ಕರ್ನಾಟಕ

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡರಿಂದ ಡಬ್ಬಿಂಗ್ ಪರ ಬ್ಯಾಟ್

Pinterest LinkedIn Tumblr


ಬೆಂಗಳೂರು: ಕನ್ನಡದಲ್ಲಿ ಡಬ್ಬಿಂಗ್​ ಬೇಕು ಎಂದು ಕೆಲವರು ಧ್ವನಿ ಎತ್ತಿದ್ದರೆ, ಇನ್ನೂ ಕೆಲವರು ಡಬ್ಬಿಂಗ್​ ಬೇಡ, ಇದರಿಂದ ಕನ್ನಡ ಚಿತ್ರರಂಗಕ್ಕೆ ನಷ್ಟ ಉಂಟಾಗುತ್ತದೆ ಎಂದಿದ್ದಾರೆ. ಈ ಮಧ್ಯೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಡಬ್ಬಿಂಗ್​ ಪರ ಬ್ಯಾಟ್​ ಬೀಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಡಬ್ಬಿಂಗ್​ನಿಂದ ಕನ್ನಡದ ಅಭಿವೃದ್ಧಿ ಸಾಧ್ಯ ಎಂದಿರುವ ಅವರು, ‘ಕನ್ನಡ ಬಲಿಷ್ಠವಾಗಿ ನೆಲೆ ನಿಲ್ಲಬೇಕಾದರೆ ಜ್ಞಾನ ಮತ್ತು ಮನರಂಜನೆ ಪ್ರಮುಖವಾದುದು. ಕರ್ನಾಟಕದಲ್ಲಿ ಕನ್ನಡಕ್ಕೆ ಸಾರ್ವಭೌಮತೆ ಸಿಗಬೇಕು ಎಂದಾದರೆ ಕನ್ನಡೀಕರಣ ಹಾಗೂ ಡಬ್ಬಿಂಗ್ ಇವೆರಡು ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲ ಭಾಷೆಯ ಚಿತ್ರಗಳು ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಪ್ರದರ್ಶನ ಕಾಣುತ್ತವೆ. ಇದರ ಬದಲು ಡಬ್ಬಿಂಗ್​ಗೆ ಅವಕಾಶ ಕೊಟ್ಟರೆ ಬೇರೇ ಭಾಷೆಯ ಸಿನಿಮಾಗಳನ್ನು ಕನ್ನಡದಲ್ಲೇ ನೋಡಬಹುದು. ಇದರಿಂದ ಬೇರೆ ಬೇರೆ ವಿಚಾರಗಳನ್ನು ನಮ್ಮ ಭಾಷೆಯಲ್ಲೇ ತಿಳಿದುಕೊಳ್ಳಬಹುದು. ಮಕ್ಕಳ ಜ್ಞಾನ ಬಹುಬೇಗ ವೃದ್ಧಿಯಾಗುತ್ತದೆ. ಆದರೆ ಇದಕ್ಕೆ ನಾವು ಅನುವು ಮಾಡಿಕೊಡುತ್ತಿಲ್ಲ ಎಂದು’ ಬೇಸರ ವ್ಯಕ್ತಪಡಿಸಿದರು.

ಕನ್ನಡವನ್ನು ನಾವೇ ಕೊಲ್ಲುವ ಕೆಲಸ ಮಾಡುತ್ತಿದ್ದೇವೆ ಎಂದಿರುವ ಅವರು, ‘ಬೇರೆ ಭಾಷೆಯ ಸಿನಿಮಾಗಳನ್ನು ಅದೇ ಭಾಷೆಯಲ್ಲಿ ನೋಡಬೇಕು ಎಂದು ನಾವಂದುಕೊಂಡಿದ್ದೇವೆ. ಪರ ಭಾಷೆಯ ಸಿನಿಮಾಗಳನ್ನು ಕನ್ನಡದಲ್ಲಿ ನೋಡಿ ಎಂದು ಹೇಳುವುದು ತಪ್ಪು ಎಂಬುದು ಅನೇಕರ ಗ್ರಹಿಕೆ. ಇದರಿಂದ ಕಲಾವಿದರಿಗೆ ಹಾಗೂ ನಮ್ಮ ಭಾಷೆಗೆ ಅನ್ಯಾಯವಾಗುತ್ತದೆ ಎಂದು ಅನೇಕರು ಹೇಳುತ್ತಾರೆ. ಆದರೆ ಅದು ಹೇಗೆ ಎಂಬುದು ಇನ್ನೂ ಅರ್ಥವಾಗಿಲ್ಲ’ ಎಂದಿದ್ದಾರೆ.

ರಾಜ್​ಕುಮಾರ್​ ಅವರು ಇದ್ದ ಕಾಲಘಟ್ಟವೇ ಬೇರೆ ಇಂದಿನ ಕಾಲಘಟ್ಟವೇ ಬೇರೆ ಎಂಬುದು ನಾರಾಯಣ ಅವರ ಅಭಿಪ್ರಾಯ. ‘ರಾಜ್​ಕುಮಾರ್​ ಅವರು ಇದ್ದ ಕಾಲಕ್ಕೂ ಇಂದಿನ ಕಾಲಕ್ಕೂ ಸಾಕಷ್ಟು ಬದಲಾವಣೆಗಳಾಗಿವೆ. ಇಂದು ಎಲ್ಲ ಭಾಷೆಗಳ ಸಿನಿಮಾವನ್ನು ನೋಡುವ ಮಟ್ಟಕ್ಕೆ ಕನ್ನಡಿಗರು ಬೆಳೆದಿರುವಾಗ, ನಾವು ಕನ್ನಡ ಉಳಿಸಿಕೊಳ್ಳುವುದು ಹೇಗೆ? ಬೇರೆ ಸಿನಿಮಾಗಳು ಬಿಡುಗಡೆಯಾದ 6 ವಾರಗಳ ನಂತರ ಕರ್ನಾಟಕದಲ್ಲಿ ರಿಲೀಸ್​ ಆಗಬೇಕು ಎಂದು ರಾಜ್​ಕುಮಾರ್​ ಹೋರಾಟ ನಡೆಸಿದ್ದರು. ಆದರೆ ಆ ಬಗ್ಗೆ ಈಗ ಯಾರೂ ಧ್ವನಿ ಎತ್ತುತ್ತಿಲ್ಲ’ ಎಂದು ಬೇಸರವ್ಯಕ್ತಪಡಿಸಿದರು.

ಕನ್ನಡದ ಅನೇಕ ಸಿನಿಮಾಗಳು ತೆಲುಗು, ತಮಿಳು, ಹಿಂದಿ ಭಾಷೆಗಳಿಗೆ ಡಬ್​ ಆಗಿ ತೆರೆಕಾಣುತ್ತವೆ. ನಮ್ಮ ಸಿನಿಮಾವನ್ನು ಅವರು ಅವರದೇ ಭಾಷೆಯಲ್ಲಿ ನೋಡುತ್ತಾರೆ. ಹೀಗಿರುವಾಗ ನಾವೇಕೆ ಪರಭಾಷೆಗಳ ಸಿನಿಮಾವನ್ನು ಕನ್ನಡದಲ್ಲಿ ನೋಡಬಾರದು ಎಂದು ಪ್ರಶ್ನೆ ಮಾಡಿರುವ ಅವರು, ಹೀಗೆ ಮಾಡಿದರೆ ಮಾತ್ರ ಕನ್ನಡ ಬೆಳೆಯುತ್ತದೆ ಎಂದು ವಾದಿಸಿದ್ದಾರೆ.

Comments are closed.