ಕರ್ನಾಟಕ

ಯಡಿಯೂರಪ್ಪ ಮನೆಯಲ್ಲಿ ನಡೆದ ರಹಸ್ಯ ಸಭೆ

Pinterest LinkedIn Tumblr


ಬೆಂಗಳೂರು: ದೇಶದಲ್ಲಿ ಈಗ ಕುಟುಂಬ ರಾಜಕಾರಣ ಸರ್ವೇಸಾಮಾನ್ಯವಾಗಿದೆ. ಬಹುತೇಕ ಎಲ್ಲಾ ಪ್ರಮುಖ ಪಕ್ಷಗಳಲ್ಲೂ ಫ್ಯಾಮಿಲಿ ಪೊಲಿಟಿಕ್ಸ್ ಇದೆ. ನೆಹರೂ ಕುಟುಂಬ, ಸಿಂಧ್ಯ ಕುಟುಂಬ, ರಾಜಶೇಖರ್ ರೆಡ್ಡಿ ಕುಟುಂಬ, ಕರುಣಾನಿಧಿ ಕುಟುಂಬ, ಮುಲಾಯಂ ಕುಟುಂಬ, ಅಬ್ದುಲ್ಲಾ ಕುಟುಂಬ, ದೇವೇಗೌಡ ಕುಟುಂಬ ಹೀಗೆ ಹಲವು ಕುಟುಂಬಗಳು ರಾಜಕಾರಣದಲ್ಲಿ ಬೇರೂರಿ ತಮ್ಮ ನೆಲೆ ಭದ್ರಪಡಿಸಿಕೊಂಡಿವೆ. ರಾಜ್ಯದಲ್ಲಿ ದೇವೇಗೌಡರ ಕುಟುಂಬ ಹೊರತಾಗಿ ಇನ್ನೂ ಹಲವು ಕುಟುಂಬಗಳು ರಾಜಕಾರಣದಲ್ಲಿ ಸಕ್ರಿಯವಾಗಿವೆ. ಅವರಲ್ಲಿ ಯಡಿಯೂರಪ್ಪನವರದ್ದೂ ಒಂದು. ಇತ್ತೀಚೆಗೆ ಯಡಿಯೂರಪ್ಪನವರ ಕುಟುಂಬದಲ್ಲಿ ಒಂದು ಬಹುಗಂಭೀರ ಸಭೆ ನಡೆದಿರುವ ವಿಚಾರ ನ್ಯೂಸ್18 ಕನ್ನಡಕ್ಕೆ ಲಭಿಸಿದೆ. ಎಲ್ಲಾ ಕುಟುಂಬಸ್ಥರು ಸೇರಿ 3 ಗಂಟೆಗೂ ಹೆಚ್ಚು ಕಾಲ ಗಹನವಾದ ಚರ್ಚೆ ನಡೆಸಿದ ಸಭೆ ಅದು. ಯಡಿಯೂರಪ್ಪನವರ ಕುಟುಂಬದ ಅಸ್ತಿತ್ವದ ಪ್ರಶ್ನೆ ಎದುರಾಗಿ ವಾಸ್ತವ ವಿಚಾರಗಳನ್ನ ಗಮನಿಸಿ ಭವಿಷ್ಯದ ತೀರ್ಮಾನಗಳನ್ನ ತೆಗೆದುಕೊಳ್ಳಲಾದ ಸಭೆ ಅದಾಗಿತ್ತು.

ಬಿಎಸ್ವೈ ಕುಟುಂಬದಲ್ಲಿ ನಡದ ಈ ಸಭೆಯಲ್ಲಿ ರಾಷ್ಟ್ರಾದ್ಯಂತ ರಾಜಕಾರಣದಲ್ಲಿರುವ ಕುಟುಂಬಗಳ ವಿಚಾರಗಳು ಚರ್ಚೆಗೆ ಬಂದವೆನ್ನಲಾಗಿದೆ. ಚಂದ್ರಬಾಬು ನಾಯ್ಡು ಪುತ್ರ ಲೋಕೇಶ್ ನಾಯ್ಡು, ತೆಲಂಗಾಣ ಸಿಎಂ ಕೆಸಿಆರ್ ಪುತ್ರ ರಾಮರಾವ್, ಮುಲಾಯಂ ಪುತ್ರ ಅಖಿಲೇಶ್ ಯಾದವ್, ಲಾಲೂ ಪುತ್ರ ತೇಜಸ್ವಿ ಯಾದವ್, ರಾಜಶೇಖರ್ ರೆಡ್ಡಿ ಪುತ್ರ ಜಗನ್ಮೋಹನ್ ರೆಡ್ಡಿ, ಕರುಣಾನಿಧಿ ಪುತ್ರ ಸ್ಟಾಲಿನ್, ಫಾರುಕ್ ಅಬ್ದುಲ್ಲಾ ಪುತ್ರ ಒಮರ್ ಅಬ್ದುಲ್ಲಾ, ರಾಜೇಶ್ ಪೈಲಟ್ ಪುತ್ರ ಸಚಿನ್ ಪೈಲಟ್, ಮಾಧವ್ ರಾವ್ ಸಿಂಧ್ಯ ಪುತ್ರ ಜ್ಯೋತಿರಾದಿತ್ಯ ಸಿಂಧ್ಯ ಹಾಗೂ ದೇವೇಗೌಡರ ಪುತ್ರರು ಹೀಗೆ ಎಲ್ಲರ ಬಗ್ಗೆಯೂ ಬಿಎಸ್​ವೈ ಕುಟುಂಬದವರು ಚರ್ಚೆ ನಡೆಸಿ ತಮ್ಮ ಕುಟುಂಬದ ಭವಿಷ್ಯದ ಬಗ್ಗೆ ಒಂದು ತೀರ್ಮಾನಕ್ಕೆ ಬಂದಿದ್ದಾರೆನ್ನಲಾಗಿದೆ.

2019ರ ಚುನಾವಣೆಯವರೆಗೂ ಮಾತ್ರ ಯಡಿಯೂರಪ್ಪನವರು ಸಕ್ರಿಯ ರಾಜಕಾರಣದಲ್ಲಿರುವ ಅವಕಾಶ ಇರುವ ಸಾಧ್ಯತೆ ಇದೆ. ಆ ನಂತರ ಅವರನ್ನು ಯಾವುದಾದರೂ ರಾಜ್ಯಗಳಿಗೆ ರಾಜ್ಯಪಾಲರನ್ನಾಗಿ ಮಾಡಿದರೆ ಅಚ್ಚರಿ ಇಲ್ಲ. ಯಡಿಯೂರಪ್ಪ ನೇಪಥ್ಯಕ್ಕೆ ಸರಿದರೆ ಕುಟುಂಬದಿಂದ ಅಷ್ಟು ದೊಡ್ಡ ಮಟ್ಟದಲ್ಲಿ ಯಾರು ಮುನ್ನಡೆ ಸಾಧಿಸಬಲ್ಲರು ಎಂಬ ಪ್ರಶ್ನೆ ಎದುರಾಗಿದೆ? ಯಡಿಯೂರಪ್ಪನವರ ಇಬ್ಬರು ಮಕ್ಕಳಾದ ಬಿ.ವೈ. ರಾಘವೇಂದ್ರ ಮತ್ತು ಬಿ.ವೈ. ವಿಜಯೇಂದ್ರ ಅವರಲ್ಲಿ ಯಾರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸುವುದು ಎಂಬ ಕುರಿತು ಕುಟುಂಬದಲ್ಲಿ ಗಹನ ಚರ್ಚೆಯಾಯಿತು.

ಚರ್ಚೆಯ ನಂತರ ಬಿ.ವೈ. ವಿಜಯೇಂದ್ರ ಅವರನ್ನೇ ಬಿಎಸ್​ವೈಯವರ ಉತ್ತರಾಧಿಕಾರಿಯನ್ನಾಗಿ ಮಾಡುವ ತೀರ್ಮಾನಕ್ಕೆ ಬರಲಾಗಿದೆ ಎಂಬ ಮಾಹಿತಿ ನಮ್ಮ ವಾಹಿನಿಗೆ ಸಿಕ್ಕಿದೆ. ಹಿರಿಯ ಪುತ್ರ ಬಿ.ವೈ. ರಾಘವೇಂದ್ರ ಅವರು ಸಾಕಷ್ಟು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದಾರಾದರೂ ಶಿವಮೊಗ್ಗಕ್ಕೆ ಅವರು ಸೀಮಿತವಾಗುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿರುವ ಕಿರಿಯ ಮಗ ವಿಜಯೇಂದ್ರ ಅವರಿಗೆ ರಾಜ್ಯ ಬಿಜೆಪಿಯ ಆಡಳಿತ ಚುಕ್ಕಾಣಿ ಕೊಡುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಿಎಸ್​ವೈ ಕುಟುಂಬಸ್ಥರು ಬಂದಿದ್ದಾರೆನ್ನಲಾಗಿದೆ.

ಯಡಿಯೂರಪ್ಪನವರು ರಾಜ್ಯ ಬಿಜೆಪಿಯಲ್ಲಿ ಅಪರೂಪಕ್ಕಿರುವ ಒಬ್ಬ ಮಾಸ್ ಲೀಡರ್ ಆಗಿದ್ದಾರೆ. ಲಿಂಗಾಯತ ಸಮುದಾಯದಲ್ಲಿ ಅವರ ಪ್ರಭಾವ ಬಹಳಷ್ಟಿದೆ. ರೈತ ಹೋರಾಟಗಾರನಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. 2013ರ ಚುನಾವಣೆಯಲ್ಲಿ ಕೆಜೆಪಿ ಕಟ್ಟುವ ಮೂಲಕ ಬಿಜೆಪಿಯ ಗೆಲುವಿಗೆ ಡ್ಯಾಮೇಜ್ ಮಾಡಿದ್ದ ಅವರಿಗೆ ಇರುವ ಜನಬೆಂಬಲದ ಬಗ್ಗೆ ಯಾವುದೇ ಅನುಮಾನವಿಲ್ಲ. ಅಷ್ಟು ದೊಡ್ಡ ಮಟ್ಟಕ್ಕೆ ವಿಜಯೇಂದ್ರ ಬೆಳೆಯಬಲ್ಲರೇ ಎಂಬುದು ಪ್ರಶ್ನೆ.

ಆದರೆ, ಈ ವರ್ಷ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ವಿಜಯೇಂದ್ರ ಅವರು ಭವಿಷ್ಯದ ನಾಯಕನಾಗುವ ಸೂಚನೆಯನ್ನು ತೋರಿಸಿದ್ದು ಗಮನಾರ್ಹ. ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಪ್ರಚಾರಕ್ಕೆ ಹೋದಲೆಲ್ಲಾ ಅಪಾರ ಜನಬೆಂಬಲ ವ್ಯಕ್ತವಾಗುತ್ತಿತ್ತು. ಟಿಕೆಟ್ ಘೋಷಣೆಯಾಗದೆಯೇ ಅವರಿಗೆ ಅಷ್ಟರ ಮಟ್ಟಿಗೆ ಜನಮನ್ನಣೆ ಸಿಕ್ಕಿದ್ದು ಬಿಜೆಪಿಗರಿಗೆಯೇ ಅಚ್ಚರಿ ಮೂಡಿಸಿತ್ತು. ಟಿಕೆಟ್ ಕೈತಪ್ಪಿದಾಗಲೂ ವಿಜಯೇಂದ್ರ ಬಹಳ ಚಾಕಚಕ್ಯತೆಯಿಂದ ಪರಿಸ್ಥಿತಿ ನಿಭಾಯಿಸಿದ್ದು, ವಿವಾದ ಸೃಷ್ಟಿಯಾಗದಂತೆ ನೋಡಿಕೊಂಡ ರೀತಿ ಗಮನ ಸೆಳೆದಿತ್ತು.

ಮಾಸ್ ಲೀಡರ್ ಆಗುವ ಸಾಮರ್ಥ್ಯ ತೋರ್ಪಡಿಸಿರುವ ವಿಜಯೇಂದ್ರ ಅವರನ್ನು ರಾಜ್ಯಮಟ್ಟದಲ್ಲಿ ಬೆಳೆಸಲು ಬಿಎಸ್​ವೈ ಕುಟುಂಬದವರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

* 2019ರ ಲೋಕಸಭಾ ಚುನಾವಣೆಯನ್ನೇ ವಿಜಯೇಂದ್ರಗೆ ಜಂಪಿಂಗ್ ಪ್ಯಾಡ್ ಆಗಿ ಬಳಕೆ ಮಾಡಲು ನಿರ್ಧಾರ.
* ಬಿಎಸ್​ವೈ ಜೊತೆ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ವಿಜಯೇಂದ್ರ ಅವರೂ ಭೇಟಿ ನೀಡಿ ಅಪ್ಪನ ಜೊತೆ ವೇದಿಕೆ ಹಂಚಿಕೊಳ್ಳುವುದು.
* ಬಿಎಸ್​​ವೈ ಉತ್ತರಾಧಿಕಾರಿ ಎಂದು ಬಿಂಬಿಸಿ ಲಿಂಗಾಯತ ಸ್ವಾಮೀಜಿಗಳಿಗೆ ಸಂದೇಶ ರವಾನಿಸುವುದು.
* ವಿಜಯೇಂದ್ರ ಅಭಿಮಾನಿಗಳ ಸಂಘಗಳ ರಚನೆ ಮಾಡಿ ಜನಪ್ರಿಯತೆಗೆ ಪುಷ್ಟಿ ಕೊಡುವುದು
* ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದು
* ಸಾಧ್ಯವಾದರೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆ ಅಥವಾ ಮೈಸೂರು ವಿಭಾಗದ ಉಸ್ತುವಾರಿ ಕೊಡಿಸುವುದು

ಯಡಿಯೂರಪ್ಪ ಕುಟುಂಬದವರೇನೋ ತಮ್ಮ ವಾರಸುದಾರನನ್ನು ಆಯ್ಕೆ ಮಾಡಿದ್ದಾರೆ. ಆದರೆ, ಬಿಜೆಪಿಯ ವರಿಷ್ಠರು ಹಾಗೂ ಆರೆಸ್ಸೆಸ್​ನವರು ಒಪ್ಪುವುದು ಮುಖ್ಯವಲ್ಲವೇ? ಬಿಎಸ್​ವೈ ಅವರು ಈಗಾಗಲೇ ಸಂಘದಲ್ಲಿರುವ ತಮ್ಮ ಆಪ್ತ ಮುಖಂಡರ ಜೊತೆ ಈ ವಿಚಾರವಾಗಿ ಚರ್ಚೆ ಮಾಡಿದ್ದಾರೆ. ವಿಜಯೇಂದ್ರ ಅವರನ್ನು ಮುನ್ನೆಲೆಗೆ ತರಲು ಆರೆಸ್ಸೆಸ್ ಕೂಡ ಒಪ್ಪಿಕೊಳ್ಳುವ ಸಾಧ್ಯತೆ ಇದೆಯಂತೆ. ಯಾಕೆಂದರೆ, ಬಿಜೆಪಿಗೆ ಲಿಂಗಾಯತರೇ ಪ್ರಮುಖ ವೋಟ್ ಬ್ಯಾಂಕ್. ಬಿಎಸ್​ವೈ ನಂತರ ಬಿಜೆಪಿಯಲ್ಲಿ ಪ್ರಬಲ ಲಿಂಗಾಯತ ನಾಯಕರ ಕೊರತೆ ಇದೆ. ಹೀಗಾಗಿ, ವಿಜಯೇಂದ್ರ ಅವರನ್ನು ಬಿಎಸ್​ವೈ ಸ್ಥಾನ ತುಂಬಿಸಲು ಸಂಘದಿಂದ ಗ್ರೀನ್ ಸಿಗ್ನಲ್ ಸಿಕ್ಕರೂ ಸಿಗಬಹುದು ಎಂದು ಆಶಿಸಿದೆ ಬಿಎಸ್​ವೈ ಕುಟುಂಬ.

Comments are closed.