
ಬೆಂಗಳೂರು: ಅನಾರೋಗ್ಯದ ಕಾರಣವೊಡ್ಡಿ ಹೆಚ್. ವಿಶ್ವನಾಥ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆಂಬ ಮಾತು ಕೇಳಿಬರುತ್ತಿದೆ. ಪಕ್ಷದಲ್ಲಿ ತನಗೆ ಮಾಡಲು ಕೆಲಸವೇ ಇಲ್ಲ. ಪಕ್ಷದ ವ್ಯವಹಾರವನ್ನೆಲ್ಲಾ ವರಿಷ್ಠರೇ ನಿರ್ವಹಿಸುತ್ತಾರೆ. ಹೀಗಾಗಿ, ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರುವುದರಲ್ಲಿ ಅರ್ಥವೇ ಇಲ್ಲ ಎಂಬುದು ವಿಶ್ವನಾಥ್ ಅವರ ಮನದ ವ್ಯಥೆಯಾಗಿದೆ ಎಂದು ಕೆಲ ಮೂಲಗಳು ಹೇಳುತ್ತಿವೆ.
ಸಿದ್ದರಾಮಯ್ಯ ಮೇಲೆ ಮುನಿಸಿಕೊಂಡು ಹೆಚ್. ವಿಶ್ವನಾಥ್ ಅವರು ಜಾತ್ಯತೀತ ಜನತಾ ದಳಕ್ಕೆ ಬಂದಿದ್ದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನ ಸೋಲಿಸಲು ದಲಿತ ಮುಖಂಡ ವಿಶ್ವನಾಥ್ ಅವರ ಪಾತ್ರವೂ ಪ್ರಮುಖವಿತ್ತು. ದೇವೇಗೌಡರೊಂದಿಗೆ ಆಪ್ತತೆ ಹೊಂದಿರುವ ವಿಶ್ವನಾಥ್ ಅವರು ಸಮ್ಮಿಶ್ರ ಸರಕಾರದಲ್ಲಿ ಸಚಿವ ಸ್ಥಾನ ಬಯಸಿದ್ದರಾದರೂ ಅವರಿಗೆ ಒಲಿದು ಬರಲಿಲ್ಲ. ಗೌಡರು ವಿಶ್ವನಾಥ್ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದರು. ಆದರೆ, ಜೆಡಿಎಸ್ ಪಕ್ಷದೊಳಗೆ ದೇವೇಗೌಡರ ಕುಟುಂಬದ ಸದಸ್ಯರ ಮಾತೇ ಅಂತಿಮ ಎಂಬುದನ್ನು ಸಂಪೂರ್ಣವಾಗಿ ತಳ್ಳಿಹಾಕಲು ಆಗುವುದಿಲ್ಲ. ಸ್ವಾಭಿಮಾನಿಯಾಗಿರುವ, ರಾಜಕೀಯ ಅನುಭವಿಯಾಗಿರುವ ವಿಶ್ವನಾಥ್ ಅವರು ಸ್ವಂತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವಿರುವವರು. ಆದರೆ, ಪಕ್ಷದಲ್ಲಿ ಹೆಬ್ಬೆಟ್ಟಿನ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರುವುದು ಅವರಿಗೆ ಸುತಾರಾಂ ಇಷ್ಟವಿಲ್ಲ ಎಂದು ಅವರ ಕೆಲ ಆಪ್ತರು ಹೇಳುತ್ತಾರೆ.
ಪಕ್ಷದ ವಿರುದ್ಧ ಬಹಿರಂಗವಾಗಿ ಆರೋಪ ಮಾಡದೆ, ಅನಾರೋಗ್ಯದ ಕಾರಣ ಕೊಟ್ಟು ವಿಶ್ವನಾಥ್ ಅವರು ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ಕೊಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರಾಜಕಾರಣದಿಂದಲೇ ಅವರು ನಿವೃತ್ತರಾದೂ ಆಗಬಹುದು ಎನ್ನುತ್ತವೆ ಮೂಲಗಳು.
ಇದೇ ವೇಳೆ, ವಿಶ್ವನಾಥ್ ರಾಜೀನಾಮೆ ಸಾಧ್ಯತೆಯ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, “ವಿಶ್ವನಾಥ್ ಆರೋಗ್ಯ ಸರಿ ಇಲ್ಲ. ಹೀಗಾಗಿ ಅಧ್ಯಕ್ಷ ಸ್ಥಾನದಿಂದ ದೂರ ಸರಿಯುವ ಮಾತನಾಡಿರಬಹುದು. ಅವರಿಗೆ ಬೇಕಿದ್ದರೆ ಹೆಚ್ಚಿನ ಅಧಿಕಾರ ನೀಡೋಣ. ಯಾವ ರೀತಿಯ ಅಧಿಕಾರ ಬೇಕು ಕೇಳಲಿ” ಎಂದು ಲಘುವಾಗಿ ಮಾತನಾಡಿದ್ದಾರೆ.
Comments are closed.