ರಾಷ್ಟ್ರೀಯ

ಡಿ.​ 31ರ ನಂತರ ನಿಮ್ಮ ಹಳೆಯ ಎಟಿಎಂ ಕಾರ್ಡ್​ ಬಂದ್!

Pinterest LinkedIn Tumblr


ಬ್ಯಾಕಿಂಗ್ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳಿಂದ ಡಿಸೆಂಬರ್​ 31 ರ ನಂತರ ಕೆಲ ಎಟಿಎಂ ಕಾರ್ಡ್​ಗಳು ಬಂದ್​ ಆಗಲಿದೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್ (RBI) ತಿಳಿಸಿದೆ. ಹೊಸ ವರ್ಷದಿಂದ ಯುರೋಪೇ, ಮಾಸ್ಟರ್​ಕಾರ್ಡ್​, ವೀಸಾ (ಇಎಂವಿ) ಚಿಪ್ ಹಾಗೂ ಪಿನ್​ ಆಧಾರಿತ ಡೆಬಿಟ್​ ಮತ್ತು ಕ್ರೆಡಿಟ್ ಕಾರ್ಡ್​ ಮಾತ್ರ ಚಲಾವಣೆಯಲ್ಲಿರಲಿದೆ ಎಂದು ಆರ್​ಬಿಐ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮ್ಯಾಗ್ನೆಟಿಕ್ ಸ್ಟ್ರೈಪ್ ಹೊಂದಿರುವ ಕಾರ್ಡ್​ನ್ನು ಬ್ಯಾಂಕುಗಳು ಸ್ಥಗಿತಗೊಳಿದ್ದು, ಅದರ ಬದಲಿಗೆ ಇಎಂವಿ ಚಿಪ್ ಇರುವ ಕಾರ್ಡ್ ಗಳನ್ನು ಬ್ಯಾಂಕುಗಳು ನೀಡಲಿದೆ. ಎಟಿಎಂ ವಂಚನೆ ಮತ್ತು ಕಾರ್ಡ್​ನ ದುರ್ಬಳಕೆಯನ್ನು ತಡೆಯಲು ಬ್ಯಾಂಕುಗಳು ಹೊಸ ಕಾರ್ಡ್​ನ್ನು ಈಗಾಗಲೇ ವಿತರಿಸುತ್ತಿದ್ದು, ಎಸ್​ಬಿಐ ಬ್ಯಾಂಕ್​ ಡಿ. 28 ರೊಳಗೆ ಕಾರ್ಡ್​ ಬದಲಿಸುವಂತೆ ಗ್ರಾಹಕರಲ್ಲಿ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ಹಳೆಯ ಮಾದರಿ ಕಾರ್ಡ್​ಗಳನ್ನು ಬಳಸಿ ಡಿಸೆಂಬರ್ 31 ರ ನಂತರ ಯಾವುದೇ ಎಟಿಎಂ ಗಳಿಂದ ನಗದು ವಿತ್​ಡ್ರಾ ಮಾಡಲು ಸಾಧ್ಯವಾಗುವುದಿಲ್ಲ.

ಈ ಬಗ್ಗೆ ಈಗಾಗಲೇ ಬ್ಯಾಂಕ್‌ಗಳು ಬಳಕೆದಾರರ ಮೊಬೈಲ್‌ಗೆ ಸಂದೇಶ ಕಳುಹಿಸಿ ಮಾಹಿತಿ ನೀಡಿದ್ದು, ಹಳೆಯ ಡೆಬಿಟ್​ ಕಾರ್ಡ್​ ಹೊಂದಿರುವವರು ಶೀಘ್ರದಲ್ಲೇ ಕಾರ್ಡ್​ ಬದಲಿಸುವಂತೆ ತಿಳಿಸಲಾಗಿದೆ.

ಏನಿದು ಇಎಂವಿ ಚಿಪ್‌

ಬ್ಯಾಂಕುಗಳು ಇತ್ತೀಚೆಗೆ ಸಿಮ್‌ ಅಳತೆಯ ಚಿಪ್‌ ಹೊಂದಿರುವ ಎಟಿಎಂ ಕಾರ್ಡ್​ಗಳನ್ನು ನೀಡುತ್ತಿದೆ. ಈ ಹಿಂದೆ ಬಳಕೆಯಾಗುತ್ತಿದ್ದ ಮ್ಯಾಗ್ನೆಟಿಕ್‌ ಸ್ಟ್ರೈಪ್‌ ಕಾರ್ಡ್‌ಗಿಂತ ಈ ಕಾರ್ಡ್‌ ಹೆಚ್ಚು ಸುರಕ್ಷತೆಯಿಂದ ಕೂಡಿರುತ್ತದೆ. ಆನ್‌ಲೈನ್‌ ಮೂಲಕ ಖಾತೆಯಿಂದ ಹಣ ದೋಚುವ ವಂಚಕರ ಹಾವಳಿಯನ್ನು ತಡೆಯಲು ಆರ್‌ಬಿಐ ಎಲ್ಲ ಬ್ಯಾಂಕ್‌ಗಳಿಗೆ ಹೊಸ ಮಾದರಿಯ ಡೆಬಿಟ್‌ ಕಾರ್ಡ್‌ ವಿತರಿಸುಂತೆ ಸೂಚಿಸಿತ್ತು. ಅಲ್ಲದೆ ಹೊಸ ಗ್ರಾಹಕರಿಗೆ ಬ್ಯಾಂಕ್‌ಗಳು ಇಎಂವಿ ಚಿಪ್‌ ಇರುವ ಎಟಿಎಂ ಕಾರ್ಡ್‌ಗಳನ್ನೇ ನೀಡುತ್ತಿವೆ.

ಹಳೆಯ ಎಟಿಎಂ ಕಾರ್ಡ್‌
ಹಳೆಯ ಎಟಿಎಂ ಕಾರ್ಡ್‌ನ ಮ್ಯಾಗ್ನೆಟಿಕ್‌ ಸ್ಟ್ರೈಪ್‌ನಲ್ಲಿ ಎನ್‌ಕ್ರಿಪ್ಟ್ ಆಗಿರುವ ಡೇಟಾವನ್ನು ಕದಿಯಲು ಸಾಧ್ಯವಿದ್ದು, ಈ ಮೂಲಕವೇ ಆನ್​ಲೈನ್ ವಂಚಕರು ಖಾತೆಗಳಿಗೆ ಕನ್ನ ಹಾಕುತ್ತಿದ್ದರು. ಹಾಗೆಯೇ ಕಾರ್ಡ್‌ ಕಳೆದುಕೊಂಡರೆ ಅಥವಾ ಕಳವಾದರೆ ಅದನ್ನು ಬಳಸಿ ಖಾತೆಯಿಂದ ಹಣವನ್ನು ಲಪಟಾಯಿಸಬಹುದಾಗಿತ್ತು. ಹೊಸ ಮಾದರಿಯ ಚಿಪ್‌ ಆಧಾರಿತ ಕಾರ್ಡುಗಳಿಂದ ಇಂತಹ ವಂಚನೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗೆಯೇ ಎಟಿಎಂ ಯಂತ್ರಗಳಿಗೆ ಸ್ಕಿಮ್ಮಿಂಗ್‌ ಉಪಕರಣ ಇರಿಸಿ ಕಳವು ಮಾಡುವುದನ್ನು ತಡೆಯಲು ಈ ಕಾರ್ಡ್​ಗಳು ಸಮರ್ಥ ಎನ್ನಲಾಗಿದೆ.

ಹೊಸ ಕಾರ್ಡ್​ ಪಡೆಯುವುದು ಹೇಗೆ?
ಗ್ರಾಹಕರು ನೇರವಾಗಿ ಬ್ಯಾಂಕ್‌ ಶಾಖೆಗೆ ತೆರಳಿ ಅರ್ಜಿ ಸಲ್ಲಿಸಿ ಇಎಂವಿ ಚಿಪ್‌ ಇರುವ ಎಟಿಎಂ ಕಾರ್ಡ್​ನ್ನು ಪಡೆಯಬಹುದು. ಈ ಕಾರ್ಡುಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ಈಗಾಗಲೇ ಶೇ. 50 ರಿಂದ ಶೇ. 70 ರಷ್ಟು ಗ್ರಾಹಕರು ತಮ್ಮ ಕಾರ್ಡನ್ನು ಬದಲಿಸಿದ್ದು, ಇನ್ನು ಎರಡು ವಾರಗಳ ಸಮಯವಕಾಶ ಮಾತ್ರ ಇದೆ. ಹೀಗಾಗಿ ಶೀಘ್ರದಲ್ಲೇ ಹಳೆಯ ಕಾರ್ಡ್​ನ್ನು ಬದಲಿಸುವಂತೆ ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾ ತಿಳಿಸಿದೆ.

2015 ರ ನಂತರ ಹಲವು ಬ್ಯಾಂಕುಗಳು ಇಎಂವಿ ಕಾರ್ಡುಗಳನ್ನು ವಿಸ್ತರಿಸಿದ್ದು, ನಿಮ್ಮ ಕಾರ್ಡ್​ ಚಿಪ್​ ಸೌಲಭ್ಯವನ್ನು ಹೊಂದಿರದಿದ್ದರೆ ಬ್ಯಾಂಕುಗಳಿಂದ ತೆರಳಿ ವಿಚಾರಿಸಬಹುದು. ಬ್ಯಾಂಕುಗಳು ಹೊಸದಾಗಿ ನೀಡಿರುವ ಯುರೋಪೇ, ಮಾಸ್ಟರ್​ಕಾರ್ಡ್​, ವೀಸಾ (ಇಎಂವಿ) ಕಾರ್ಡುಗಳಲ್ಲಿ ಇಎಂವಿ ಚಿಪ್​ಗಳನ್ನು ಅಳವಡಿಸಲಾಗಿರುತ್ತದೆ ಎಂದು ತಿಳಿಸಲಾಗಿದೆ.

Comments are closed.