ಕರ್ನಾಟಕ

ತೆಲಂಗಾಣ ವಿಧಾನಸಭಾ ಚುನಾವಣಾ ಅಖಾಡದಲ್ಲಿಯೂ ಡಿಕೆಶಿ​ ಹವಾ

Pinterest LinkedIn Tumblr

ಹೈದ್ರಾಬಾದ್​: ರಾಜ್ಯಸಭಾ ಸದಸ್ಯ ಅಹ್ಮದ್​ ಪಟೇಲ್​ ಅವರನ್ನು ಮತ್ತೆ ರಾಜ್ಯಸಭೆಗೆ ಆಯ್ಕೆ ಮಾಡುವಲ್ಲಿ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರ ರಚನೆ ಮಾಡುವಲ್ಲಿ ಬಹುಮುಖ್ಯ ಪಾತ್ರವಹಿಸಿ, ಬಿಜೆಪಿ ರಾಷ್ಟ್ರ ನಾಯಕರಿಗೆ ಸಾವಲು ಹಾಕಿ, ಬಹುಪಾಲು ಯಶಸ್ವಿಯಾದವರು ಡಿ.ಕೆ. ಶಿವಕುಮಾರ್​. ಈ ಮೂಲಕ ಶಿವಕುಮಾರ್​ ತಾವು ಎಷ್ಟು ಪ್ರಭಾವಿ ಎಂಬುದನ್ನು ರಾಷ್ಟ್ರ ಮಟ್ಟದಲ್ಲಿ ಸಾಬೀತು ಮಾಡಿದ್ದರು. ಇದೀಗ ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದೊಳಗೆ ಎದ್ದಿರುವ ಆಂತರಿಕ ಬಂಡಾಯ ಶಮನದ ಜಬಾವ್ದಾರಿ ಕೂಡ ಡಿ.ಕೆ.ಶಿವಕುಮಾರ್ ಹೆಗಲ ಮೇಲೆ ಬಿದ್ದಿದೆ.

ಇನ್ನೊಂದು ವಾರದಲ್ಲಿ ಚುನಾವಣೆ ಎದುರಿಸುತ್ತಿರುವ ತೆಲಂಗಾಣದಲ್ಲಿ ಕಾಂಗ್ರೆಸ್​ ಗೆಲ್ಲಲ್ಲೇ ಬೇಕೆಂಬ ಹಠ ತೊಟ್ಟಿದೆ. ಈ ನಡುವೆ ಹಲವು ಕಾಂಗ್ರೆಸ್​ ನಾಯಕರು ತಮಗೆ ಟಿಕೆಟ್​ ಸಿಗಲಿಲ್ಲ ಎಂದು ರೆಬೆಲ್​ ಆಗಿ ಸ್ವತಂತ್ರವಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್​ಗೆ ಈಗ ಅವರ ಕಾರ್ಯರ್ತರೇ ಬಿಸಿತುಪ್ಪವಾಗಿದ್ದು, ಈ ಪರಿಸ್ಥಿತಿ ನಿಭಾಯಿಸಲು ಕಾಂಗ್ರೆಸ್ ಹೈಕಮಾಂಡ್​ಗೆ ಕಂಡ ಸಮರ್ಥ ವ್ಯಕ್ತಿ ಕರ್ನಾಟಕದ ಪ್ರಭಾವಿಶಾಲಿ ಸಚಿವ ಡಿ.ಕೆ.ಶಿವಕುಮಾರ್.

ಹೈಕಮಾಂಡ್​ ಸೂಚನೆಯಂತೆ, ಕಳೆದ ಎರಡು ದಿನಗಳಿಂದ ತೆಲಂಗಾಣದಲ್ಲಿ ಬಿಡುವಿಲ್ಲದ ಓಡಾಟ ನಡೆಸಿರುವ ಡಿಕೆ ಶಿವಕುಮಾರ್,​ ಅಲ್ಲಿನ ಬಂಡಾಯ​ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಲ್ಲದೇ ತಮಗೆ ಈ ಗೆಲುವು ಎಷ್ಟು ಅನಿವಾರ್ಯ ಎಂಬುದನ್ನು ಮನದಟ್ಟು ಮಾಡಿಸಿ, ಅವರ ಮನವೊಲಿಕೆ ಮಾಡಿದ್ದಾರೆ. ಡಿಕೆಶಿ ಅವರ ಸಂಧಾನ ಮಾತುಕತೆ ಬಹುತೇಕ ಯಶಸ್ವಿಯಾಗಿದ್ದು, ಡಿಕೆಶಿ ಮಾತಿಗೆ ಬೆಲೆ ಕೊಟ್ಟ ಬಂಡಾಯ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಇಂದು ಹಿಂಪಡೆದಿದ್ದಾರೆ.

ಚುನಾವಣೆ ಮುಗಿಯುವವರೆಗೂ ಡಿ.ಕೆ. ಶಿವಕುಮಾರ್​ ಸೇವೆಯನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಲು ಕಾಂಗ್ರೆಸ್​ ತೀರ್ಮಾನಿಸಿದೆ. ಅಲ್ಲದೇ, ತೆಲಂಗಾಣ-ಕರ್ನಾಟಕದ ಗಡಿ ಭಾಗದಲ್ಲಿ ಡಿಕೆ ಶಿವಕುಮಾರ್​ ಭರ್ಜರಿ ಪ್ರಚಾರ ನಡೆಸಲಿದ್ದು, ಕರ್ನಾಟಕ ಕಾಂಗ್ರೆಸ್​ ಚಾಣಕ್ಯನ ಹವಾ ಎಷ್ಟರ ಮಟ್ಟಿಗೆ ಪ್ರಭಾವ ಬೀರಲಿದೆ ಎಂಬುದು ಚುನಾವಣೆ ಫಲಿತಾಂಶದ ಬಳಿಕ ತಿಳಿಯಲಿದೆ.

ಚುನಾವಣೆ ಉಸ್ತುವಾರಿ, ಪ್ರಚಾರ ಕಾರ್ಯ, ಸಂಧಾನ ಸಭೆ ಡಿ.ಕೆ.ಶಿವಕುಮಾರ್​ ಅವರಿಗೆ ಹೊಸದೇನಲ್ಲ. ಈ ಹಿಂದೆ ಹಲವು ಬಾರಿ ಇಂತಹ ಕಾರ್ಯಗಳನ್ನು ಯಶಸ್ವಿಯಾಗಿ ಅವರು ನಿಭಾಯಿಸಿದ್ದಾರೆ.

Comments are closed.