ಕರ್ನಾಟಕ

ಕಾಂಗ್ರೆಸ್ ನಡೆಗಳ ಹಿಂದೆ ದೇವೇಗೌಡ; ರಮೇಶ್ ಜಾರಕಿಹೊಳಿ ಸೇರಿ ನಾಲ್ವರ ರಾಜೀನಾಮೆ?

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್​ನ ಅತೃಪ್ತರಿಗೆ ಗಾಳ ಹಾಕುತ್ತಲೇ ಇದ್ದ ಭಾರತೀಯ ಜನತಾ ಪಕ್ಷಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯು ಅನಿರೀಕ್ಷಿತ ಶಾಕ್ ಕೊಟ್ಟಿರುವುದು ತಿಳಿದುಬಂದಿದೆ. ಬಿಜೆಪಿಯು ಕಾಂಗ್ರೆಸ್​ನ ಈ ಸಿಎಲ್​ಪಿ ಸಭೆಯನ್ನು ನಿರೀಕ್ಷಿಸಿರಲಿಲ್ಲ. ಅದರಲ್ಲೂ ವಿಪ್ ಜಾರಿ ಮಾಡಿದ್ದು ಅಚ್ಚರಿ ಮೂಡಿಸಿತ್ತು. ಬಿಜೆಪಿಯ ಗಾಯದ ಮೇಲೆ ಬರೆ ಎಳೆಯುವಂತೆ ಕಾಂಗ್ರೆಸ್ ಪಕ್ಷವು ಸಿಎಲ್​ಪಿ ಸಭೆಯಿಂದ ನೇರವಾಗಿ ಎಲ್ಲಾ ಶಾಸಕರನ್ನೂ ರೆಸಾರ್ಟ್​ಗೆ ಕರೆದೊಯ್ಯುತ್ತಿದೆ. ಆಪರೇಷನ್ ಕಮಲದ ಕೊನೆಯ ಪ್ರಯತ್ನ ಮಾಡುತ್ತಿರುವ ಬಿಜೆಪಿಗೆ ಇದು ಇನ್ನಷ್ಟು ಹತಾಶೆ ತಂದಿದೆ.

ದೇವೇಗೌಡರ ಮಾಸ್ಟರ್ ಪ್ಲಾನ್?

ಇದೇ ವೇಳೆ, 10ಕ್ಕೂ ಹೆಚ್ಚು ಶಾಸಕರು ತಮ್ಮ ಜೊತೆ ಇದ್ದಾರೆಂದು ಭಾವಿಸಿದ್ದ ರಮೇಶ್ ಜಾರಕಿಹೊಳಿ ಅವರಿಗೂ ಈ ಸಿಎಲ್​ಪಿ ಸಭೆ ಶಾಕ್ ಕೊಟ್ಟಿದೆ. ಸಿಎಲ್​ಪಿ ಸಭೆಗೆ ತಮ್ಮ ಆಪ್ತರು ಹಾಜರಾಗುವುದು ಜಾರಕಿಹೊಳಿಗೆ ಇಷ್ಟವಿರಲಿಲ್ಲವೆನ್ನಲಾಗಿದೆ. ಆದರೆ, ವಿಪ್ ಜಾರಿಯ ನೋಟೀಸ್ ನೋಡಿ ಎಲ್ಲಾ ಶಾಸಕರು ಗೊಂದಲಕ್ಕೊಳಗಾಗಿದ್ದರು. ಸಭೆಗೆ ಹಾಜರಾಗಿ ವಾಪಸ್ ಬರುವುದಾಗಿ ಕೆಲ ಆಪ್ತರು ಬೆಂಗಳೂರಿಗೆ ಆಗಮಿಸಿದ್ದರು. ಹೀಗಾಗಿ, ತಮ್ಮ ಆಪ್ತರು ಶಾಸಕಾಂಗ ಪಕ್ಷದ ಸಭೆ ಮುಗಿಸಿ ವಾಪಸ್ ಬರುವ ನಿರೀಕ್ಷೆ ರಮೇಶ್ ಜಾರಕಿಹೊಳಿ ಅವರಿಗೆ ಇತ್ತು. ಸಭೆಗೆ ನಾಲ್ವರನ್ನ ಹೊರತುಪಡಿಸಿ ಉಳಿದವರೆಲ್ಲರೂ ಹಾಜರಿದ್ದರು. ಈ ಎಲ್ಲಾ 76 ಶಾಸಕರನ್ನೂ ರೆಸಾರ್ಟ್​​ನಲ್ಲಿ ಸೇರಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದು ಬಿಜೆಪಿಯ ಜೊತೆಗೆ ರಮೇಶ್ ಜಾರಕಿಹೊಳಿಗೂ ಆಘಾತ ತಂದಿದೆ. ಅತೃಪ್ತ ಶಾಸಕರನ್ನು ಮತ್ತೆ ಸಂಪರ್ಕಿಸುವ ದಾರಿ ಬಹುತೇಕ ಮುಚ್ಚಿದಂತಾಗಿದೆ.

ವಿಪ್ ಹೊರಡಿಸಿ ಸಿಎಲ್​ಪಿ ಸಭೆ ಕರೆಯುವುದು, ಬಂದವರನ್ನು ಅನಾಮತ್ತಾಗಿ ರೆಸಾರ್ಟ್​ಗೆ ಕರೆದೊಯ್ಯುವುದು ಪೂರ್ವಯೋಜಿತ ಪ್ಲಾನ್ ಆಗಿದ್ದಂತಿದೆ. ಇವತ್ತು ಸಿಎಲ್​ಪಿ ಸಭೆ ನಡೆಯುವ ಮುನ್ನವೇ ನ್ಯಾಷನಲ್ ಟ್ರಾವೆಲ್ಸ್ ಬಸ್ಸುಗಳು ವಿಧಾನಸೌಧದ ಬಳಿ ಬಂದಿದ್ದು ಈ ಅನುಮಾನವನ್ನು ಬಲಗೊಳಿಸುತ್ತದೆ. ವಿಪ್ ಹೊರಡಿಸಿದರೆ ಶಾಸಕರು ಶತಾಯಗತಾಯ ಹಾಜರಾಗುತ್ತಾರೆ. ಹಾಗೆ ಬಂದವರನ್ನು ವಾಪಸ್ ಹೋಗದಂತೆ ಸೀದಾ ರೆಸಾರ್ಟ್​ಗೆ ಕರೆದೊಯ್ದರೆ ಆಪರೇಷನ್ ಕಮಲವನ್ನು ಸಂಪೂರ್ಣವಾಗಿ ವಿಫಲಗೊಳಿಸಬಹುದು ಎಂಬುದು ಕೈಪಾಳಯದ ಎಣಿಕೆ. ಹೀಗಾಗಿ, ಬಿಜೆಪಿಗೆ ಶಾಕ್ ಮೇಲೆ ಶಾಕ್ ಕೊಟ್ಟಿದೆ.

ಆದರೆ, ಕಾಂಗ್ರೆಸ್ ಪಾಳಯದಿಂದ ಬಂದ ಈ ಅನಿರೀಕ್ಷಿತ ನಿರ್ಧಾರಗಳ ಹಿಂದೆ ದೇವೇಗೌಡರ ಸಲಹೆ ಇದೆ ಎನ್ನಲಾಗಿದೆ. ಶಾಸಕಾಂಗ ಸಭೆ ಕರೆದು ಆ ನಂತರ ಎಲ್ಲಾ ಶಾಸಕರನ್ನು ರೆಸಾರ್ಟ್​​ಗೆ ಕರೆದೊಯ್ಯುವಂತೆ ಸಿದ್ದರಾಮಯ್ಯ ಅವರಿಗೆ ಸಲಹೆ ಕೊಟ್ಟಿದ್ದು ದೇವೇಗೌಡರೇ ಅಂತೆ. ದೊಡ್ಡಗೌಡರ ಈ ಪ್ಲಾನ್ ವರ್ಕೌಟ್ ಆಗಿದೆ.

ನಾಲ್ವರು ಅತೃಪ್ತರ ರಾಜೀನಾಮೆ?
ಇವತ್ತಿನ ಸಿಎಲ್​ಪಿ ಸಭೆಗೆ ಗೈರಾದ ರಮೇಶ್ ಜಾರಕಿಹೊಳಿ ಅವರು ನಾಳೆ ರಾಜೀನಾಮೆ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸಭೆಯಲ್ಲಿ ಗೈರಾದ ಇತರ ಮೂವರು ಶಾಸಕರಾದ ಮಹೇಶ್ ಕುಮಟಹಳ್ಳಿ, ಉಮೇಶ್ ಜಾಧವ್ ಮತ್ತು ಬಿ. ನಾಗೇಂದ್ರ ಅವರೂ ಕೂಡ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ಧಾರೆ. ಇವರೂ ಕೂಡ ನಾಳೆಯೇ ರಾಜೀನಾಮೆ ಕೊಡಲಿದ್ದಾರೆನ್ನಲಾಗಿದೆ. ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.

ಇದೇ ವೇಳೆ, ಅತೃಪ್ತರ ಲಿಸ್ಟ್​​ನಲ್ಲಿದ್ದ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರು ಸಿಎಲ್​ಪಿ ಸಭೆ ನಂತರ ರೆಸಾರ್ಟ್​ನತ್ತ ಹೋಗದೇ ಕಣ್ಮರೆಯಾಗಿದ್ದು ಹಲವು ಅನುಮಾನಗಳಿಗೂ ಎಡೆ ಮಾಡಿಕೊಟ್ಟಿತ್ತು. ಆದರೆ, ರಾತ್ರಿ 9 ಗಂಟೆಯ ನಂತರ ಅವರು ರೆಸಾರ್ಟ್ ಬಳಿ ಕಾಣಿಸಿಕೊಂಡು ಊಹಾಪೋಹಗಳಿಗೆ ತೆರೆ ಎಳೆದರು. ಮಸ್ಕಿ ಶಾಸಕರು ಕಾಂಗ್ರೆಸ್ ಸಭೆಯ ಬಳಿಕ ಕಾಲ್ಕಿತ್ತು ಬಿಜೆಪಿ ಪಾಳೆಯ ಸೇರುವ ಯೋಚನೆ ಮಾಡುತ್ತಿದ್ದಾರೆಂಬ ವರದಿಗಳು ಬಂದಿದ್ದವು. ಇದಕ್ಕೆಲ್ಲಾ ತೆರೆ ಎಳೆದ ಅವರು, ತಾನು ಬಿಸಿ ಪಾಟೀಲ್ ಅವರ ಮಗಳ ಮದುವೆಗೆ ಹೋಗಿದ್ದೆ ಎಂದು ಸ್ಪಷ್ಟಪಡಿಸಿದರು.

ಗೊಂದಲದಲ್ಲಿ ಬಿಜೆಪಿ:
ಅತ್ತ, ಹರಿಯಾಣದ ರೆಸಾರ್ಟ್​ನಲ್ಲಿರುವ ಬಿಜೆಪಿಯ ಕೆಲ ಶಾಸಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿನ ಇವತ್ತಿನ ಬೆಳವಣಿಗೆ ನಂತರ ಬಿಜೆಪಿ ರೆಸಾರ್ಟ್ ವಾಸ್ತವ್ಯ ಬಿಟ್ಟು ಎಲ್ಲರನ್ನೂ ಬೆಂಗಳೂರಿಗೆ ಕಳುಹಿಸುವ ನಿರೀಕ್ಷೆ ಇತ್ತು. ಆದರೆ ಮೂಲಗಳ ಪ್ರಕಾರ, ಹರಿಯಾಣದ ರೆಸಾರ್ಟ್​ನಲ್ಲಿ ಬಹುತೇಕ ಬಿಜೆಪಿ ಶಾಸಕರು ಇನ್ನಷ್ಟು ಕಾಲ ಉಳಿದುಕೊಳ್ಳುವ ಸಾಧ್ಯತೆ ಇದೆ. ಆದರೆ, ಬಿಜೆಪಿ ವರಿಷ್ಠರು ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಇವತ್ತು ರಾತ್ರಿ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಆದರೆ, ಕಾಂಗ್ರೆಸ್​ನ ಶಾಸಕರನ್ನು ರೆಸಾರ್ಟ್​ಗೆ ಕರೆದೊಯ್ಯುವ ನಿರ್ಧಾರವನ್ನು ಬಿಎಸ್​ವೈ ವ್ಯಂಗ್ಯವಾಗಿ ಸ್ವಾಗತಿಸಿದ್ದಾರೆ. ಬಿಜೆಪಿ ಶಾಸಕರು ರೆಸಾರ್ಟ್​ಗೆ ಹೋಗಿದ್ದನ್ನು ಪ್ರಶ್ನಿಸುವ ಕಾಂಗ್ರೆಸ್​ನವರೇ ಈಗ ರೆಸಾರ್ಟ್ ಮೊರೆ ಹೋಗಿದ್ದಾರೆ ಎಂದು ಯಡಿಯೂರಪ್ಪ ಕುಟುಕಿದ್ದಾರೆ.

ಕಾಂಗ್ರೆಸ್ ಪಕ್ಷವು ತನ್ನ ಶಾಸಕರನ್ನು ರೆಸಾರ್ಟ್​ನಲ್ಲಿ ಕೂಡಿಹಾಕುತ್ತಿರುವುದು ಆ ಪಕ್ಷದಲ್ಲಿ ಭಿನ್ನಮತ ಇರುವುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ತನ್ನ ಪಕ್ಷದ ಶಾಸಕರ ಬಗ್ಗೆಯೇ ನಂಬಿಕೆ ಇಲ್ಲದಂತಾಗಿದೆ. ಪಕ್ಷ ಬಿಟ್ಟುಹೋಗುವ ಭಯದಿಂದ ಶಾಸಕರನ್ನು ರೆಸಾರ್ಟ್​​ನಲ್ಲಿ ಕೂಡಿಹಾಕುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.

Comments are closed.