ಕರ್ನಾಟಕ

ಶ್ರೀಗಳಿಲ್ಲದ ಸಿದ್ಧಗಂಗಾ ಮಠ: ಭಕ್ತರಲ್ಲಿ ಕಾಡುತ್ತಿದೆ ಅನಾಥ ಪ್ರಜ್ಞೆ

Pinterest LinkedIn Tumblr


ತುಮಕೂರು: ಸಿದ್ಧಗಂಗಾ ಮಠದಲ್ಲಿ ಅನ್ನ, ಆಶ್ರಯ, ಅಕ್ಷರ ನೀಡುತ್ತಾ ಲಕ್ಷಾಂತರ ಮಕ್ಕಳ ಬಾಳಿಗೆ ಬೆಳಕಾಗಿದ್ದ ನಡೆದಾಡುವ ದೇವರು ಎಂದೇ ಹೆಸರಾಗಿದ್ದ ಪದ್ಮಭೂಷಣ ಡಾ.ಶಿವಕುಮಾರ ಸ್ವಾಮೀಜಿ ಶಿವೈಕ್ಯರಾಗಿರುವುದರಿಂದ ಮಠದ ಮಕ್ಕಳು ಮತ್ತು ಭಕ್ತರಲ್ಲಿ ಈಗ ಅನಾಥ ಪ್ರಜ್ಞೆ ಕಾಡಲಾರಂಭಿಸಿದೆ.

ಕಳೆದ 88 ವರ್ಷಗಳಿಂದ ಮಠವನ್ನು ಕಟ್ಟಿ ಬೆಳೆಸಿ, ನಾಡಿನ ಅಸಂಖ್ಯಾತ ಮಕ್ಕಳ ಬಾಳಿಗೆ ಜ್ಯೋತಿಯಾಗಿದ್ದರು. ಮಾತೃಹೃದಯಿಯಾಗಿ ಮಠಕ್ಕೆ ಬರುವ ಮಕ್ಕಳನ್ನು ಜಾತಿ, ಮತ, ಪಂಥ, ಪಂಗಡ, ಧರ್ಮ ಬೇಧವಿಲ್ಲದೆ ಜಗಜ್ಯೋತಿ ಬಸವಣ್ಣನವರ ಕಾಯಕ ತತ್ವದಂತೆ ತ್ರಿವಿಧ ದಾಸೋಹ ನೀಡುತ್ತಿದ್ದರು. ಇವನ್ಯಾರವ, ಇವನ್ಯಾರವ ಎನ್ನದೇ ಇವ ನಮ್ಮವ ಇವ ನಮ್ಮವ ಎಂದು ಎಲ್ಲರನ್ನು ಮಠಕ್ಕೆ ಸೇರಿಸಿಕೊಂಡು ಅಕ್ಷರ ಜ್ಞಾನವನ್ನು ಉಣಬಡಿಸಿದ ಶ್ರೀಗಳು ಮಕ್ಕಳಿಗೆ ತಂದೆ, ತಾಯಿಯ ಪ್ರೀತಿ ನೀಡಿ ಸಲುಹಿದ್ದರು.

ಡಾ.ಶಿವಕುಮಾರ ಸ್ವಾಮೀಜಿಗಳು ಶಿವೈಕ್ಯವಾಗಿರುವುದು ಮಠದ ಭಕ್ತ ವೃಂದಕ್ಕೆ ಹೆತ್ತ ತಾಯಿಯನ್ನೇ ಕಳೆದುಕೊಂಡಿರುವ ನೋವನ್ನು ತಂದಿದೆ. ಏನೂ ಇಲ್ಲದ ಕಾಲದಲ್ಲಿ ಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿದ ಶ್ರೀಗಳು ಮಠವನ್ನು ಮುನ್ನಡೆಸಿದ್ದೇ ಒಂದು ಇತಿಹಾಸ. ಪ್ರತಿವರ್ಷ ಹಳ್ಳಿ ಹಳ್ಳಿಗೆ ಹೋಗಿ ಭಿಕ್ಷಾಟನೆ ಮಾಡಿ ಸಂಗ್ರಹಿಸುತ್ತಿದ್ದ ದವಸ ಧಾನ್ಯಗಳಲ್ಲಿ ನಿತ್ಯವೂ ದಾಸೋಹ ನಡೆಸುತ್ತಿದ್ದರು. ಮಠಕ್ಕೆ ಬರುವ ಭಕ್ತರಿಗೆ ಅನ್ನ ಸಂತರ್ಪಣೆ, ಮಠದಲ್ಲಿ ಶಿಕ್ಷಣ ಪಡೆಯುತ್ತಿದ್ದ ಮಕ್ಕಳಿಗೆ ದಾಸೋಹ ನೀಡುತ್ತಿದ್ದ ಪರಿ ಎಂದಿಗೂ ಮರೆಯಲಾಗದು.

ಇಂದು ವಿಶ್ವಮಟ್ಟದಲ್ಲಿ ತುಮಕೂರಿನ ಸಿದ್ಧಗಂಗಾ ಮಠ ಬೆಳೆಯುವಂತೆ ಮಾಡಿರುವ ಕೀರ್ತಿ ಶ್ರೀಗಳದ್ದಾಗಿದೆ. ಮಠಕ್ಕೆ ಯಾರೇ ಬಂದರೂ ಮೊದಲು ಅವರ ಬಾಯಲ್ಲಿ ಬರುತ್ತಿದ್ದುದು ಪ್ರಸಾದ ಸೇವಿಸಿ ಎನ್ನುವ ಮಾತು ಎಂಬುದು ಭಕ್ತರ ಬಾಯಲ್ಲಿ ಕೇಳಿ ಬರುತ್ತಿರುವ ಮಾತು. ಶ್ರೀಗಳು ಅನಾರೋಗ್ಯದಿಂದ ಇದ್ದಾಗಲೂ ಪ್ರಸಾದ ಮಾಡಿಕೊಂಡು ಹೋಗಿ ಎನ್ನುತ್ತಿದ್ದುದು ಅವರು ಪ್ರಸಾದಕ್ಕೆ ನೀಡುತ್ತಿದ್ದ ಮಹತ್ವದ ಅರಿವಾಗುತ್ತಿದೆ.

ಮಾತೃ ಹೃದಯ: ಶ್ರೀಗಳು ಶಿವೈಕ್ಯರಾಗುವ ವೇಳೆಯಲ್ಲೂ ತಮ್ಮ ಸಾರ್ಥಕತೆ ಮೆರೆದಿದ್ದಾರೆ. ಕಿರಿಯ ಶ್ರೀಗಳಿಗೆ ಮೊದಲೇ, ನಾನೂ ಯಾವಾಗ ಶಿವೈಕ್ಯವಾದರೂ ಮಕ್ಕಳು ಪ್ರಸಾದ ಸೇವಿಸಿದ ಮೇಲೆಯೇ ತಿಳಿಸಬೇಕು ಎಂದು ಹೇಳಿರುವುದು ಶ್ರೀಗಳಿಗೆ ಮಕ್ಕಳ ಮೇಲೆ ಇರುವ ಮಾತೃ ಹೃದಯದ ಅರಿವಾಗುತ್ತದೆ. ಎಲ್ಲಿ ಮಕ್ಕಳಿಗೆ ಪ್ರಸಾದ ಸಿಗುವುದಿಲ್ಲವೋ ಎನ್ನವ ಭಾವನೆಯಿಂದ ಶ್ರೀಗಳು ಇಂತಹ ಮಾತಗಳನ್ನು ಹೇಳಿರಬಹುದು ಎನ್ನಲಾಗುತ್ತಿದೆ.

ಶ್ರೀ ಸಿದ್ಧಗಂಗಾ ಶ್ರೀಗಳು ಎಂದಿಗೂ ಮಠಬಿಟ್ಟು ಉಳಿದವರಲ್ಲ. ಎಷ್ಟೇ ದೂರದ ಊರಿಗೆ ಕಾರ್ಯ ನಿಮಿತ್ತ ಹೋಗಿದ್ದರೂ ರಾತ್ರಿ ಮಠಕ್ಕೆ ಬಂದು ತಂಗುತ್ತಿದ್ದರು. ಬೆಳಗ್ಗೆ ಮೂರು ಗಂಟೆಗೆ ಎದ್ದು, ತಮ್ಮ ನಿತ್ಯ ಕಾರ್ಯ ಮುಗಿಸಿ ಇಷ್ಟಲಿಂಗ ಪೂಜೆ ಮಾಡಿ 7 ಗಂಟೆಗೆ ಕಚೇರಿಗೆ ಬಂದು ದಿನಪತ್ರಿಕೆಗಳನ್ನು ಓದಿ ಭಕ್ತರಿಗೆ ದರ್ಶನ ನೀಡುತ್ತಿದ್ದರು. ದೂರದ ಊರುಗಳಿಂದ ಬಂದ ಭಕ್ತರ ಸಂಕಷ್ಟಗಳನ್ನು ಆಲಿಸುತ್ತಿದ್ದರು. ಜತೆಗೆ ಕಷ್ಟ ಎಂದು ಬರುವ ಮಕ್ಕಳಿಗೆ ಯಂತ್ರವನ್ನು ತಮ್ಮ ಕೈಯಾರೆ ಕಟ್ಟಿ 111 ವರ್ಷದ ವಯಸ್ಸಿನಲ್ಲಿಯೂ ತಾವೇ ಸ್ವತ: ದಾರವನ್ನು ಕತ್ತರಿಯಿಂದ ಕತ್ತರಿಸುತ್ತಿದ್ದ ಪರಿಯನ್ನು ಪ್ರತಿ ಭಕ್ತರೂ ಸ್ಮರಿಸುತ್ತಾರೆ.

ಇಂಥ ದೈವಿ ಪುರುಷ ನಮ್ಮ ಜತೆಯಿಲ್ಲ. ಶಿವನಲ್ಲಿ ಐಕ್ಯವಾಗಿರುವ ಶ್ರೀಗಳ ನೆನೆದು ಭಕ್ತ ವೃಂದದ ಮನ ಮಿಡಿದಿದೆ. ಶ್ರೀಗಳು ಇಲ್ಲದ ಮಠ ಅನಾಥವಾಗಿದೆಯೇ ಎನ್ನುವ ಮಾತು ಕೇಳಿ ಬಂದರೂ ಶ್ರೀಗಳಷ್ಟೇ ಮಾತೃಹೃದಯಿಯಾಗಿರುವ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಾ ಸ್ವಾಮಿಗಳು ಇನ್ನು ಮುಂದೆ ಮಠದ ಜವಾಬ್ದಾರಿಯನ್ನು ಹೊತ್ತು ಹಿರಿಯ ಶ್ರೀಗಳು ನಡೆದ ದಾರಿಯಲ್ಲಿ ಹೋಗಿ ಮಕ್ಕಳು ಮತ್ತು ಭಕ್ತರನ್ನು ಸಂತೈಸುವ ಕಾರ್ಯವನ್ನು ಮಾಡಲಿದ್ದಾರೆ.

ಹಿರಿಯ ಶ್ರೀಗಳು ಇನ್ನು ಮುಂದೆ ಮಠಕ್ಕೆ ಬಂದ ಭಕ್ತರಿಗೆ ನೇರವಾಗಿ ಆಶೀರ್ವಾದ ಮಾಡದಿದ್ದರೂ, ಅವರ ಕೃಪೆ ಅಪಾರ ಭಕ್ತ ವೃಂದದ ಮೇಲೆ ಮತ್ತು ಮಠದ ಮಕ್ಕಳ ಮೇಲೆ ಸದಾ ಇರುತ್ತದೆ ಎಂಬ ನಂಬಿಕೆ ಮಾತ್ರ ಭಕ್ತರಲ್ಲಿ ಉಳಿದಿದೆ.

ಪ್ರಸಾದ ವ್ಯವಸ್ಥೆ

ಸಿದ್ಧಗಂಗಾ ಮಠದಲ್ಲಿ 10 ಸಾವಿರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಮಂಗಳವಾರ ಶ್ರೀಗಳ ಅಂತ್ಯ ಕ್ರಿಯಾದಿಗಳು ನಡೆಯುತ್ತಿ ರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿಗಳು ಮುಂಜಾಗ್ರತೆ ವಹಿಸಿ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಿದ್ದರು. ಮಕ್ಕಳಿಗೆ ಪ್ರಸಾದ ಮತ್ತು ವಸತಿ ವ್ಯವಸ್ಥೆಯಲ್ಲಿ ಯಾವುದೇ ತೊಂದರೆ ಅಗದಂತೆ ಮುಂಜಾಗ್ರತೆ ವಹಿಸಿದ್ದರು. ಯಾರೂ ಹಸಿದು ಇರಲಿಲ್ಲ. ಎಲ್ಲರೂ ಪ್ರಸಾದ ಸೇವಿಸಿದ್ದರು.

Comments are closed.