ಕರ್ನಾಟಕ

ಲೋಕಸಭಾ ಚುನಾವಣೆಯಲ್ಲಿ ಇಬ್ಬರು ದೇವೇಗೌಡರ ಮೊಮ್ಮಕ್ಕಳು ಸ್ಪರ್ಧೆ ಬಹುತೇಕ ಖಚಿತ

Pinterest LinkedIn Tumblr


ಬೆಂಗಳೂರು: ತಿಂಗಳ ಹಿಂದೆ ಜೆಡಿಎಸ್​ ಪಕ್ಷದ ಸರ್ವೋಚ್ಚ ನಾಯಕ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮಂಗಳೂರಿನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದು, ಪಕ್ಷದ​ ಪ್ರಭಾವಶಾಲಿ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಫಾರೂಖ್ ಅವರ ಮಗಳು ಫಿಜಾ ಮದುವೆಯಲ್ಲಿ ಭಾಗಿಯಾಗಿದ್ದರು.

ಈ ಮದುವೆ ಸಮಾರಂಭದಲ್ಲಿ ದೇವೇಗೌಡರ ಮಕ್ಕಳಾದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಶಾಸಕಿ ಹಾಗೂ ಸೊಸೆ ಅನಿತಾ ಕುಮಾರಸ್ವಾಮಿ ಮತ್ತು ಮೊಮ್ಮಕ್ಕಳಾದ ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಇಡೀ ಗೌಡ ಕುಟುಂಬವೇ ಭಾಗಿಯಾಗಿತ್ತು.

ಆದರೆ, ಸಮಾರಂಭದಲ್ಲಿ ಕೇಂದ್ರ ಬಿಂದುಗಳಾಗಿದ್ದ ಪ್ರಜ್ವಲ್ ಮತ್ತು ನಿಖಿಲ್ ಪರಸ್ಪರ ಅಂತರ ಕಾಯ್ದುಕೊಂಡೇ ಇದ್ದರು. ಅವರ ನಡುವಿನ ಸಂಬಂಧ ಹೇಗಿದೆ ಎಂಬುದು ಸಾರ್ವಜನಿಕಗೊಂಡಿತ್ತು. ಆದಾಗ್ಯೂ, ಅವರಿಬ್ಬರೂ ತಮ್ಮ ತಾತನೊಂದಿಗೆ ಮಾತುಕತೆ ನಡೆಸುತ್ತಿದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರು ಸ್ಪರ್ಧಿಸಲಿದ್ದಾರೆ ಎಂಬ ವದಂತಿಗೆ ಇದು ಇಂಬು ನೀಡುವಂತಿತ್ತು.

ರಾಜಕೀಯ ಶಕ್ತಿಗಾಗಿ ಗೌಡ ಕುಟುಂಬದ ಮೂರನೇ ತಲೆಮಾರು ಕಿತ್ತಾಟ ನಡೆಸುತ್ತಿರುವುದು ತಿಳಿಯದ ಗುಟ್ಟೇನಲ್ಲ. ಕುಟುಂಬ ಹಿರಿಕ ದೇವೇಗೌಡ ಅವರು ತಮ್ಮದೇ ಕ್ಷೇತ್ರದಲ್ಲಿ 14 ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅವರ ಮಕ್ಕಳಾದ ರೇವಣ್ಣ ಹಾಗೂ ಕುಮಾರಸ್ವಾಮಿ ಅವರೂ ಸಹ ರಾಜ್ಯ ರಾಜಕೀಯದಲ್ಲಿ ಬಲಿಷ್ಠ ನಾಯಕರಾಗಿದ್ದಾರೆ.

ಕುಮಾರಸ್ವಾಮಿ ಅವರ ಹೆಂಡತಿ ಅನಿತಾ ಅವರು ಎರಡು ಬಾರಿ ಶಾಸಕಿಯಾಗಿದ್ದಾರೆ. ಭವಾನಿ ರೇವಣ್ಣ ಅವರು ದೇವೇಗೌಡ ಅವರ ತವರು ಕ್ಷೇತ್ರ ಹಾಸನ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಾರೆ.

ತಮ್ಮದೇ ಕುಟುಂಬ ಸದಸ್ಯರಿಗೆ ಪ್ರಮುಖ ಸ್ಥಾನಗಳನ್ನು ನೀಡಿದರೆ ಅದು ಪಕ್ಷದ ನಾಯಕರಿಗೆ ಇರಿಸು-ಮುರಿಸು ತರಿಸುತ್ತದೆ ಎಂಬುದು ರಾಜಕೀಯ ಚಾಣಕ್ಯ ಎಂದೇ ಕರೆಸಿಕೊಳ್ಳುವ ದೇವೇಗೌಡರಿಗೆ ಗೊತ್ತಿಲ್ಲದ ವಿಷಯವೇನಲ್ಲ.

ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದೇವೇಗೌಡ ಅವರು, ಈ ಬಾರಿ ಟಿಕೆಟ್ ಕೇಳಬೇಡ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾಸನದಿಂದ ಟಿಕೆಟ್ ನೀಡಲಾಗುವುದು ಎಂದು ಪ್ರಜ್ವಲ್ ರೇವಣ್ಣಗೆ ಭರವಸೆ ನೀಡಿದ್ದರು. ಈಗ ಪ್ರಜ್ವಲ್ ಹಾಸನ ಕ್ಷೇತ್ರದಿಂದ ಟಿಕೆಟ್ ಕೊಡುವಂತೆ ಒತ್ತಡ ಹಾಕುತ್ತಿದ್ದಾರೆ. ದೇವೇಗೌಡರು ಸಹ ತಮ್ಮ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಡಲು ಸಮ್ಮತಿ ಸೂಚಿಸಿದ್ದಾರೆ.

ಪ್ರಜ್ವಲ್​ಗೆ ಟಿಕೆಟ್ ಸಿಗುತ್ತಿರುವುದರಿಂದ ಪ್ರೇರಣೆಗೊಂಡ ದೇವೇಗೌಡರ ಮತ್ತೊಬ್ಬ ಮೊಮ್ಮಗ, ನಟ ನಿಖಿಲ್ ಕೂಡ ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಾಗಿ ಒತ್ತಡ ತರುತ್ತಿದ್ದಾರೆ.

ಇದರಿಂದ ಚಿಂತಿತರಾದ ದೇವೇಗೌಡರು ಈಗಾಗಲೇ ಪ್ರಜ್ವಲ್​ಗೆ ಟಿಕೆಟ್ ನಿಶ್ಚಯ ಮಾಡಿದ್ದಾರೆ. ನ್ಯೂಸ್ 18 ನೊಂದಿಗೆ ಮಾತನಾಡಿದ ಅವರು, ಪ್ರಜ್ವಲ್​ಗೆ ನೀಡಿದ ಭರವಸೆಯಂತೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟು ತಾವು ಬೇರೆ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ.

ಗೌಡ ಕುಟುಂಬದ ಮೂಲಗಳ ಪ್ರಕಾರ, ನಿಖಿಲ್ ಈಗಾಗಲೇ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಮತ್ತು ಪ್ರಜ್ವಲ್ ಸ್ಪರ್ಧಿಸುವುದಾದರೆ ನಿಖಿಲ್ ಕೂಡ ಸ್ಪರ್ಧೆ ಮಾಡಲಿ ಎಂದು ಕುಮಾರಸ್ವಾಮಿ ಅವರು ಕೂಡ ನಿಲುವು ವ್ಯಕ್ತಪಡಿಸಿದ್ದಾರೆ ಎಂದು ಕುಟುಂಬದ ಆತ್ಮೀಯರು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್​ನ ಎಲ್​.ಆರ್.ಶಿವರಾಮೇಗೌಡ ಭರ್ಜರಿ ಜಯಭೇರಿ ಬಾರಿಸಿದ್ದರು. ಮುಂದಿನ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ ಮಾಡುವುದಾದರೆ ಕ್ಷೇತ್ರವನ್ನು ಬಿಟ್ಟುಕೊಟ್ಟು ಅವರಿಗೆ ದಾರಿ ಸುಗಮ ಮಾಡಿಕೊಡಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ.

ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್-ಜೆಡಿಎಸ್​ ಮೈತ್ರಿ ಮುಂದುವರೆಯಲಿದೆ. ಅದರಂತೆ 28 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ 12 ಕ್ಷೇತ್ರಗಳಿಗೆ ಪಟ್ಟು ಹಿಡಿದಿದೆ. ಆದರೆ, ಜೆಡಿಎಸ್​ಗೆ ಕೇವಲ 8 ಕ್ಷೇತ್ರಗಳನ್ನು ಬಿಟ್ಟುಕೊಡಲು ಕಾಂಗ್ರೆಸ್​ ಮನಸ್ಸು ಮಾಡಿದೆ.

ಒಂದು ವೇಳೆ ಇಬ್ಬರೂ ಮೊಮ್ಮಕ್ಕಳು ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡರೆ ಮತ್ತು ದೇವೇಗೌಡರು ಸೇರಿದಂತೆ ಅವರ ಕುಟುಂಬದಿಂದಲೇ ಮೂವರು ಸದಸ್ಯರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಂತಾಗುತ್ತದೆ.

ಕುಟುಂಬ ಸದಸ್ಯರಿಗೆ ರಾಜಕೀಯ ಸ್ಥಾನ ಕಲ್ಪಿಸುವುದನ್ನು ಸಮರ್ಥಿಸಿಕೊಳ್ಳುವ ದೇವೇಗೌಡರು ಅದಕ್ಕೆ ಮುಲಾಯಂ, ಲಾಲು ಪ್ರಸಾದ್ ಯಾದವ್, ಕರುಣಾನಿಧಿ, ಕೆಸಿಆರ್ ಮತ್ತು ಬಾದಲ್​ ಕುಟುಂಬದ ಹಲವು ಸದಸ್ಯರು ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಇರುವುದಾಗಿ ಉದಾಹರಣೆ ನೀಡುತ್ತಾರೆ. ಈಗಾಗಲೇ ರಾಜ್ಯ ರಾಜಕಾರಣಕ್ಕೆ ದೇವೇಗೌಡರ ಮೂರನೇ ಪೀಳಿಗೆ ಪ್ರವೇಶಿಸಿರುವುದು ಪಕ್ಷದ ಹಿರಿಯ ನಾಯಕರನ್ನು ಕೆಂಗೆಡಿಸಿದೆ.

Comments are closed.