ಕ್ರೀಡೆ

ಚಹಾಲ್-ಧೋನಿ ಕಮಾಲ್; ಆಸೀಸ್​ ನೆಲದಲ್ಲಿ ಭಾರತಕ್ಕೆ ಐತಿಹಾಸಿಕ ಸರಣಿ ಗೆಲುವು

Pinterest LinkedIn Tumblr


ಮೆಲ್ಬೋರ್ನ್​: ಇಲ್ಲಿನ ಮೆಲ್ಬೋರ್ನ್​ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸುವ ಇತಿಹಾಸ ಸೃಷ್ಟಿಸಿದೆ.

ಮೂರು ಪಂದ್ಯಗಳ ಏಕದಿನ ಸರಣಿ ಪೈಕಿ ಕೊಹ್ಲಿ ಪಡೆ 2-1 ಅಂತರದಲ್ಲಿ ಗೆದ್ದು ಬೀಗಿದ್ದು, ಇದೆ ಮೊದಲ ಬಾರಿಗೆ ಕಾಂಗರೂಗಳ ನಾಡಲ್ಲಿ ಏಕದಿನ ಸರಣಿ ಗೆದ್ದು ಐತಿಹಾಸಿಕ ಗೆಲುವು ಸಾಧಿಸಿದೆ.

ಏಕದಿನ ಸರಣಿಗೂ ಮುನ್ನ ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್​​ ಸರಣಿ ಗೆಲ್ಲುವ ಮೂಲಕ ಭಾರತ ಕ್ರಿಕೆಟ್​ ತಂಡ ಇತಿಹಾಸ ಸೃಷ್ಟಿಸಿತ್ತು. ಈಗ ಇದೇ ಮೊದಲ ಬಾರಿಗೆ ಆಸೀಸ್​ ನೆಲದಲ್ಲಿ ಏಕದಿನ ಸರಣಿಯನ್ನೂ ತನ್ನದಾಗಿಸಿಕೊಂಡಿದೆ.

ಆಸ್ಟ್ರೇಲಿಯಾ ನೀಡಿದ್ದ 231 ರನ್​ಗಳ ಸುಲಭ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ(9) ಹಾಗೂ ಶಿಖರ್ ಧವನ್(23) ವಿಕೆಟ್ ಕಳೆದುಕೊಂಡಿತು. ಆದರೆ, ನಾಯಕ ವಿರಾಟ್ ಕೊಹ್ಲಿ ಹಾಗೂ ಧೋನಿ ಅರ್ಧಶತಕದ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಈವೇಳೆ 46 ರನ್ ಗಳಿಸಿರಾವಗ ಕೊಹ್ಲಿ ಔಟ್ ಆಗಿದ್ದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಯಿತು.

ತನ್ನ ಜವಾಬ್ದಾರಿಯನ್ನು ಅರಿತು ಬ್ಯಾಟ್ ಬೀಸಿದ ಧೋನಿ, ಕೇದರ್ ಜಾಧವ್ ಜೊತೆಗೂಡಿ ಎಚ್ಚರಿಕೆಯ ಆಟಕ್ಕೆ ಮುಂದಾದರು. ಎಲ್ಲು ಎಡವದಂತೆ ಸಮಯೋಚಿತ ಆಟ ಪ್ರದರ್ಶಿಸಿದ ಇವರಿಬ್ಬರು ತಂಡಕ್ಕೆ ಗೆಲುವು ತಂದುಕೊಟ್ಟರು. ವಿರಾಟ್ ಕೊಹ್ಲಿ ನಿರ್ಗಮನದ ಬಳಿಕ ವಿಕೆಟ್ ಹೋಗದಂತೆ ನೋಡಿಕೊಂಡ ಧೋನಿ-ಜಾಧವ್ ಅರ್ಧಶತಕ ಸಿಡಿಸಿ ಐತಿಹಾಸಿಕ ಜಯಕ್ಕೆ ಕಾರಣರಾದರು.

ಅಂತಿಮವಾಗಿ 48.2 ಓವರ್​ನಲ್ಲಿ 234 ರನ್ ಕಲೆಹಾಕುವ ಮೂಲಕ ಭಾರತ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಧೋನಿ 114 ಎಸೆತಗಳಲ್ಲಿ 87 ರನ್ ಹಾಗೂ ಜಾಧವ್ 57 ಎಸೆತಗಳಲ್ಲಿ 61 ರನ್ ಬಾರಿಸಿ ಅಜೇಯರಾಗಿ ಉಳಿದರು. ಆಸೀಸ್ ಪರ ರಿಚರ್ಡಸನ್, ಪೀಟರ್ ಸಿಡ್ಲ್​​​ ಹಾಗೂ ಸ್ಟಾಯಿನಿಸ್ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಯುಜುವೇಂದ್ರ ಚಹಾಲ್ ಸ್ಪಿನ್ ದಾಳಿಗೆ ಸಿಲುಕಿ 48.4 ಓವರ್​ನಲ್ಲೇ 230 ರನ್​ಗೆ ಆಲೌಟ್ ಆಯಿತು.

ಆಸೀಸ್ ಪರ ಪೀಟರ್ ಹ್ಯಾಂಡ್ಸ್​ಕಾಂಬ್ 58 ರನ್ ಗಳಿಸಿದ್ದು ಬಿಟ್ಟರೆ ಶಾನ್ ಮಾರ್ಶ್​ 39 ಹಾಗೂ ಉಸ್ಮಾನ್ ಖ್ವಾಜಾ 34 ಬಾರಿಸಿದ್ದೆ ಹೆಚ್ಚು. ಪರಿಣಾಮ ಕಡಿಮೆ ಮೊತ್ತಕ್ಕೆ ಕುಸಿಯಿತು. ಭಾರತ ಪರ ಮಾರಕ ಬೌಲಿಂಗ್ ನಡೆಸಿದ ಚಹಾಲ್ 6 ವಿಕೆಟ್ ಕಿತ್ತರೆ, ಭುವನೇಶ್ವರ್ ಹಾಗೂ ಶಮಿ ತಲಾ 2 ವಿಕೆಟ್ ಪಡೆದರು.

ಪಂದ್ಯ ಶ್ರೇಷ್ಠ 6 ವಿಕೆಟ್ ಕಿತ್ತ ಚಹಾಲ್ ಪಡೆದುಕೊಂಡರೆ, ಸರಣಿ ಶ್ರೇಷ್ಠವನ್ನು ಧೋನಿ ತಮ್ಮದಾಗಿಸಿದರು. ಈ ಮೂಲಕ ಟೀಂ ಇಂಡಿಯಾ ಗೆಲುವಿನ ಸಿಹಿಯೊಂದಿಗೆ ಆಸ್ಟ್ರೇಲಿಯಾ ಪ್ರವಾಸವನ್ನು ಅಂತ್ಯಗೊಳಿಸಿದೆ.

Comments are closed.