ಕರ್ನಾಟಕ

ಚೇತರಿಕೆ ಕಾಣದ ಸಿದ್ದಗಂಗಾ ಶ್ರೀಗಳ ಆರೋಗ್ಯ

Pinterest LinkedIn Tumblr


ತುಮಕೂರು: ಹಲವು ದಿನಗಳಿಂದ ಅನಾರೋಗ್ಯ ಸ್ಥಿತಿಯಲ್ಲಿರುವ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಇನ್ನೂ ಚೇತರಿಸಿಕೊಳ್ಳುತ್ತಿಲ್ಲ. ಸಿದ್ದಗಂಗಾ ಮಠದಲ್ಲೇ ಶ್ರೀಗಳು ಕೃತಕ ಉಸಿರಾಟದ ನೆರವಿನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ವೈದ್ಯರೂ ಕೂಡ ಹೆಚ್ಚು ಭರವಸೆ ಇಟ್ಟುಕೊಂಡಂತಿಲ್ಲ. ಶ್ರೀಗಳ ಆರೋಗ್ಯ ದಿನೇದಿನೇ ಬಿಗಡಾಯಿಸುತ್ತಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಗಣ್ಯರು ಮಠಕ್ಕೆ ಬರಲು ಪ್ರಾರಂಭಿಸುತ್ತಿದ್ದಾರೆ.

ವೈದ್ಯರು ಹೇಳುವುದೇನು?

ಶ್ರೀಗಳ ಆರೋಗ್ಯವನ್ನು ಪ್ರತೀ ಕ್ಷಣವೂ ಪರಿಶೀಲಿಸುತ್ತಿರುವ ಬಿಜಿಎಸ್ ಆಸ್ಪತ್ರೆಯ ವೈದ್ಯ ಡಾ. ರವೀಂದ್ರ ಅವರು ವೈದ್ಯಕೀಯವಾಗಿ ಈಗ ಏನೂ ಅಂದಾಜು ಮಾಡುವ ಸ್ಥಿತಿಯಲ್ಲಿಲ್ಲ ಎಂದಿದ್ದಾರೆ. “ಶ್ರೀಗಳಿಂದ ನಾವು ನಿರೀಕ್ಷಿಸಿದಷ್ಟು ಸ್ಪಂದನೆ ಬರುತ್ತಿಲ್ಲ. ವೆಂಟಿಲೇಟರ್​ ತೆಗೆದು ಸಹಜ ಉಸಿರಾಟದ ಪ್ರಯತ್ನ ಮಾಡಿದೆವು. ಆದರೆ, ಅವರ ದೇಹವು ಉಸಿರಾಟಕ್ಕೆ ಸ್ಪಂದಿಸುತ್ತಿದೆಯಾದರೂ ಅವರಲ್ಲಿ ನಿರೀಕ್ಷಿತ ಶಕ್ತಿ ಇಲ್ಲ. ಕಿಡ್ನಿಯಲ್ಲಿ ಮತ್ತು ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುವುದು ಹೆಚ್ಚಾಗಿದೆ. 10 ದಿನಗಳ ಹಿಂದೆ ಇದ್ದಂತಹ ಸ್ಥಿತಿಯಲ್ಲೇ ಅವರು ಈಗಲೂ ಮುಂದುವರಿದ್ದಾರೆ. ಶ್ರೀಗಳನ್ನ ಮತ್ತೆ ವೆಂಟಿಲೇಟರ್​ನಲ್ಲೇ ಮುಂದುವರಿಸಲಾಗಿದೆ” ಎಂದು ವೈದ್ಯರು ಹೇಳಿದ್ದಾರೆ.

ಸ್ವಾಮೀಜಿಗಳಿಗೆ 111 ವರ್ಷ ಆಗಿದೆ. ನಾವ್ಯಾರೂ ನೋಡದೇ ಇರುವ ವಯಸ್ಸಿನ ವ್ಯಕ್ತಿ ಅವರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಈ ರೀತಿ ಆಗಿದೆ. ಕಣ್ಣು ಬಿಡುವುದು, ಕೈ ಕಾಲು ಆಡಿಸುವುದು ಕಷ್ಟವಾಗಿದೆ. ನಾವು ಪ್ರಯತ್ನ ಮುಂದುವರಿಸಿದ್ದೇವೆ. ನೋಡೋಣ ಏನಾಗುತ್ತೆ ಎಂದು ಡಾ. ರವೀಂದ್ರ ಅವರು ದೇವರ ಮೇಲೆ ಭಾರ ಹಾಕಿದಂತಿದೆ.

ಹೆಲಿಪ್ಯಾಡ್​ಗಳ ನಿರ್ಮಾಣ:
ಇನ್ನು, ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ದೇಶದ ಮೂಲೆ ಮೂಲೆಯಿಂದ ಗಣ್ಯರು ಸಿದ್ದಗಂಗಾ ಮಠಕ್ಕೆ ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ, ಮಠಕ್ಕೆ ಹತ್ತಿರದ ಪ್ರದೇಶಗಳಲ್ಲಿ 14 ಹೆಲಿಪ್ಯಾಡ್​ಗಳನ್ನು ನಿರ್ಮಾಣ ಮಾಡಲಾಗಿದೆ. ತುಮಕೂರು ಜಿಲ್ಲಾ ಪೊಲೀಸರು ತುಮಕೂರು ನಗರದ ವಿವಿ ಕ್ಯಾಂಪಸ್​ನಲ್ಲಿ 4, ಮಹಾತ್ಮ ಗಾಂಧಿ ಸ್ಟೇಡಿಯಮ್​ನಲ್ಲಿ 1, ಎಸ್​ಐಟಿ ಕಾಲೇಜಿನಲ್ಲಿ 2, ಹಿರೇಹಳ್ಳಿ ಹಾಗೂ ಪಂಡಿತಹಳ್ಳಿ ಬಳಿ 7 ಹೆಲಿಪ್ಯಾಡ್​ಗಳನ್ನು ನಿರ್ಮಿಸಿದ್ದಾರೆ.

Comments are closed.