ಕರ್ನಾಟಕ

ಸಂಕ್ರಾಂತಿ ಬಳಿಕ ಶುಭಸುದ್ದಿ ಬರೋದರ ಬಗ್ಗೆ ನನಗೇನೂ ಗೊತ್ತಿಲ್ಲ: ಯಡಿಯೂರಪ್ಪ

Pinterest LinkedIn Tumblr

ನವದೆಹಲಿ: ಸಂಕ್ರಾಂತಿ ಬಳಿಕ ಶುಭಸುದ್ದಿ ಬರೋದರ ಬಗ್ಗೆ ನನಗೇನೂ ಗೊತ್ತಿಲ್ಲ, ರಾಜ್ಯದಲ್ಲಿ ಯಾವಾಗ ಏನಾಗತ್ತೆ ಅಂತ ಹೇಳೋಕೆ ನಾನೇನು ಭವಿಷ್ಯಕಾರನಲ್ಲ ಎಂದು ಮಾಜಿ ಮುಖ್ಯಮಂತ್ರಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಸಂಕ್ರಾಂತಿ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತದೆಯೆ ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ “ಇದನ್ನು ಹೇಳೋಕೆ ನಾನೇನು ಭವಿಷ್ಯಕಾರನಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಸರ್ಕಾರ ಹೆಚ್ಚು ದಿನ ಉಳಿಯೋ ಹಾಗೆ ಕಾಣುತ್ತಿಲ್ಲ. ಆದರೆ ಸಂಕ್ರಾಂತಿಯಾಗಲಿ, ಯುಗಾದಿಯಾಗಲಿ ಕಳೆದ ಬಳಿಕ ಶುಭಸುದ್ದಿ ಬರತ್ತೆ ಎನ್ನುವುದು ಕೇವಲ ವದಂತಿ. ನಾವೆಂದೂ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸಲ್ಲ” ಎಂದಿದ್ದಾರೆ.

ಕಾಂಗ್ರೆಸ್ ನ ಅತೃಪ್ತ ಶಾಸಕರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬಿಎಸ್‌ವೈ “ಕಾಂಗ್ರೆಸ್ ನಲ್ಲಿ ಅತೃಪ್ತ ಶಾಸಕರಿದ್ದಾರಾ? ಅವರು ಯಾರೆಂದು ನೀವೇ (ಮಾದ್ಯಮದವರು) ಹುಡುಕಿಕೊಡಿ. ನಾನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ” ಎಂದರು.

ಮುಂಬರುವ ಲೋಕಸಭಾ ಚುನಾವಣೆಗೆ ನಾವು ಹೇಗೆಲ್ಲಾ ತಯಾರಿ ನಡೆಸಬೇಕು? ವಿರೋಧ ಪಕ್ಷವಾಗಿ ನಾವು ಹೇಗೆ ಕೆಲಸ ಮಾಡಬೇಕು ಎಂಬುದನ್ನು ಮೋದಿ ನಮಗೆ ಸೂಚನೆ ಕೊಟ್ಟಿದ್ದಾರೆ. ನಾವು ಶಾಸಕರು ಕೇಂದ್ರದ ಮುಖಂಡರೊಡನೆ ಚುನಾವಣೆ ಕೆಲಸ ಹಾಗೂ ಸಿದ್ದತೆ ಕುರಿತು ಚರ್ಚಿಸಲು ದೆಹಲಿಗೆ ಆಗಮಿಸಿದ್ದೇವೆ. ನನಗೆ ಕಾಂಗ್ರೆಸ್ ನಲ್ಲಿನ ಅತೃಪ್ತಿಯ ಬಗ್ಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ಮೇಲೆ ಗೂಬೆ ಕೂರಿಸಬೇಡಿ!
ಸಿಎಂ ಕುಮಾರಸ್ವಾಮಿಯವರನ್ನು ಕ್ಲರ್ಕ್ ಎಂದ ಮೋದಿ ಹೇಳಿಕೆ ಸಂಬಂಧ ಮಾತನಾಡಿದ ಯಡಿಯೂರಪ್ಪ “ಪ್ರಧಾನಿ ಏನೂ ಸುಖಾಸುಮ್ಮನೆ ಹೇಳಿಕೆ ನೀಡಿಲ್ಲ. ಕುಮಾರಸ್ವಾಮಿ ಹಾಗೆ ಹೇಳಿದ್ದು ಮಾದ್ಯಮಗಳಲ್ಲೇ ಪ್ರಸಾರವಾಗಿತ್ತು. ಇದನ್ನು ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕು.ಸುಮ್ಮನೆ ಪ್ರಧಾನಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ” ಎಂದು ನುಡಿದರು.

ರಾಜ್ಯದ 104 ಬಿಜೆಪಿ ಶಾಸಕರೊಡನೆ ಇಂದು ದೆಹಲಿಯಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಭೆ ನಡೆಸಲಿದ್ದಾರೆ.ಈ ವೇಳೆ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ನಾಯಕರು ಹೇಗೆ ಕೆಲಸ ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಯಲಿದೆ.

Comments are closed.