ಕರ್ನಾಟಕ

ಖನ್​​ ಜಾರಕಿಹೊಳಿ​​ ಮೂಲಕ ರಮೇಶ್​​ ಜಾರಕಿಹೊಳಿ ಮನವೊಲಿಕೆಗೆ ಯತ್ನ!

Pinterest LinkedIn Tumblr


ಬೆಂಗಳೂರು: ಆಪರೇಷನ್​​ ಕಮಲಕ್ಕೆ ಅತೃಪ್ತ ಶಾಸಕರು ಬಲಿಯಾಗದಂತೆ ತಡೆಯಲು ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರದ ನಾಯಕರು ಆರಂಭದಿಂದಲೂ ಪ್ರಯತ್ನಿಸುತ್ತಲೇ ಇದ್ದಾರೆ. ಮೈತ್ರಿ ಸರ್ಕಾರದಿಂದ ಬೇಸತ್ತ ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ರಮೇಶ್​​ ಜಾರಕಿಹೊಳಿಯನ್ನು ಸಮಾಧಾನಗೊಳಿಸಲು ಎಲ್ಲಾ ರೀತಿಯ ಸರ್ಕಸ್​​ ಮಾಡಲಾಗುತ್ತಿದೆ. ಗೋಕಾಕ್​​ ಶಾಸಕನ ಮನವೊಲಿಕೆಗೆ ತನ್ನ ಸಹೋದರ ಲಖನ್​​ ಜಾರಕಿಹೊಳಿಯವರ ಮೂಲಕವೇ ಸಮಾಧಾನಗೊಳಿಸಲು ಮಾಜಿ ಸಿಎಂ ಸಿದ್ದರಾಮಯ್ಯನವರು ಮುಂದಾಗಿದ್ದಾರೆ. ಈ ಸಲಹೆಯನ್ನು ಖುದ್ದು ಸಚಿವ ಸತೀಶ್​​ ಜಾರಕಿಹೊಳಿಯವರೇ ಸಿದ್ದರಾಮಯ್ಯನವರಿಗೆ ನೀಡಿದ್ದಾರೆ ಎನ್ನುತ್ತಿವೆ ಮೂಲಗಳು.

ರಾಜ್ಯ ಸಮ್ಮಿಶ್ರ ಸರ್ಕಾರದ 2ನೇ ಹಂತದ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಆಘಾತ ನೀಡಲು ಅತೃಪ್ತರು ಸಿದ್ಧತೆ ನಡೆಸಿಕೊಂಡಿದ್ದರು. ಇದರ ಭಾಗವಾಗಿಯೇ ಮಾಜಿ ಪೌರಾಡಳಿತ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಲು ಮುಂದಾಗಿದ್ದರು. ಸಚಿವ ಸ್ಥಾನದಿಂದ ಕೈಬಿಟ್ಟ ವಿಚಾರವಾಗಿ ಆಪ್ತವಲಯದಲ್ಲಿ ಅಸಮಾಧಾನ ಹೊರ ಹಾಕಿದ್ದ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನವೇ ಹೋಯ್ತು, ಇನ್ನು ಶಾಸಕ ಸ್ಥಾನ ಯಾಕೆ ಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಾನು ಏನೆಂಬುದನ್ನು? ತೋರಿಸಿಕೊಡುತ್ತೇನೆ. ನನ್ನೊಂದಿಗೆ ಎಷ್ಟು ಮಂದಿ ಕಾಂಗ್ರೆಸ್​​ ಶಾಸಕರಿದ್ದಾರೆ ಎಂಬುದನ್ನು ಈಗಲೇ ಹೇಳುವುದಿಲ್ಲ. ಒಂದಷ್ಟು ದಿನ ಕಾದು ನೋಡಿ, ಎರಡು ಮೂರು ದಿನಗಳಲ್ಲಿ ರಾಜೀನಾಮೆ ನೀಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ. ಆದರೆ ನಾನು ಬೇಕಾದರೆ ನಾಳೆಯೇ ರಾಜೀನಾಮೆ ನೀಡಬಹುದು. ಮೈತ್ರಿ ಸರ್ಕಾರದ ನಾಯಕರಿಂದ ಭಾರೀ ಬೇಸರವಾಗಿದೆ ಎಂದು ಅಸಮಾಧಾನ ಹೊರಹಾಕಿದ್ದರು.

ಈಗಾಗಲೇ ರಾಜೀನಾಮೆ ನೀಡುವ ಕುರಿತು ಶಾಸಕ ರಮೇಶ್ ಜಾರಕಿಹೊಳಿಯವರು ತಮ್ಮ ಆಪ್ತರೊಂದಿಗೆ ಚರ್ಚಿಸಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾತ್ರ ನಿಜ. ಆದರೆ ಎಷ್ಟು ಶಾಸಕರು ರಾಜೀನಾಮೆ ನೀಡಿಲಿದ್ದಾರೆ? ಎಂಬುದು ಹೇಳಲು ಸಾಧ್ಯವಿಲ್ಲ. ಈ ಕುರಿತು ಕುಳಿತು ಚರ್ಚೆ ನಡೆಸಲು ಸ್ಥಳ ನಿಗದಿ ಮಾಡಲಾಗಿದ್ದು, ಒಂದೇ ವಾರದಲ್ಲಿ ಎಲ್ಲವೂ ನಿರ್ಧಾರ ಆಗಲಿದೆ ಎಂದು ಹೇಳಲಾಗುತ್ತಿತ್ತು. ಅಲ್ಲದೇ ಕಾಂಗ್ರೆಸ್ಸಿನ 5 ಜನ ಪರಿಷತ್ ಸದಸ್ಯರು ಹಾಗೂ 6 ಜಿಲ್ಲೆಗಳ ಶಾಸಕರು ರಮೇಶ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿತ್ತು.

ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿದನ್ನು ಹಲವರು ಖಂಡಿಸಿದ್ದರು. ಹಾಗೆಯೇ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಜಾರಕಿಹೊಳಿ ಆಪ್ತ ಕಾಂಗ್ರೆಸ್ ಎಂಎಲ್‍ಸಿ ವಿವೇಕ್ ರಾವ್ ಪಾಟೀಲ್, ರಮೇಶ್ ಅವರು ಯಾವುದೇ ನಿರ್ಧಾರ ಕೈಗೊಂಡರೂ ನಮ್ಮ ಬೆಂಬಲವಿರುತ್ತದೆ ಎಂದಿದ್ದರು. ಈ ಬೆನ್ನಲ್ಲೇ ಬಿಜೆಪಿ ರಾಜ್ಯ ನಾಯಕರು ತಮ್ಮ ಪಕ್ಷಕ್ಕೆ ಬರುವಂತೇ ಬುಲಾವ್​​ ನೀಡಿದ್ದರು. ಇದಕ್ಕೆ ರಮೇಶ್​​ ಜಾರಕಿಹೊಳಿ ಒಪ್ಪಿದ್ದಾರೆ. ಕಾಂಗ್ರೆಸ್​​ ನಾಯಕರಿಗೆ ಸಂಕಷ್ಟ ಎದುರಾಗಿದೆ ಎಂಬ ಮಾತುಗಳು ಕೇಳಿ ಬಂದವು.

ಸಂಕ್ರಾತಿಗೆ ಕ್ರಾಂತಿ ಆಗಲಿದೆ ಎಂದು ಬಿಜೆಪಿ ನಾಯಕರು ಬಹಿರಂಗ ಹೇಳಿಕೆ ನೀಡಿದ್ದರು. ಶಾಸಕ ಅಶ್ವಥ್​ ​​ನಾರಾಯಣ್ ನೇತೃತ್ವದಲ್ಲಿ ಮತ್ತೆ ಆಪರೇಷನ್​​ ಕಮಲಕ್ಕೆ ಯತ್ನಿಸಲಾಗಿತ್ತು. ರಾಜ್ಯ ಬಿಜೆಪಿ ನಾಯಕರು ತಮ್ಮ ಪಕ್ಷದ ಪ್ರಭಾವಿ ನಾಯಕ ಅಶ್ವಥ್​​ರಿಗೆ ಜವಾಬ್ದಾರಿ ವಹಸಿದ್ದರು. ಸಚಿವ ರಮೇಶ್​​ ಜಾರಕಿಹೊಳಿ ನೇತೃತ್ವದ ಅತೃಪ್ತ ಶಾಸಕರ ತಂಡ ಕಾಂಗ್ರೆಸ್​​ಗೆ ರಾಜೀನಾಮೆ ನೀಡಲಿದೆ. ಹಾಗೆಯೇ ಬಿಜೆಪಿಗೆ ಹೋಗಲಿದ್ದಾರೆ ಎಂಬ ಸುದ್ದಿ ಹರಡಿತ್ತು.

ಈ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ರಮೇಶ್​​ರನ್ನು ಸಮಾಧಾನಗೊಳಿಸಬೇಕೆಂದು ಕಾಂಗ್ರೆಸ್​​ ಹೈಕಮಾಂಡ್​​ ರಾಜ್ಯ ನಾಯಕರಿಗೆ ಸೂಚಿಸಿದೆ. ರಾಹುಲ್​​ ಆದೇಶದಂತೆಯೇ ಮಾಜಿ ಸಿಎಂ ಸಿದ್ದರಾಮಯ್ಯನವರು ಬಂಡಾಯ ಶಮನಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ಸತೀಶ್​​ ಜಾರಿಕಿಹೊಳಿಯವರಿಗೆ ರಮೇಶ್​​ ಜತೆಗೆ ಮಾತನಾಡುವಂತೆ ಸಿದ್ದರಾಮಯ್ಯನವರು ತಾಖೀತು ಮಾಡಿದ್ದಾರೆ. ಆದರೆ, ಸತೀಶ್​ ಅವರು ಕೂಡ ಲಖನ್​​ ಮೂಲಕ ಮಾತನಾಡಿಸಿದರೇ ಒಳ್ಳೆಯದು ಎಂಬ ಸಲಹೆ ನೀಡಿದ್ದರು.

ಸತೀಶ್​​ ಜಾರಕಿಹೊಳಿಯವರ ಸಲಹೆ ಮೇರೆಗೆ ಲಖನ್​​ರನ್ನು ಮಾಜಿ ಸಿಎಂ ಸಿದ್ದರಾಮಯ್ಯನವರು ನಿನ್ನೆ ಸಂಪರ್ಕಿಸಿದ್ದಾರೆ. ನೀವು ಹೇಳಿದರೇ, ನಿಮ್ಮಣ್ಣ ಕೇಳ್ತಾರಂತಲ್ಲ ಸ್ವಲ್ಪ ಹೇಳಪ್ಪ ಎಂದಿದ್ದದಾರೆ ಸಿದ್ದರಾಮಯ್ಯನವರು. ಸಿದ್ದರಾಮಯ್ಯನವರ ಮಾತಿಗೆ ಆಯ್ತು ಎಂದ ಸಹೋದರ ಲಖನ್​​ರು, ಕೊನೆಗೂ ರಮೇಶ್ ಜೊತೆಗೆ ಮಾತನಾಡದೆ ಸುಮ್ಮನಾಗಿದ್ದಾರೆ. ಇದರಿಂದ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಭಾರೀ ಹಿನ್ನಡೆಯಾಗಿದೆ.

Comments are closed.