ರಾಷ್ಟ್ರೀಯ

ಕೊಲೆಗೆ ಪ್ರೇರಣೆ ನೀಡಿದ ದೃಶ್ಯಂ ಚಿತ್ರ ! ಮಹಿಳೆಯ ಹತ್ಯೆ ಮಾಡಿ ತಪ್ಪಿಸಿಕೊಳ್ಳಲು ಹೂಡಿದ್ದ ಸಂಚು ಬಯಲು

Pinterest LinkedIn Tumblr

ಇಂದೋರ್: ಹಿಂದಿಯ ದೃಶ್ಯಂ ಚಿತ್ರ ನೋಡಿ ಇದರಿಂದ ಪ್ರೇರಣೆ ಪಡೆದು ಮಹಿಳೆಯನ್ನು ಕೊಲೆ ಮಾಡಿ ತಪ್ಪಿಸಿಕೊಳ್ಳಲು ಕೆಲವರು ಮಾಡಿದ್ದ ಸಂಚು ಇದೀಗ ಬಯಲಾಗಿದೆ.

ಬಿಜೆಪಿ ನಾಯಕ 65 ವರ್ಷದ ಜಗದೀಶ್ ಕರೋಟಿಯಾ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯನ್ನು ಹತ್ಯೆ ಮಾಡಲು ನೀಲೇಶ್ ಕಶ್ಯಪ್ ಎಂಬಾತನಿಗೆ ಸುಪಾರಿ ನೀಡಿದ್ದು ಕೊಲೆ ಮಾಡುವ ಮುನ್ನ ಜಗದೀಶ್, ಅವರ ಪುತ್ರರಾದ ಅಜಯ್, ವಿಜಯ್, ವಿನಯ್ ಹಾಗೂ ಹಂತಕ ನೀಲೇಶ್ ಕಶ್ಯಪ್ ಐವರು ದೃಶ್ಯಂ ಚಿತ್ರವನ್ನು ನೋಡಿದ್ದರು ಎಂಬ ಮಾಹಿತಿ ಇದೀಗ ಬಯಲಿಗೆ ಬಂದಿದೆ.

2016ರ ಅಕ್ಟೋಬರ್ 16ರಂದು 22 ವರ್ಷದ ಟ್ವಿಂಕಲ್ ಡಾಗ್ರೆ ಎಂಬಾಕೆಯ ಹತ್ಯೆಯಾಗಿತ್ತು ಆಕೆಯನ್ನು ಸುಟ್ಟು ಹಾಕಲಾಗಿತ್ತು. ಆಕೆ ಜಗದೀಶ್ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಬಳಿಕ ಆಕೆ ಜಗದೀಶ್ ನನ್ನು ಪ್ರೀತಿಸಲು ಆರಂಭಿಸಿದ್ದಳು. ಅಲ್ಲದೆ ನಿಮ್ಮ ಜತೆ ಇರುತ್ತೇನೆ ಎಂದು ಹಠ ಹಿಡಿದಿದ್ದು ಇದು ಜಗದೀಶ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಹಾಗಾಗಿ ಆಕೆಯನ್ನು ಕೊಲೆ ಮಾಡಲು ಜಗದೀಶ್ ಮುಂದಾಗಿದ್ದರು.

ಅದರಂತೆ ಹಂತಕ ಒಂದು ಜಾಗದಲ್ಲಿ ನಾಯಿಯ ಶವವನ್ನು ಸುಟ್ಟಿದ್ದಾರೆ. ಬಳಿಕ ಇಲ್ಲಿ ಮನುಷ್ಯನ ಹೆಣ ಸುಡಲಾಗಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಅದು ನಾಯಿಯ ಹೆಣ ಎಂಬುದು ಪೊಲೀಸರಿಗೆ ಖಚಿತಗೊಂಡಿತ್ತು. ನಂತರ ಅದೇ ಜಾಗದಲ್ಲಿ ಟ್ವಿಂಕಲ್ ಮೃತದೇಹವನ್ನು ಸುಡಲಾಗಿತ್ತು. ಈ ಮೂಲಕ ಅವರು ಪೊಲೀಸರ ತನಿಖೆಯ ದಾರಿ ತಪ್ಪಿಸಿದ್ದರು.

ಆದರೆ ಸುದೀರ್ಘ ತನಿಖೆಯ ನಂತರ ಪೊಲೀಸರಿಗೆ ಟ್ವಿಂಕಲ್ ಹೆಣ ಸುಟ್ಟ ಜಾಗದಲ್ಲಿ ಅವಳು ತೊಟ್ಟಿದ್ದ ಚಿನ್ನಾಭರಣ ಸಿಕ್ಕಿತ್ತು. ಇದನ್ನು ಆಧರಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ ಈ ಪ್ರಕರಣದಲ್ಲಿ ಜಗದೀಶ್ ಕೈವಾಡವಿರುವುದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Comments are closed.