ್​ ಎಂಡ್​ ಲಾಜಿಸ್ಟಿಕ್ ಕಂಪೆನಿಯ ಮೂಲಕ ಈ ಬಟನ್​ಗಳನ್ನು ಅಳವಡಿಸಿಕೊಳ್ಳಬಹುದು. ಅಲ್ಲದೆ ಆರ್​ಟಿಓ ಅನ್ನು ಸಂಪರ್ಕಿಸುವ ಮೂಲಕ ಬಟನ್​ ಅಳವಡಿಕೆಯ ಸಂಪೂರ್ಣ ಮಾಹಿತಿಗಳನ್ನು ಪಡೆಯಬಹುದಾಗಿದೆ.

ಏನಿದು ಪ್ಯಾನಿಕ್ ಬಟನ್?
AIS140 ಮಾನದಂಡಗಳನ್ನು ಸಂಪೂರ್ಣವಾಗಿ ಮಹಿಳೆಯರ ಸುರಕ್ಷತೆಗಾಗಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ಒಬ್ಬಂಟಿಯಾಗಿ ಪ್ರಯಾಣಿಸುವ ಮಹಿಳೆರಿಗೆ ಅಥವಾ ತೊಂದರೆಗೆ ಒಳಗಾದವರಿಗೆ ಅನುಕೂಲವಾಗಲಿದೆ. ವಾಹನಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸಿದರೆ, ಪ್ರಯಾಣಿಕರು ಪ್ಯಾನಿಕ್ ಬಟನ್​ ಅನ್ನು ಒತ್ತಬಹುದು. ಅಷ್ಟೇ ಅಲ್ಲದೆ ವಾಹನಗಳ ವೇಗವನ್ನು ನಿಯಂತ್ರಿಸಲು ಕೂಡ ಸಹಕಾರಿಯಾಗಲಿದೆ. ವಾಹನವು ಅನಿಯಮಿತ ವೇಗದಿಂದ ಚಲಿಸುತ್ತಿದ್ದರೆ ಬಟನ್​ ಒತ್ತುವ ಮೂಲಕ ಸೂಚನೆ ನೀಡಬಹುದು. ಈ ಗುಂಡಿಯನ್ನು ಒತ್ತುತ್ತಿದ್ದಂತೆ ತಕ್ಷಣವೇ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ರವಾನೆಯಾಗಲಿದೆ. ಇದರಿಂದ ವಾಹನಗಳ ಟ್ರಾಕಿಂಗ್ ಮಾಡುವುದು ಸುಲಭವಾಗಲಿದೆ.

ಯಾರು ನಿಯಂತ್ರಿಸುತ್ತಾರೆ?
ವಿಎಲ್​ಟಿಗೆ ಸೇರಿದ ವಾಹನಗಳನ್ನು ರಾಜ್ಯ ಸರ್ಕಾರ ನಿಯಂತ್ರಿಸಲಿದೆ. ಪ್ರತಿ ರಾಜ್ಯದಲ್ಲೂ ಇದರ ಕಾರ್ಯಾಚರಣೆಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಪ್ಯಾನಿಕ್​ ಗುಂಡಿಗಳನ್ನು ಒತ್ತಿದಾಗ ತಕ್ಷಣವೇ ಕಾರ್ಯಾಚರಣೆ ಕೇಂದ್ರದಲ್ಲಿ ಮಾಹಿತಿ ತಲುಪುತ್ತದೆ. ಇದರಿಂದ ವಾಹನಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಅಹಿತಕರ ಘಟನೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಒಂದು ಬಾರಿ ಬಟನ್​ ಕ್ಲಿಕ್ ಮಾಡಿದರೆ, ಆ ಪ್ರದೇಶದ ಪೊಲೀಸ್​ ಠಾಣೆಗಳಿಗೆ ಅಥವಾ ಭದ್ರತಾ ಸಿಬ್ಬಂದಿಗಳಿ ಮಾಹಿತಿ ರವಾನೆಯಾಗಲಿದೆ. ಏಪ್ರಿಲ್​ 1 ರ ನಂತರ ಪ್ಯಾನಿಕ್ ಬಟನ್​ಗಳನ್ನು ಅಳವಡಿಸದ ಸಾರ್ವಜನಿಕ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.

Comments are closed.