ಕರ್ನಾಟಕ

ಇತಿಹಾಸ ಪ್ರಸಿದ್ಧ ಕಳೆಗಟ್ಟಿದ ಕೆಂಗಲ್ ಭಾರಿ ದನಗಳ ಜಾತ್ರೆ

Pinterest LinkedIn Tumblr


ಚನ್ನಪಟ್ಟಣ: ಇತಿಹಾಸ ಪ್ರಸಿದ್ಧ ಕೆಂಗಲ್ ಭಾರಿ ದನಗಳ ಜಾತ್ರೆ ಕಳೆಗಟ್ಟಿದೆ. ಸಂಕ್ರಾಂತಿಯ ಮಾರನೆಯ ದಿನವಾದ ಬುಧವಾರ ನಡೆದ ಈ ಜಾತ್ರೆಯಲ್ಲಿ ನೂರಾರು ರೈತರು ರಾಸುಗಳೊಂದಿಗೆ ಪಾಲ್ಗೊಂಡರು.

ಆಂಜನೇಯಸ್ವಾಮಿ ದೇವಾಲಯದ ಪ್ರಾಂಗಣ, ನೀಲಗಿರಿ ತೋಪು ಹಾಗೂ ಪಕ್ಕದ ಖಾಸಗಿ ಜಾಗದಲ್ಲಿ ನೂರಾರು ರಾಸುಗಳನ್ನು ಕಟ್ಟಲಾಗಿತ್ತು. ರಾಸುಗಳ ಖರೀದಿ ಭರದಿಂದ ಸಾಗಿತ್ತು. ಜತೆಗೆ ರಾಸುಗಳ ಪ್ರದರ್ಶನವೂ ನಡೆಯಿತು.

ಕೆಲವು ರೈತರು ಮೆರವಣಿಗೆಯ ಮೂಲಕ ರಾಸುಗಳನ್ನು ಕರೆತಂದರೆ ಕೆಲವರು ಟೆಂಪೋಗಳ ಮೂಲಕ ಕರೆದೊಯ್ಯುತ್ತಿದ್ದರು. ರಾಸುಗಳಿಗೆ ಮೇವಿನ ಸಮಸ್ಯೆಯಾಗದಂತೆ ರೈತರು ತಾವೇ ಹುಲ್ಲನ್ನು ಸಂಗ್ರಹಿಸಿಕೊಂಡಿದ್ದರು. ಇನ್ನು ದೇವಾಲಯದ ಪ್ರಾಂಗಣದಲ್ಲಿ ಅಲ್ಲಲ್ಲಿ ತೊಟ್ಟಿಗಳಲ್ಲಿ ನೀರು ಸಂಗ್ರಹಿಸಲಾಗಿತ್ತು. ಖಾಸಗಿ ವ್ಯಕ್ತಿಗಳೂ ಮೇವು ಮಾರಾಟ ಮಾಡುತಿದ್ದರು. ಕುಡಿಯುವ ನೀರಿಗೆ ಸಮಸ್ಯೆ ಎದುರಾಗದಂತೆ ತಾಲೂಕು ಆಡಳಿತ ಕ್ರಮ ಕೈಗೊಂಡಿತ್ತು. ನೆರೆಯ ಮಂಡ್ಯ, ತುಮಕೂರು, ಬೆಂಗಳುರು ಗ್ರಾಮಾಂತರ ಜಿಲ್ಲೆಗಳಿಂದಲೂ ರೈತರು ರಾಸುಗಳೊಂದಿಗೆ ಆಗಮಿಸಿದ್ದರು.

ಖರೀದಿ ಜೋರು: ತಾಲೂಕಿನಲ್ಲಿ ಈ ಬಾರಿ ಕುಡಿಯುವ ನೀರಿನ ಯೋಜನೆಯಡಿ ಕೆರೆಗಳು ತುಂಬಿರುವುದರಿಂದ ಕೃಷಿ ಚಟುವಟಿಕೆ ಮತ್ತೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿಗೆ ಅಗತ್ಯವಾದ ರಾಸುಗಳ ಖರೀದಿ ರೈತರಿಂದಲೇ ಜೋರಾಗಿತ್ತು. ದುಬಾರಿ ಬೆಲೆ ಕೊಡಬೇಕಿರುವುದರಿಂದ ಯಂತ್ರಗಳ ಮೂಲಕ ಕೃಷಿ ಸಾಧ್ಯವಾಗುತ್ತಿಲ್ಲ. ಹಿಂದಿನಂತೆ ರಾಸುಗಳ ಮೂಲಕ ಕೃಷಿ ಕಾರ್ಯ ಆರಂಭಿಸುತ್ತೇವೆ, ರಾಸುಗಳಿಲ್ಲದೆ ಮನೆಗಳು ಬಿಕೋ ಎನ್ನುತ್ತಿದ್ದವು, ಇದೀಗ ಮತ್ತೆ ರಾಸುಗಳನ್ನು ಕರೆದೊಯ್ದು ಸಾಂಪ್ರದಾಯಿಕ ಕೃಷಿ ಆರಂಭ ಮಾಡುತ್ತೇವೆ ಎಂದು ಸ್ಥಳೀಯ ರೈತ ರಾಮಣ್ಣ ತಿಳಿಸಿದರು.

ದಶಕದಿಂದೀಚೆಗೆ ಗ್ರಾಮೀಣ ಭಾಗದಲ್ಲಿ ನಾಟಿಹಸುಗಳ ಸಂಖ್ಯೆ ಕಡಿಮೆಯಾಗಿತ್ತು. ಆ ಜಾಗದಲ್ಲಿ ಹೆಚ್ಚು ಹಾಲು ಉತ್ಪಾದಿಸುವ ಸೀಮೆ ಹಸುಗಳು ಸ್ಥಾನ ಪಡೆದಿದ್ದವು. ಆದರೆ ಮೂರು ವರ್ಷದಿಂದೀಚೆಗೆ ಕೆರೆಗಳು ಭರ್ತಿಯಾಗಿರುವುದರಿಂದ ರೈತರು ನಾಟಿ ಹಸುಗಳನ್ನು ಕೊಂಡುತಂದಿದ್ದು ಜಾತ್ರೆಯಲ್ಲಿ ಗೋಚರವಾಯಿತು. ಕೆಲವರು ಇನ್ನೂ ಉತ್ತಮವಾಗಿರುವ ರಾಸುಗಳನ್ನು ಕೊಳ್ಳಲು ಹಳೆಯ ಜಾನುವಾರುಗಳನ್ನು ಮಾರಾಟಕ್ಕೆ ಕರೆತಂದಿದ್ದರು. ಇನ್ನೂ ಕೆಲವರು ತಾವು ಸಾಕಿದ ರಾಸುಗಳನ್ನು ಪ್ರದರ್ಶನ ಮಾಡುವ ಮೂಲಕ ಜಾತ್ರೆಗೆ ಮೆರಗು ನೀಡಿದರು.

Comments are closed.