
ಬೆಂಗಳೂರು: ಮತ್ತೊಂದು ಸುತ್ತಿನ ಆಪರೇಷನ್ ಕಮಲದ ಯತ್ನದಿಂದ ಕೋಪಗೊಂಡಿರುವ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ – ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಹೊರತು ಬುದ್ಧಿ ಬಂದಿಲ್ಲ ಎಂದು ತೀಕ್ಷ್ಣವಾಗಿ ಸಿದ್ದರಾಮಯ್ಯ ಟೀಕಿಸಿದ್ಧಾರೆ.
“ಯಡಿಯೂರಪ್ಪ ಅವರಿಗೆ 77 ವರ್ಷ ವಯಸ್ಸಾಗಿದೆ, ಬುದ್ಧಿ ಮಾತ್ರ ಬೆಳೆದಿಲ್ಲ. ಸಿಎಂ ಆಗಬೇಕೆಂದು ವಾಮಮಾರ್ಗ ಹಿಡಿದಿದ್ದಾರೆ. ಶಾಸಕರಿಗೆ ಕೋಟ್ಯಾಂತರ ರೂಪಾಯಿ ಆಮಿಷ ಮಾಡ್ತಿದ್ದಾರೆ. ಬಿಜೆಪಿಗರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ. ಬಿಜೆಪಿಯವರು ಅತ್ಯಂತ ಮಾನಗೆಟ್ಟ, ಲಜ್ಜೆಗೆಟ್ಟವರು. ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ,” ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.
ಮುಂದುವರೆದ ಅವರು, ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದರೂ ಸಿಎಂ ಆಗೋ ಆಸೆ ಇನ್ನೂ ಹೋಗಿಲ್ಲ, ಬಿಜೆಪಿಯವರು ಮಾಧ್ಯಮದವರಿಗೆ ಬರಿ ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದ್ದಾರೆ. ಜನರು ಚುನಾವಣೆಯಲ್ಲಿ ಕೊಟ್ಟ ತೀರ್ಪನ್ನು ಪಾಲಿಸಬೇಕು, ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂತು ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ. ಜನ ಬಿಜೆಪಿಯವರಿಗೆ ಅಧಿಕಾರ ಮಾಡಿ ಅಂತ ತೀರ್ಪು ಕೊಟ್ಟಿಲ್ಲ. ಕಳೆದ ಆರು ತಿಂಗಳಿಂದ ಸರ್ಕಾರ ಅಭದ್ರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಂದುವರೆದ ಅವರು “ಪದೇ ಪದೇ ಸರ್ಕಾರ ಬೀಳಿಸಲು ಪ್ರಯತ್ನ ಮಾಡುತ್ತಲೇ ಇದ್ದಾರೆ, ಬಿಜೆಪಿಯವರು ಎಷ್ಟು ಲಜ್ಜೆಗೆಟ್ಟವರು ಎಂದರೆ ಹರಿಯಾಣದಲ್ಲಿ ಎಲ್ಲರನ್ನೂ ಕೂಡಿಟ್ಟು ಕೊಂಡಿದ್ದಾರೆ. ಸಂಕ್ರಾಂತಿ ಗಿಫ್ಟ್ ಕೊಡ್ತೀವಿ, ಯುಗಾದಿ ಗಿಫ್ಟ್ ಕೊಡ್ತೀವಿ ಅಂತ ಬರೀ ಸುಳ್ಳು ಹೇಳುತ್ತಿದ್ದಾರೆ,” ಎಂದು ಸಿಟ್ಟು ಹೊರ ಹಾಕಿದ್ದಾರೆ.
ಮಂಗಳವಾರ ಕೂಡ ಸಿದ್ದರಾಮಯ್ಯ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವಿಟ್ಟರ್ನಲ್ಲಿ ಸಿಟ್ಟು ಹೊರ ಹಾಕಿದ್ದರು. ದೇಶದ ಚೌಕಿದಾರ ಎಂದು ಹೇಳಿಕೊಳ್ಳುವ ಮೋದಿ, ರಾಜ್ಯದ ಶಾಸಕರನ್ನು ರೆಸಾರ್ಟ್ನಲ್ಲಿ ಕೂಡಿ ಹಾಕಿ ಕಾಯುವ ಚೌಕಿದಾರ ಆಗಿದ್ದಾರೆ ಎಂದು ವ್ಯಂಗ್ಯ ಮಾಡಿದ್ದರು. ಜತೆಗೆ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧ ಕೆಲಸ ಮಾಡುತ್ತಿದೆ ಎಂದು ಕೋಪ ಹೊರಹಾಕಿದ್ದರು.
Comments are closed.