ಕರ್ನಾಟಕ

ಕರ್ನಾಟಕ ಮುಖ್ಯಮಂತ್ರಿ ಕ್ಲರ್ಕ್ ಎಂದಿದ್ದ ಮೋದಿಗೆ ಕುಮಾರಸ್ವಾಮಿ ತಿರುಗೇಟು​!

Pinterest LinkedIn Tumblr


ಬೆಂಗಳೂರು: ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ನೆರೆಯ ಮಹಾರಾಷ್ಟ್ರದಲ್ಲಿ ಆಯೋಜನೆಗೊಂಡಿದ್ದ ಬಿಜೆಪಿ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಬೀದರ್​ಗೆ ಬಂದಿಳಿದಿದ್ದರು.

ಈ ವೇಳೆ ಪ್ರಧಾನಿ ಅವರನ್ನು ರಾಜ್ಯ ಸರ್ಕಾರದ ಪರವಾಗಿ ಸಹಕಾರ ಸಚಿವ ಹಾಗೂ ಜೆಡಿಎಸ್ ನಾಯಕ ಬಂಡೆಪ್ಪ ಕಾಶಂಪೂರ್ ಸ್ವಾಗತಿಸಿದ್ದರು.

ಮೋದಿ ಅವರನ್ನು ಸ್ವಾಗತಿಸಿದಾಗ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಯೋಗಕ್ಷೇಮ ವಿಚಾರಿಸಿ, ತಮ್ಮ ಆತ್ಮೀಯ ಗೆಳೆಯ ಎಂದು ಹೇಳಿದ್ದಾಗಿ ಕಾಶಂಪೂರ್ ಹೇಳಿದ್ದರು.

ಈ ಘಟನೆಯ ನಂತರ ಮೋದಿ ಮತ್ತು ಕುಮಾರಸ್ವಾಮಿ ನಡುವೆ ರೈತರ ಸಾಲ ವಿಚಾರವಾಗಿ ಜಟಾಪಟಿಯೇ ನಡೆದಿತ್ತು. ಇದಾದ ವಾರದ ನಂತರ ಮತ್ತೆ ಮೋದಿ ಅವರು ಕುಮಾರಸ್ವಾಮಿ ಹೆಸರನ್ನು ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ.

ಕರ್ನಾಟಕ ಸಿಎಂ, ನಾನು ಇಲ್ಲಿ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ ಒಬ್ಬ ಕ್ಲರ್ಕ್​ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್​ ಮೂಗು ತೂರಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಪ್ರಧಾನಿ ಮೋದಿ ಅವರು ಬಿಜೆಪಿ ರಾಷ್ಟ್ರೀಯ ಮಂಡಳಿ ಸಭೆಯ ಸಮಾರೋಪದಲ್ಲಿ ಇಂದು ಹೇಳಿದ್ದರು.

ಮೋದಿ ಹೀಗೆ ಹೇಳಿಕೆ ನೀಡಿದ ಗಂಟೆಗಳಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಅವರು ಸುಳ್ಳು ಹೇಳಿದ್ದಾರೆ. ನಾನು ಎಂದೂ ಆ ರೀತಿ ಹೇಳಿಕೆ ನೀಡಿಯೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ರೈತಲ ಸಾಲ ಮನ್ನಾ ವಿಚಾರದಲ್ಲೂ ಪ್ರಧಾನಿ ದಾರಿ ತಪ್ಪಿಸಿದ್ದನ್ನು ಕುಮಾರಸ್ವಾಮಿ ಅವರು ಇಲ್ಲಿ ಉಲ್ಲೇಖಿಸಿದ್ದಾರೆ.

ಅಲ್ಲದೇ, ಸಾಲ ಮನ್ನಾದ ಜಿಲ್ಲಾವಾರು ಮಾಹಿತಿಯನ್ನು ಬಹಿರಂಗಗೊಳಿಸಿ, ಪ್ರಧಾನಿ ಮೋದಿ ಸುಳ್ಳನ್ನು ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮೈತ್ರಿ ಸರ್ಕಾರ ಸಂಪೂರ್ಣ ಅವಧಿಯವರೆಗೂ ಆಡಳಿತ ನಡೆಸಲಿದೆ ಮತ್ತು ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಅವರು ಮೋದಿಗೆ ಟಾಂಗ್ ನೀಡಿದ್ದಾರೆ.

ಸಿದ್ದರಾಮಯ್ಯ ಕೂಡ ಟೀಕೆ:
ಇದೇ ವೇಳೆ, ಪ್ರಧಾನಿ ಮೋದಿ ವಿರುದ್ಧ ಹೆಚ್​ಡಿಕೆ ಮಾಡಿರುವ ತಿರುಗೇಟಿಗೆ ಸಿದ್ದರಾಮಯ್ಯ ಕೂಡ ಧ್ವನಿಗೂಡಿಸಿದ್ದಾರೆ.

ಹುಟ್ಟುಗುಣ ಸುಟ್ಟರೂ….

ಮೋದಿ ಅವರ ಹುಟ್ಟುಗುಣ ಸುಟ್ಟರೂ ಹೋಗದು ಎಂದು ಟೀಕಿಸಿರುವ ಸಿದ್ದರಾಮಯ್ಯ, ಮೋದಿ ಅವರು ಆರೆಸ್ಸೆಸ್​ನ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಈ ಅನುಭವದಲ್ಲೇ ಅವರು ಕುಮಾರಸ್ವಾಮಿ ಬಗ್ಗೆ ಮಾತನಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

Comments are closed.