ಕರ್ನಾಟಕ

ತಮಿಳುನಾಡಿನ ಪಂಚಾಂಗ ನೋಡಿ ಮುಂದೆ ಏನಾಗುತ್ತದೆ ಎಂದು ಹೇಳುತ್ತೇನೆ: ರೇವಣ್ಣ ವ್ಯಂಗ್ಯ

Pinterest LinkedIn Tumblr


ಹಾಸನ: ರಾಜ್ಯ ರಾಜಕೀಯದಲ್ಲಿ ಮುಂದೆ ಏನಾಗುತ್ತದೆ ಅಂತ ಪಂಚಾಂಗ ನೋಡಿ ಹೇಳುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್. ಡಿ. ರೇವಣ್ಣ ಅವರು ಬುಧವಾರ ಆಪರೇಷನ್‌ ಕಮಲದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಇಂದು ನಗರದಲ್ಲಿ, ಮುಂದೆ ಏನಾಗುತ್ತದೆ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೇವಣ್ಣ, ತಮಿಳು ನಾಡಿನ ಪಂಚಾಂಗ ಬಂದಿದೆ. ಅದನ್ನು ನೋಡಿ ಮುಂದೆ ಏನಾಗುತ್ತದೆ ಎನ್ನುವುದನ್ನು ಹೇಳುತ್ತೇನೆ ಎಂದರು.
ನಿನ್ನೆ ತಮಿಳು ನಾಡಿನ ಪಂಚಾಂಗ ಬಂದಿದೆ. ನಮ್ಮ ಪಂಚಾಂಗ ಯುಗಾದಿಗೆ ಬರುತ್ತದೆ. ಎರಡನ್ನೂ ಪರಿಶೀಲಿಸಿ ಭವಿಷ್ಯ ಹೇಳುತ್ತೇನೆ ಎಂದು ರೇವಣ್ಣ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ನಮಗೆ ಯಾವುದೇ ಟೆನ್ಷನ್‌ ಇಲ್ಲ. ಹೊಲ ಮನೆ ಕಳೆದುಕೊಳ್ಳುವುದಾದರೆ ಚಿಂತೆ ಮಾಡಬೇಕು. ನಮ್ಮದೂ ಯಾವುದೂ ಹೋಗಿಲ್ಲ , ಆರಾಮಾಗಿ ಇದ್ದೇವೆ ಎಂದಿದ್ದಾರೆ.
ಇದೇ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರೇವಣ್ಣ, ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿಯವರು ಈ ಕೆಲಸ ಮಾಡುತ್ತಿದ್ದಾರೆ. ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಬರಗಾಲ ಇದ್ದರೂ ಬರ ನಿರ್ವಹಣೆ ಮಾಡದೆ ಈ ರೀತಿ‌ ಸರ್ಕಾರ ಅಸ್ಥಿರಕ್ಕೆ ಯತ್ನಿಸಲಾಗುತ್ತಿದೆ. ದೆಹಲಿಗೆ ಶಾಸಕರನ್ನು ಕರೆದುಕೊಂಡು ಹೋಗಿ ಈ ರೀತಿ ಮಾಡಿದ್ದಾರೆ. ಈ ಆಪರೇಷನ್ ಎಲ್ಲ ಬಿಟ್ಟು ರಾಜ್ಯದ ಅಭಿವೃದ್ಧಿಗೆ ಸಹಕರಿಸಿ ಎಂದು ಯಡಿಯೂರಪ್ಪಗೆ ಮನವಿ ಮಾಡುತ್ತೇನೆ ಎಂದರು.
ರಾಜ್ಯದ ಹಿತ ಕಾಯುವಲ್ಲಿ ಬಿಜೆಪಿ ವಿಫಲವಾಗಿದೆ. ಇದೇ ರೀತಿ ಮುಂದುವರಿದರೆ ಬಿಜೆಪಿ ಶಾಸಕರ ಸಂಖ್ಯೆ ಕಳೆದ ಬಾರಿಯಂತೆ 40ಕ್ಕೆ ಕುಸಿಯಲಿದೆ. ದೇವರು ಎಂದು ಒಬ್ಬ ಇದ್ದಾನಲ್ಲಾ ಅವನು ನೋಡಿಕೊಳ್ಳುತ್ತಾನೆ ಎಂದು ಹೇಳಿದರು.

Comments are closed.