ಕರ್ನಾಟಕ

ಲಿಂಗಾಯತ ಪ್ರತ್ಯೇಕ ಧರ್ಮ: ರಾಜ್ಯದ ಪ್ರಸ್ತಾವ ತಿರಸ್ಕರಿಸಿದ ಕೇಂದ್ರ ಸರಕಾರ

Pinterest LinkedIn Tumblr


ಬೆಂಗಳೂರು: ಲಿಂಗಾಯತ-ವೀರಶೈವಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲು ಸಾಧ್ಯವಿಲ್ಲವೆಂದು ಕೇಂದ್ರ ಸರಕಾರ ಸ್ಪಷ್ಟವಾಗಿ ತಳ್ಳಿಹಾಕುವುದರೊಂದಿಗೆ, ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಭಾರಿ ಸದ್ದು ಮಾಡಿದ್ದ ಲಿಂಗಾಯತ ಧರ್ಮ ಸ್ಥಾಪನೆ ಹೋರಾಟಕ್ಕೆ ಸ್ಪಷ್ಟ ಹಿನ್ನಡೆಯಾದಂತಾಗಿದೆ.

ರಾಜ್ಯದ ಎಲ್ಲ ಸರಕಾರಿ ಕಚೇರಿಗಳಲ್ಲಿ ಬಸವೇಶ್ವರರ ಭಾವಚಿತ್ರ ಅಳವಡಿಸುವಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಆದೇಶ ಹೊರಡಿಸಿದಾಗ ಲಿಂಗಾಯತ ಧರ್ಮದ ವಿಚಾರ ಪುನಃ ಮುನ್ನೆಲೆಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಮಹಾಸಭಾದಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಿದ್ದರಾಮಯ್ಯ ಅವರನ್ನು ಅಭಿನಂದಿಸಲಾಯಿತು. ಜತೆಗೆ ಪ್ರತ್ಯೇಕ ಧರ್ಮ ಬೇಡಿಕೆಯಿಡಲಾಗಿತ್ತು. ಆದರೆ, ವೀರಶೈವ ಹಾಗೂ ಲಿಂಗಾಯತ ಎಂಬ ಗೊಂದಲವಿದೆ. ಎರಡೂ ಕಡೆಯವರು ಒಟ್ಟಾಗಿ ಬಂದು ಪ್ರಸ್ತಾವನೆ ಸಲ್ಲಿಸಿದರೆ ಪರಿಶೀಲಿಸುವ ಭರವಸೆಯನ್ನು ಅಂದು ಸಿದ್ದರಾಮಯ್ಯ ನೀಡಿದ್ದರು.

ಇದರ ಬೆನ್ನಿಗೇ ಲಿಂಗಾಯತ ಧರ್ಮದ ಹೋರಾಟವೂ ಪ್ರಖರ ರೂಪ ಪಡೆದುಕೊಂಡಿತ್ತು. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಎಂ.ಬಿ.ಪಾಟೀಲ್‌, ವಿನಯ್‌ ಕುಲಕರ್ಣಿ, ಬಸವರಾಜ ರಾಯರೆಡ್ಡಿ, ಡಾ.ಶರಣಪ್ರಕಾಶ್‌ ಪಾಟೀಲ್‌ ಈ ಹೋರಾಟದೊಂದಿಗೆ ಗುರುತಿಸಿಕೊಂಡಿದ್ದರು. ಮತ್ತೊಂದೆಡೆ ಜೆಡಿಎಸ್‌ ನಾಯಕ ಬಸವರಾಜ ಹೊರಟ್ಟಿ ಅವರೂ ಬೆಂಬಲ ಸೂಚಿಸಿದ್ದರು. ಬಿಜೆಪಿ ನಾಯಕರು ಅಂತರ ಕಾಯ್ದುಕೊಂಡಿದ್ದರೆ ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ ಮತ್ತಿತರರು ವಿರೋಧ ವ್ಯಕ್ತಪಡಿಸಿದ್ದರು. ವೀರಶೈವ ಪಂಚಪೀಠದ ಸ್ವಾಮೀಜಿಗಳಿಂದಲೂ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ವಿರೋಧ ವ್ಯಕ್ತವಾಗಿತ್ತು.

ಲಿಂಗಾಯತ ಪ್ರತ್ಯೇಕ ಧರ್ಮ: ರಾಜ್ಯದ ಪ್ರಸ್ತಾವ ತಿರಸ್ಕರಿಸಿದ ಕೇಂದ್ರ ಸರಕಾರ

ಈ ನಡುವೆಯೂ ಲಿಂಗಾಯತ ಧರ್ಮ ಹೋರಾಟ ಮುಂದುವರಿಯಿತು. ಮಾತೆ ಮಹಾದೇವಿ, ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿ ಲಿಂಗಾಯತರ ಹಲವು ಸ್ವಾಮೀಜಿಗಳು ಈ ಆಂದೋಲನ ಮುನ್ನಡೆಸಲು ಅಖಾಡಕ್ಕಿಳಿದಿದ್ದರು. 2017 ರ ಆಗಸ್ಟ್‌ನಲ್ಲಿ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಮಾಲೋಚನಾ ಸಭೆಯನ್ನೂ ನಡೆಸಲಾಯಿತು. ಬೀದರ್‌, ಕಲಬುರ್ಗಿ, ಬೆಳಗಾವಿ, ಚಿತ್ರದುರ್ಗ, ವಿಜಯಪುರದಲ್ಲಿ ಬೃಹತ್‌ ಸಮಾವೇಶ ನಡೆಸಲಾಯಿತು. ಮಹಾರಾಷ್ಟ್ರದ ಲಾತೂರ್‌, ಸಾಂಗ್ಲಿಯಲ್ಲೂ ಸಭೆಗಳಾಗಿದ್ದವು. ಬೀದರ್‌ ಸಭೆಯಲ್ಲಿ ದೊಡ್ಡ ಮಟ್ಟದ ಜನಾಭಿಪ್ರಾಯ ಮೂಡಿತು. ಇದರ ಬೆನ್ನಿಗೇ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ನೇತೃತ್ವದಲ್ಲಿ ರಾಜ್ಯ ಸರಕಾರ ಈ ಸಂಬಂಧ ತಜ್ಞರ ಸಮಿತಿ ರಚಿಸಿತ್ತು.

ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಶಿಫಾರಸು
ವರದಿ ಸಲ್ಲಿಸಿದ ತಜ್ಞರ ಸಮಿತಿ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವಂತೆ ಶಿಫಾರಸು ಮಾಡಿತು. ಇದನ್ನು ಆಧರಿಸಿ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರಕಾರಕ್ಕೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಹೋರಾಟದ ಹಾದಿ
2017ರ ಜೂನ್‌ 14: ಪ್ರತ್ಯೇಕ ಧರ್ಮಕ್ಕೆ ಬೇಡಿಕೆ ಸಲ್ಲಿಸಿ ಅಖಿಲ ಭಾರತ ವೀರಶೈವ ಮಹಾಸಭಾದಿಂದ ಸಿದ್ದರಾಮಯ್ಯಗೆ ಮನವಿ,

2017ರ ಡಿಸೆಂಬರ್‌ 15: ವೀರಶೈವ ಮತ್ತು ಲಿಂಗಾಯತ ಧರ್ಮ ಸಂಬಂಧ ಸಲ್ಲಿಕೆಯಾದ 35 ಕ್ಕೂ ಅಧಿಕ ಮನವಿ ಪರಾಮರ್ಶಿಸಲು ಅಲ್ಪಸಂಖ್ಯಾತರ ಆಯೋಗಕ್ಕೆ ಸರಕಾರದ ಸೂಚನೆ,

2017ರ ಡಿಸೆಂಬರ್‌ 22: ನ್ಯಾ.ನಾಗಮೋಹನ್‌ದಾಸ್‌ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚನೆ,

2018ರ ಜನವರಿ 23: ಜಾಗತಿಕ ಲಿಂಗಾಯತ ಮಹಾಸಭಾ ರಚನೆ,

2018ರ ಮಾರ್ಚ್‌ 2: ತಜ್ಞರ ಸಮಿತಿಯಿಂದ ವರದಿ ಸಲ್ಲಿಕೆ,

2018ರ ಮಾರ್ಚ್‌ 8: ಲಿಂಗಾಯತ ಧರ್ಮದ ಬಗ್ಗೆ ಸಂಪುಟ ಸಭೆಯಲ್ಲಿ ಮೂರೂವರೆ ತಾಸು ಚರ್ಚಿಸಿದರೂ ಮೂಡದ ಒಮ್ಮತ,

2014ರ ಮಾರ್ಚ್‌ 14: ಈ ವಿಚಾರವಾಗಿ ಪುನಃ ಸೇರಬೇಕಿದ್ದ ಸಂಪುಟ ಸಭೆ ದಿಢೀರ್‌ ಮುಂದೂಡಿಕೆ,

2018ರ ಮಾರ್ಚ್‌ 19: ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಸಂಪುಟ ಸಭೆ ಅನುಮೋದನೆ,

2018ರ ಮಾರ್ಚ್‌ 23: ಸಂಪುಟದ ನಿರ್ಣಯದಂತೆ ಲಿಂಗಾಯತರಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡಲು ಅಧಿಸೂಚನೆ ಹೊರಡಿಸಿ ಈ ಸಂಬಂಧ ಕೇಂದ್ರಕ್ಕೆ ಶಿಫಾರಸು,

2018ರ ನವೆಂಬರ್‌ 13: ರಾಜ್ಯದ ಶಿಫಾರಸು ಅಂಗೀಕರಿಸಲು ಸಾಧ್ಯವಿಲ್ಲವೆಂದ ಕೇಂದ್ರ ಸರಕಾರ.

Comments are closed.