ಕರ್ನಾಟಕ

ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ: ಮಾಜಿ ಶಾಸಕರ ಶಕ್ತಿ ಪ್ರದರ್ಶನ

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರಕ್ಕೆ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಮಾಜಿ ಸಿಎಂ ನೇತೃತ್ವದ ಕೈ ಪಾಳೆಯದಲ್ಲಿ ಪ್ರತಿನಿತ್ಯವೂ ಒಂದಲ್ಲ ಒಂದು ರೀತಿಯ ಬಂಡಾಯ ಭುಗಿಲೇಳುತ್ತಿದೆ. ಸದ್ಯಕ್ಕೆ ನಮ್ಮನ್ನ ಮೈತ್ರಿ ಸರ್ಕಾರದಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಕಾಂಗ್ರೆಸ್​ನ ಮಾಜಿ ಶಾಸಕರು ಸಭೆ ಸೇರಿದ್ದಾರೆ. ಈ ಮೂಲಕ ಮೈತ್ರಿ ಸರ್ಕಾರದ ವಿರುದ್ಧ ಶಿಕ್ತಿ ಪ್ರದರ್ಶನಕ್ಕೆ ಮಾಜಿ ಶಾಸಕರು ಮುಂದಾಗಿದ್ದಾರೆ. ಹೀಗಾಗಿ ಕಾಂಗ್ರೆಸ್​ನ ರಾಜ್ಯ ನಾಯಕರಿಗೆ ತುಸು ಹೆಚ್ಚೇ ತಲೆನೋವು ಶುರುವಾಗಿದೆ.

ಮಾಜಿ ಶಾಸಕ ಚೆಲುವರಾಯ ಸ್ವಾಮಿ ನೇತೃತ್ವದಲ್ಲಿ ಇಂದು ಸಭೆಯನ್ನು ನಡೆಸಲಾಗಿದೆ. ಈ ವೇಳೆ ಸಭೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಮಾಜಿ ಶಾಸಕರು ಭಾಗಿಯಾಗಿದ್ದಾರೆ. ಮೈತ್ರಿ ಸರ್ಕಾರದಲ್ಲಿ ನಮ್ಮ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಈ ಕಾರಣದಿಂಣದಲೇ ಸ್ಥಳೀಯ ಕಾರ್ಯಕರ್ತರು ಭಾರೀ ಅಸಮಾಧಾನಗೊಂಡಿದ್ಧಾರೆ. ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇವರ ಅಸಮಾಧಾನದಿಂದ ಕಾಂಗ್ರೆಸ್​​ನ ತಳಮಟ್ಟದ ಸಂಘಟನೆಗೆ ಪೆಟ್ಟಾಗುತ್ತಿದೆ ಎಂದು ಸಭೆಯಲ್ಲಿ ಚರ್ಚಿಸಲಾಗಿದೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಅಭ್ಯರ್ಥಿಗಳು ಬಿಜೆಪಿ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಕೆಲ ಮಾಜಿ ಶಾಸಕರು ಲೋಕಸಭೆ ಚುನಾವಣೆಯ ಟಿಕೆಟ್​​ ಆಕಾಂಕ್ಷಿಗಳಾಗಿದ್ದಾರೆ.ಹೀಗಾಗಿ ಮಾಜಿ ಶಾಸಕರು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಟಿಕೆಟ್​​ಗೆ ಪಡೆಯಲು ಸರ್ಕಸ್​​ ನಡೆಸುತ್ತಿದ್ದಾರೆ. ಅಲ್ಲದೇ ಕೆಲವು ಕಡೆ ಜೆಡಿಎಸ್​ಗೆ ಸೀಟು ಬಿಟ್ಟುಕೊಡುವ ಕಾರಣಕ್ಕೆ ಕಾಂಗ್ರೆಸ್​​ ಸಂಘಟನೆಗೆ ಪೆಟ್ಟು ಬೀಳುತ್ತದೆ ಎಂಬುದು ಮಾಜಿ ಶಾಸಕರ ಅಳಲು.

ಒಂದೆಡೆ ಸಂಪುಟ ವಿಸ್ತರಣೆ ಒತ್ತಡ, ಇನ್ನೊಂದೆಡೆ ಮಾಜಿ ಶಾಸಕರ ಅಸಮಾಧಾನದಿಂದ ರಾಜ್ಯ ಕಾಂಗ್ರೆಸ್​ ನಾಯಕರಿಗೆ ನಿದ್ದೆ ಇಲ್ಲದಂತಾಗಿದೆ. ತಮಗೆ ಮಂತ್ರಿ ನೀಡುವಂತೆ ಸಚಿವಾಕಾಂಕ್ಷಿಗಳು ದಂಬಾಲು ಬಿದ್ದಿದ್ದಾರೆ. ಇನ್ನೊಂದೆಡೆ ಸಚಿವ ಸ್ಥಾನ ವಂಚಿತ ಹಿರಿಯ ನಾಯಕರು ಕೂಡ ಲಾಬಿ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮಾಜಿ ಶಾಸಕರ ಬಂಡಾಯ ಕಾಂಗ್ರೆಸ್​ಗೆ ಕುತ್ತು ತಂದಿದೆ.

ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟು ಕೊಟ್ಟರೆ, ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಅಸ್ತಿತ್ವವೇ ಇಲ್ಲದಂತಾಗುತ್ತದೆ. ಜೊತೆಗೆ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಹೊಡೆತ ಬೀಳುತ್ತದೆ. ಈಗಾಗಲೇ ಚುನಾವಣೆಯಲ್ಲಿ ಸೋಲುಂಡಿರುವ ಮುಖಂಡರು ಅಧಿಕಾರವಿಲ್ಲದೇ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವುದಕ್ಕೆ ಕಷ್ಟವಾಗಿದೆ. ಕಾರ್ಯಕರ್ತರು ಸಹ ಉತ್ಸಾಹ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೀಗಾಗಿ ನಮ್ಮನ್ನು ಕಡೆಗಣಿಸುತ್ತಿರುವ ಮೈತ್ರಿ ಸರ್ಕಾರಕ್ಕೆ ಪಾಠ ಕಲಿಸಬೇಕೆಂದು ಚೆಲುವರಾಯ ಸ್ವಾಮಿ, ಎ.ಮಂಜು, ಬಾಲಕೃಷ್ಣ ಸೇರಿದಂತೆ 20ಕ್ಕೂ ಹೆಚ್ಚು ಮಂದಿ ಮಾಜಿ ಶಾಕಸರು ನಿರ್ಧರಿಸಿದ್ದಾರೆ ಎನ್ನುತ್ತಿವೆ ಮೂಲಗಳು.

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಇಂತಹ ಬೆಳವಣಿಗೆ ಪಕ್ಷಕ್ಕೆ ಬಿಸಿತುಪ್ಪವಾಗಿದೆ. ಮಾಜಿ ಶಾಸಕರ ನಡೆ ಕುತೂಹಲ ಕೆರಳಿಸಿದೆ. ಇದರ ಅಸಮಾಧಾನ ಕಾಂಗ್ರೆಸ್ ಪಕ್ಷಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಯಾವ ಕಾರ್ಯತಂತ್ರ ಅನುಸರಿಸುತ್ತಾರೆ ಎಂದು ನೋಡಬೇಕಿದೆ.

Comments are closed.