ಮುಂಬೈ

ಸುಳ್ಳು ಹೇಳಿ ಅತೃಪ್ತ ಕಾಂಗ್ರೆಸ್ ಶಾಸಕರನ್ನು ಕರೆಸಿಕೊಂಡಿತಾ ಬಿಜೆಪಿ?

Pinterest LinkedIn Tumblr


ಮುಂಬೈ: ಆಪರೇಷನ್​ ಕಮಲಕ್ಕೆ ಒಳಗಾಗಿ ಮುಂಬೈನಲ್ಲಿರುವ ಕಾಂಗ್ರೆಸ್​ ಶಾಸಕರು ಇಂದು ಸಂಜೆಯೊಳಗೆ ವಾಪಾಸ್​ ಬರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದೇನಾದರೂ ನಿಜವಾದರೆ, ಬಿಜೆಪಿಯ ತಂತ್ರ ತಿರುಗುಬಾಣವಾಗುವ ಸಾಧ್ಯತೆಯಿದೆ.

ನಿನ್ನೆ ಸಂಕ್ರಾಂತಿ ಹಬ್ಬದ ಯಾವ ಸಂಭ್ರಮವೂ ರಾಜ್ಯ ರಾಜಕಾರಣಿಗಳಲ್ಲಿ ಇರಲಿಲ್ಲ. ನಿನ್ನೆ ಬೆಳಗ್ಗೆಯಿಂದಲೇ ಬಿಜೆಪಿ ಮತ್ತು ಕಾಂಗ್ರೆಸ್​ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ಏರ್ಪಟ್ಟಿದ್ದವು. ಸಂಕ್ರಾಂತಿ ಮುಗಿಯುವುದರೊಳಗೆ ಕ್ರಾಂತಿ ಮಾಡುತ್ತೇವೆ ಎಂದು ಹೇಳಿದ್ದ ಬಿಜೆಪಿ ನಾಯಕರು ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ್ದ ಇಬ್ಬರು ಪಕ್ಷೇತರ ಶಾಸಕರನ್ನು ತಮ್ಮತ್ತ ಸೆಳೆದುಕೊಂಡು ಬೆಂಬಲ ವಾಪಾಸ್​ ಪಡೆಯುವಂತೆ ಮಾಡುವ ಮೂಲಕ ರಾಜ್ಯ ಸರ್ಕಾರದ ನಾಯಕರಿಗೆ ಮೊದಲ ಶಾಕ್​ ನೀಡಿದ್ದಾರೆ.

ಹಾಗೇ, ಕಾಂಗ್ರೆಸ್​ನ 15 ಶಾಸಕರು ಆಪರೇಷನ್​ ಕಮಲಕ್ಕೆ ಒಳಗಾಗಿದ್ದಾರೆ ಎಂಬ ಸುದ್ದಿಯನ್ನು ಕೈ ನಾಯಕರು ಅಲ್ಲಗಳೆಯುತ್ತಿದ್ದರೂ ಕಾಂಗ್ರೆಸ್​ನ ಮೂವರು ಶಾಸಕರು ಮುಂಬೈನಲ್ಲಿರುವುದು ಖಚಿತವಾಗಿದೆ. ಹೀಗಾಗಿ, ನಿನ್ನೆ ಬೆಳಗ್ಗೆಯಿಂದ ರಾತ್ರಿಯವರೆಗೂ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್​ ನಾಯಕರ ಜೊತೆಗೆ ಸುದೀರ್ಘ ಚರ್ಚೆಗಳು ನಡೆದಿತ್ತು. ನಿನ್ನೆ ಮಧ್ಯರಾತ್ರಿಯವರೆಗೂ ಕೆ.ಸಿ. ವೇಣುಗೋಪಾಲ್​ ಜೊತೆಗೆ ಸಭೆ ನಡೆಸಿ ಆಪರೇಷನ್​ ಕಮಲಕ್ಕೆ ಪ್ರತಿಯಾಗಿ ತಂತ್ರ ರೂಪಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿಯ ಕೆಲವು ಶಾಸಕರು ಕೂಡ ನಮ್ಮ ಸಂಪರ್ಕದಲ್ಲಿದ್ದಾರೆ. ನಾವೇನೂ ಕೈಕಟ್ಟಿ ಕುಳಿತಿಲ್ಲ ಎಂದು ನಿನ್ನೆ ರಾತ್ರಿ ಟ್ವೀಟ್​ ಮಾಡುವ ಮೂಲಕ ಎದುರಾಳಿಗಳಿಗೆ ಶಾಕ್​ ನೀಡಿದ್ದರು.

ರಾತ್ರಿಯವರೆಗೂ ಸಭೆ ನಡೆಸಿ ತಂತ್ರ ರೂಪಿಸಿರುವ ಕಾಂಗ್ರೆಸ್​ ನಾಯಕರ ಇಂದಿನ ನಡೆಯತ್ತ ಕುತೂಹಲ ಹೆಚ್ಚಾಗಿದೆ. ಆಪರೇಶನ್ ಕಮಲಕ್ಕೆ ಸೆಡ್ಡು ಹೊಡೆಯಲು ಮುಂದಾಗಿರುವ ಕಾಂಗ್ರೆಸ್​ ನಾಯಕರ ನಡೆಯ ಬಗ್ಗೆ ಬಿಜೆಪಿ ನಾಯಕರಲ್ಲೂ ಆತಂಕ ಶುರುವಾದಂತಿದೆ. ಅದರ ಜೊತೆಗೇ, ಮುಂಬೈಗೆ ಹೋದ ವೇಗದಲ್ಲೇ ಕಾಂಗ್ರೆಸ್​ನ ಮೂವರು ಶಾಸಕರು ವಾಪಸ್ಸಾಗಲಿದ್ದಾರಾ? ಎಂಬ ಪ್ರಶ್ನೆಗಳೂ ಕಾಡುತ್ತಿವೆ.

ಸುಳ್ಳು ಹೇಳಿದರಾ ಬಿಜೆಪಿ ನಾಯಕರು?:

ತಮ್ಮ ಬಳಿ 10ಕ್ಕೂ ಹೆಚ್ಚು ಶಾಸಕರಿದ್ದಾರೆ ಎಂದು ಹೇಳಿ ಕೈ ಶಾಸಕರಿಗೆ ಗಾಳ ಹಾಕಿದ್ದ ಬಿಜೆಪಿ ನಾಯಕರ ಮಾತನ್ನು ನಂಬಿ ಕೈ ಶಾಸಕರಾದ ಉಮೇಶ ಜಾಧವ್, ಮಹೇಶ ಕುಮಟಳ್ಳಿ ಸೇರಿ ಕೆಲವರು ಮುಂಬೈಗೆ ತೆರಳಿದ್ದರು. ಆದರೆ, ಅಲ್ಲಿ ಬೆರಳೆಣಿಕೆಯ ಶಾಸಕರು ಇದ್ದುದನ್ನು ಕಂಡು ಬಿಜೆಪಿ ಶಾಸಕ ಡಾ. ಅಶ್ವತ್ಥ ನಾರಾಯಣ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ, ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ ಮತ್ತು ಕೈ ಶಾಸಕರ ನಡುವೆ ಜಟಾಪಟಿ ನಡೆದಿದೆ ಎನ್ನಲಾಗಿದೆ.

ಬಿಜೆಪಿ ಶಾಸಕ ಡಾ. ಅಶ್ವತ್ಥ ನಾರಾಯಣ ಮಾತನ್ನು ನಂಬಿ ಸಮ್ಮಿಶ್ರ ಸರ್ಕಾರದಿಂದ ಹೊರಬರಲು ಒಪ್ಪಿಕೊಂಡಿದ್ದ ಕಾಂಗ್ರೆಸ್​ ಶಾಸಕರು ತಮ್ಮನ್ನು ಸುಳ್ಳು ಹೇಳಿ ಕರೆಸಿಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿದ್ದಾರೆ. ಸುಳ್ಳು ಹೇಳಿ ಕರೆದುಕೊಂಡು ಬಂದಿದ್ದೇಕೆ? 10ಕ್ಕೂ ಹೆಚ್ಚು ಕಾಂಗ್ರೆಸ್​ ಶಾಸಕರಿದ್ದಾರೆ ಎಂದು ಸುಳ್ಳು ಹೇಳಿದ್ದೇಕೆ ಎಂದು ಅಶ್ವತ್ಥ ನಾರಾಯಣ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂದು ಸಂಜೆಯೊಳಗೆ ನಿರ್ಧಾರ:

ಇಂದು ಸಂಜೆಯೊಳಗೆ ಕಾಂಗ್ರೆಸ್​ನ ಎಷ್ಟು ಶಾಸಕರು ಬಿಜೆಪಿಗೆ ಬರುತ್ತಾರೆ ಎಂಬುದರ ಆಧಾರದ ಮೇಲೆ‌ ಮುಂಬೈನಲ್ಲಿರುವ ಕಾಂಗ್ರೆಸ್​ ಶಾಸಕರು ತಮ್ಮ ನಿರ್ಧಾರ ತಿಳಿಸಲಿದ್ದಾರೆ. ಒಂದುವೇಳೆ ಬಿಜೆಪಿಯವರು ಹೇಳಿದಂತೆ 10ಕ್ಕೂ ಹೆಚ್ಚು ಶಾಸಕರು ಬಾರದಿದ್ದರೆ ಅವರು ತಮ್ಮ ಕ್ಷೇತ್ರಗಳಿಗೆ ತೆರಳುವುದಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ನಿನ್ನೆ ಸಂಜೆ ಶಾಸಕ ಉಮೇಶ್​ ಜಾಧವ್​ ಅವರೊಂದಿಗೆ ಸಿಎಂ ಎಚ್​.ಡಿ. ಕುಮಾರಸ್ವಾಮಿ ಮಾತನಾಡಿದ್ದು, ಅದರ ಪರಿಣಾಮ ಇಂದು ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ. ಕ್ಷೇತ್ರದಲ್ಲಿ ಉಮೇಶ ಜಾಧವ್ ಜೊತೆ ಹೊಂದಿಕೊಂಡು ಹೋಗುವಂತೆ ಪ್ರಿಯಾಂಕ್ ಖರ್ಗೆಗೆ ಸಿಎಂ ಎಚ್​.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೆ.ಸಿ. ವೇಣುಗೋಪಾಲ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ತಡರಾತ್ರಿವರೆಗೂ ಮೀಟಿಂಗ್​:

ನಿನ್ನೆ ತಡರಾತ್ರಿಯವರೆಗೂ ಕೆ.ಸಿ. ವೇಣುಗೋಪಾಲ್​ ಜೊತೆಗೆ ಮಾತುಕತೆ ನಡೆಸಿರುವ ಸಿದ್ದರಾಮಯ್ಯ ತಮ್ಮ ಕಾರಿನಲ್ಲೇ ವೇಣುಗೋಪಾಲ್​ ಅವರನ್ನು ಕುಮಾರಕೃಪಾ ಅತಿಥಿಗೃಹಕ್ಕೆ ಬಿಟ್ಟುಹೋಗಿದ್ದಾರೆ. ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ವೇಣುಗೋಪಾಲ್, ಸಿದ್ದರಾಮಯ್ಯ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಈ ವೇಳೆ ಆಪರೇಷನ್​ ಕಮಲದ ಕುರಿತಾಗಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಆಪರೇಷನ್ ಕಮಲದ ಬಗ್ಗೆ ನಮಗೆ ನಂಬಿಕೆ ಇಲ್ಲ. ಜನ ನಮಗೆ ಯಾವ ತೀರ್ಪು ಕೊಟ್ಟಿದಾರೋ ಆ ರೀತಿ ನಡೆದುಕೊಂಡಿದ್ದೇವೆ. ನಮ್ಮ ಶಾಸಕರನ್ನು ಉಳಿಸಿಕೊಳ್ಳಲು ಏನು ಬೇಕೋ ಅದನ್ನು ಮಾಡುತ್ತೇವೆ. ಹಾಗಂತ ನಾವು ಕೌಂಟರ್ ಆಪರೇಷನ್ ಶುರುಮಾಡಿದ್ದೇವೆ ಎಂಬ ಅರ್ಥ ಅಲ್ಲ. ಮುಂಬೈನಲ್ಲಿರುವ ಶಾಸಕರು ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಯಾರೋ ಇಬ್ಬರು ಮೂರು ಜನ ಹೋಗಿದ್ದಾರೆ. ಅವರು ವಾಪಾಸ್ ಬರುತ್ತಾರೆ. ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.

Comments are closed.