ಕರ್ನಾಟಕ

ಕುಮಾರಸ್ವಾಮಿ ಬೆಂಬಲಕ್ಕೆ ಮೂರು ಬಿಜೆಪಿ ಶಾಸಕರು; ಮೈತ್ರಿ ಪಕ್ಷಗಳಿಂದಲೂ ಆಪರೇಷನ್​!

Pinterest LinkedIn Tumblr


ಬೆಂಗಳೂರು: ಬಿಜೆಪಿಯಿಂದ ಆಪರೇಷನ್ ಕಮಲ‌ ಹಿನ್ನೆಲೆಯಲ್ಲಿ ಶಾಸಕರ ಮೇಲೆ ನಿಗಾ ವಹಿಸಲು ಜೆಡಿಎಸ್ ಸಚಿವರಾದ ಬಂಡೆಪ್ಪ ಕಾಶಂಪೂರ್, ಸಾ ರಾ ಮಹೇಶ್, ಸಿ ಎಸ್ ಪುಟ್ಟರಾಜು ಅವರಿಗೆ ಜವಾಬ್ದಾರಿ ವಹಿಸಿದ್ದಾರೆ. ಜೆಡಿಎಸ್ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಜೊತೆಗೆ ಶಾಸಕರ ಜೊತೆ ನಿರಂತರ ಸಂಪರ್ಕ ಕಾಯ್ದುಕೊಳ್ಳುವಂತೆ ಸಿಎಂ ಸೂಚಿಸಿದ್ದಾರೆ.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಮಾತುಕತೆ ನಡೆಸಿದ್ದು, ಪಕ್ಷದ ಎಲ್ಲ 37 ಶಾಸಕರ ಮೇಲೆ ನಿಗಾ ವಹಿಸಬೇಕು. ಆಪರೇಷನ್ ಕಮಲಕ್ಕೆ ಜೆಡಿಎಸ್ ಶಾಸಕರು ತುತ್ತಾದರೆ ಪಕ್ಷಕ್ಕೆ ಭಾರೀ ಮುಖಭಂಗ ಆಗಬಹುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿ ಮುಂದುವರೆಯುವಂತೆ ಸಿಎಂಗೆ ಜೆಡಿಎಸ್ ರಾಷ್ಟ್ರಾಧ್ಯಕ್ಷರು ಸಲಹೆಯನ್ನು ನೀಡಿದ್ದಾರೆ.

ಇನ್ನೂ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್​​ ಡಿ ದೇವೇಗೌಡ, ಸರ್ಕಾರಕ್ಕೆ ಯಾವ ತೊಂದರೆಯೂ ಇಲ್ಲ. ನಮ್ಮ ಬಳಿ ಸಾಕಷ್ಟು ಸಂಖ್ಯೆಯ ಶಾಸಕರು ಇದ್ದಾರೆ. ಇಂತಹ ರಾಜಕೀಯ ಆಟಗಳನ್ನ ನಾನು ಸಾಕಷ್ಟು ನೋಡಿರುವೆ. ಕಾಂಗ್ರೆಸ್ ಈ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುತ್ತೆ ಎಂದು ಹೇಳಿದ್ದಾರೆ.

ಬಿಜೆಪಿಯ ಮೂವರು ಶಾಸಕರು ಸಿಎಂ ಸಂಪರ್ಕದಲ್ಲಿ ಇದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕರು ಮುಖ್ಯಮಂತ್ರಿಗಳಿಗೆ ದೂರವಾಣಿಯ ಮೂಲಕ ಎಲ್ಲ ಬೆಳವಣಿಗೆಯ ಪ್ರತಿಯೊಂದು ಮಾಹಿತಿ ನೀಡುತ್ತಿದ್ದು, ನಿಮ್ಮ ಬೆಂಬಲಕ್ಕೆ ನಾವು ನಿಲ್ಲುವುದಾಗಿ ಮೂವರು ಶಾಸಕರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Comments are closed.