ರಾಷ್ಟ್ರೀಯ

ಕೇರಳ; ಅಂದು ಬಿಜೆಪಿಗರಿಗೆ ಹೀರೋ, ಇಂದು ಕಮ್ಯೂನಿಸ್ಟರ ಡಾರ್ಲಿಂಗ್ ದಾವಣಗೆರೆ ಸಿಂಗಂ

Pinterest LinkedIn Tumblr


ತಿರುವನಂತಪುರಂ: ಕೇರಳ ಸಿಂಗಂ’ ಎಂದೇ ಕರೆಸಿಕೊಳ್ಳುವ ದಾವಣಗೆರೆ ಮೂಲದ ಐಪಿಎಸ್ ಅಧಿಕಾರಿ ಜಿ.ಎಚ್. ಯತೀಶ್ ಚಂದ್ರ ಅವರು ಇಂದು ಕೇರಳಿಗರ ಕಣ್ಮಣಿಯಾಗಿದ್ದಾರೆ. ಟೆಕ್ಕಿಯಾಗಿ ಕೋಟಿಗಟ್ಟಲೇ ಹಣ ಸಂಪಾದಿಸಬಹುದಾದ ಉದ್ಯೋಗವನ್ನು ತೊರೆದು, ಪ್ರಾಮಾಣಿಕವಾಗಿ ಜನಸೇವೆ ಮಾಡಲು ಸಿವಿಲ್ ಸರ್ವೀಸ್ ಸೇರಿದ ಯತೀಶ್​​ ಚಂದ್ರ ಅವರು, ಈಗ ಕೇರಳದಲ್ಲಿ ಸಮರ್ಥ ಐಪಿಎಸ್ ಅಧಿಕಾರಿ ಎನಿಸಿಕೊಂಡಿದ್ದಾರೆ. ಆದರೆ, ಸಾರ್ವಜನಿಕವಾಗಿ ಎಷ್ಟೇ ಒಳ್ಳೆಯ ಹೆಸರು ಮಾಡಿದರೂ ಆಗಾಗ್ಗೆ ವಿವಾದದ ಸುಳಿಯಲ್ಲಿ ಸಿಲುಕುತ್ತಾ ರಾಜಕೀಯ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ.

ತನ್ನ ವಿರುದ್ಧ ಅಕ್ಷರಶಃ ಕೆಂಡಕಾರುತ್ತಿದ್ದ ಆಡಳಿತಾರೂಢ ಎಡಪಕ್ಷಗಳು ಇಂದು ಯತೀಶ್​​ ಚಂದ್ರರನ್ನು ಸಾರ್ವಜನಿಕವಾಗಿ ಹೊಗಳುತ್ತಿವೆ. ಡಿಸಿಪಿ ಯತೀಶ್​​ ಅವರ ವಿರುದ್ಧ ಎಡಪಕ್ಷಗಳು ಸೇರಿದಂತೆ ಮಾನವ ಹಕ್ಕುಗಳ ಹೋರಾಟಗಾರರು ಕೂಡ ಆಯಾ ಕಾಲದಲ್ಲಿ ಹೊಗಳುತ್ತಾ, ತೆಗಳುತ್ತಾ ಬಂದಿದ್ದಾರೆ. ಸಿಪಿಎಂ ನಂತರ ಕಾಂಗ್ರೆಸ್​ ಕೂಡ ಕೆಲ ವಿಚಾರಗಳಲ್ಲಿ ಕೇರಳ ಸಿಂಗಂ ವಿರುದ್ಧ ಕೆಂಡಮಂಡಲವಾಗಿದ್ದುಂಟು. ಎಲ್ಲರೂ ಆಯ್ತು ಇದೀಗ ಯತೀಶ್​​ ಅವರ ವಿರುದ್ಧ ಹಾರಿಹಾಯಲು ಬಿಜೆಪಿಯ ಸರದಿ ಎನ್ನುತ್ತಿವೆ ಮೂಲಗಳು.

ಯತೀಶ್​​ ವಿರುದ್ಧ ಬಿಜೆಪಿ: ಇತ್ತೀಚೆಗೆ ಶಬರಿಮಲೆ ಅಯ್ಯಪ್ಪ ದೇವಾಲಯದ ಬಳಿ ತೆರಳುತ್ತಿದ್ದ ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಡಿಸಿಪಿ ಯತೀಶ್​​ ಚಂದ್ರ ಅವರ ಆದೇಶದ ಮೇರೆಗೆ ಪೊಲೀಸರು ಬಂಧಿಸಿ ಉಪಬಂಧೀಖಾನೆಗೆ ಕಳಿಸಿದ್ದಾರೆ. ಸದ್ಯ ಜಾಮೀನುರಹಿತ ಆರೋಪದ ಮೇಲೆ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎನ್ನಲಾಗಿದೆ.

ಇರುಮುಡಿ ಕಟ್ಟು ವಾರ್ಷಿಕ ಯಾತ್ರೆ ಆರಂಭವಾಗಿರುವ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ನಿಲಕಲ್ ಸುರೇಂದ್ರನ್ ಮತ್ತು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಯಾವುದೇ ಕಾರಣಕ್ಕೂ ಸುರೇಂದ್ರನ್ ಅವರಿಗೆ ಶಬರಿಮಲೆ ದೇವಾಲಯದತ್ತ ತೆರಳಲು ಅವಕಾಶ ನೀಡದಂತೆ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಯತೀಶ್ ಚಂದ್ರ ಸೂಚನೆ ನೀಡಿದ್ದು, ಇದೀಗ ಬಿಜೆಪಿ ಹೋರಾಟಕ್ಕೆ ಇಳಿದಿದೆ.

ಚಿತ್ತಾರ್ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಕೆ. ಸುರೇಂದ್ರನ್ ಹೇಳಿಕೆ ನೀಡಿದ್ದು, ಕುಡಿಯಲು ನೀರು ಮತ್ತು ಆಹಾರ ಕೂಡ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಈ ಮಧ್ಯೆಯೇ ಸುರೇಂದ್ರನ್ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ, ಚಿತ್ತಾರ್ ಪೊಲೀಸ್ ಠಾಣೆ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ನಾಯಕರು ಜಮಾಯಿಸಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು ಎನ್ನಲಾಗಿದೆ.

ಡಿಸಿಪಿ ಯತೀಶ್​​ ಚಂದ್ರ ಅವರ ಕ್ರಮ ಖಂಡಿಸಿ ಬಿಜೆಪಿ ಕಾರ್ಯಕರ್ತರು ತಿರುವನಂತಪುರದ ಸಚಿವಾಲಯದ ಮುಂದೆ ಸೇರಿದಂತೆ ಕೊಚ್ಚಿ, ಕೊಟ್ಟಾಯಂ, ಕಣ್ಣೂರು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಸರ್ಕಾರದ ಆದೇಶವನ್ನು ಪಾಲಿಸಿ ಸುರೇಂದ್ರನ್​​ ಅವರನ್ನು ಬಂಧಿಸಲಾಗಿದೆ. ಪ್ರಾಮಾಣಿಕವಾಗಿ ನಿಮ್ಮ ಕೆಲಸವನ್ನು ಮಾಡಿದ್ದೀರಿ ಎಂದು ಎಡ ಸಿಪಿಎಂ ಪಕ್ಷ ಶ್ಲಾಘಿಸಿದೆ ಎನ್ನುತ್ತಿವೆ ಮೂಲಗಳು.

ಕೇರಳ ಸಿಂಗಂ ನಡೆಗೆ ಈ ಹಿಂದೆ ಗರಂ ಆಗಿದ್ದ ಸಿಪಿಎಂ:

ಮೂರು ವರ್ಷಗಳ ಹಿಂದೆ ಯತೀಶ್​ ಚಂದ್ರ ಅವರು ಎರ್ನಾಕುಲಂ ಜಿಲ್ಲಾ ಪೊಲೀಸ್​​ ವರಿಷ್ಠಾಧಿಕಾರಿಯಾಗಿದ್ದರು. 2015 ರಲ್ಲಿ ಅಂಗಮಲೈ ಎಂಬ ಕ್ಷೇತ್ರದಲ್ಲಿ ಮಾಜಿ ಸಿಎಂ ಅಚ್ಚುತಾನಂದನ್​​ ನೇತೃತ್ವದಲ್ಲಿ ಎಡಪಕ್ಷಗಳ ಸಮಾವೇಶವೊಂದನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅಂದಿನ ಜಿಲ್ಲಾ ವರಿಷ್ಠಾಧಿಕಾರಿಯಾಗಿದ್ದ ಯತೀಶ್​​ ಚಂದ್ರ ಅವರು ಎಡಪಕ್ಷದ ಕಾರ್ಯಕರ್ತನೋರ್ವನಿಗೆ ಲಾಠಿಏಟು ಬೀಸಿದರು. ಈ ವೇಳೆ ಯತೀಶ್​ ವಿರುದ್ಧ ಸಿಪಿಎಂ ತಿರುಗಿಬಿದ್ದಿತ್ತು.

ಎಡಪಕ್ಷದ ನಾಯಕ, ಮಾಜಿ ಡಿಸಿಎಂ ಆಗಿದ್ದ ಅಚ್ಚುತಾನಂದನ್​​ ಅವರು, ಯತೀಶ್ ಚಂದ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಅಲ್ಲದೇ ಸಿಎಂ ಪಿಣರಾಯಿ ವಿಜಯನ್​​ ಅವರು ಕೂಡ ಸತೀಶ್​​ ಚಂದ್ರರಿಗೆ ಹುಚ್ಚು ನಾಯಿ ಪಟ್ಟ ಕಟ್ಟಿ, ಅವರನ್ನು ಅಮಾನತು ಮಾಡುವುದಾಗಿಯೂ ತಿಳಿಸಿದ್ದರು. ಎಲ್​​ಡಿಎಫ್​​​ ಕಾರ್ಯಕರ್ತರನ್ನು ಯತೀಶ್ ಅವರು ಬೀದಿ ನಾಯಿಗಳಂತೆ ಕಾಣುತ್ತಿದ್ದಾರೆ. ಸಿಪಿಐ ಪಕ್ಷವೂ ಕೂಡ ಎಡಪಕ್ಷದ ಕಾರ್ಯಕರ್ತನ ಮೇಲೆ ನಡೆಸಿದ ಹಲ್ಲೆಯನ್ನು ಖಂಡಿಸಿದೆ. ಈ ವೇಳೆ ಬಿಜೆಪಿ ಪಕ್ಷವು ಯತೀಶ್ ಅವರ ಬೆನ್ನಿಗೆ ನಿಂತಿತ್ತು. ಸಾಮಾಜಿಕ ಜಾಲ ತಾಣಗಳಲ್ಲಿ ಯತೀಶ್ ಚಂದ್ರ ಪರ ಅಭಿಯಾನ ನಡೆಯಿತು. ಇಂದು ಕೇರಳದ ಯುವ ಪೀಳಿಗೆಗೆ ಮಾದರಿ ಅಧಿಕಾರಿ ಎಂದು ಕರೆಯಲಾಯ್ತು. ಆರೆಸ್ಸೆಸ್ ಬೆಂಬಲಿಗರ ಪಾಲಿಗೆ ಯತೀಶ್ ಚಂದ್ರ ಅಕ್ಷರಶಃ ಹೀರೋ ಆಗಿದ್ದರು.

ವಿವಾದಗಳೇನು ಹೊಸತಲ್ಲ: ಯತೀಶ್​ ಅವರು ಮೊದಲಿಗೆ ದಾವಣಗೆರೆಯ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ಟೆಕ್ಸ್ ಟೈಲ್ ಇಂಜಿನಿಯರಿಂಗ್ ಪದವಿ ಪಡೆದುಕೊಂಡರು. ಬೆಂಗಳೂರಿನ ಕಾಗ್ನಿಜೆಂಟ್ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೂಡಾ ಉದ್ಯೋಗ ಲಭಿಸಿತ್ತು. ಆ ಸಂದರ್ಭದಲ್ಲಿ ಸಿವಿಎಲ್ ಸರ್ವೀಸ್ ಪರೀಕ್ಷೆಗೆ ತಯಾರಿ ನಡೆಸುತ್ತಲೇ ಇದ್ದ ಅವರು 2010ರ ಯುಪಿಎಸ್ ಸಿ ಪರೀಕ್ಷೆಯಲ್ಲಿ 211 ಶ್ರೇಯಾಂಕದೊಡನೆ ಉತ್ತೀರ್ಣರಾದರು. ಹೈದರಾಬಾದ್​ನ ವಲ್ಲಭಭಾಯಿ ಪಟೇಲ್ ಪೊಲೀಸ್ ತರಬೇತಿ ಶಿಬಿರದಲ್ಲಿ ಯತೀಶ್ ಅವರ ಬ್ಯಾಚನ್ನು ದಿ ಬೆಸ್ಟ್ ಎಂದು ಪರಿಗಣಿಸಲಾಗಿದೆ. ಖಡಕ್ ಪೊಲೀಸ್ ಅಧಿಕಾರಿ ಎನಿಸಿದ ಯತೀಶ್​​ ಅವರಿಗೆ ವಿವಾದಗಳೇನು ಹೊಸತಲ್ಲ.

ಯತೀಶ್ ವಿರುದ್ಧ ಬಾಲಕ ಧ್ವನಿ: ಕಳೆದ ವರ್ಷ ಎಲ್‌ಪಿಜಿ ಘಟಕ ಸ್ಥಾಪಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕೊಚ್ಚಿಯ ಪುಥುವೆಪೆ ನಿವಾಸಿಗಳು ಜೂನ್ 17 ರಂದು ಕೇರಳ ಹೈಕೋರ್ಟ್ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಅಲ್ಲಿನ ಡಿಸಿಪಿಯಾಗಿದ್ದ ಯತೀಶ್ ಚಂದ್ರ ನೇತೃತ್ವದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದರು. ಪೊಲೀಸರ ಹಲ್ಲೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿ, ಪೊಲೀಸರ ವಿರುದ್ಧ ಜನ ಸೇರಿದಂತೆ ಆಡಳಿತಾರೂಢ ಸಿಪಿಐಎಂ ಕೂಡ ಆಕ್ರೋಶ ವ್ಯಕ್ತಪಡಿಸಿತ್ತು.

ಈ ಸಂದರ್ಭದಲ್ಲಿ ಕೇರಳದ ಅಲನ್‌ ಎಂಬ 7 ವರ್ಷದ ಬಾಲಕ ಐಪಿಎಸ್‌ ಅಧಿಕಾರಿಯ ವಿರುದ್ಧ ಧ್ವನಿ ಎತ್ತಿದ್ದ. ಕೊಚ್ಚಿಯ ಹಿಂದಿನ ಡಿಸಿಪಿ ಯತೀಶ್ ಚಂದ್ರ ವಿರುದ್ಧ ಮಾನವ ಹಕ್ಕುಗಳ ಆಯೋಗದ ಮುಂದೆ ಬಾಲಕ ಅಲನ್ ಸಾಕ್ಷಿ ಹೇಳಿದ್ದ. ಪ್ರತಿಭಟನಾಕಾರರನ್ನು ಡಿಸಿಪಿ ಹೊಡೆದಿದ್ದಾರೆ ಎಂದು ಬಾಲಕ ದೂರಿದ್ದನ್ನು ದಿನಪತ್ರಿಕೆಯೊಂದು ಪ್ರಕಟಿಸಿತ್ತು. ಈ ಮಧ್ಯೆ ಪೊಲೀಸರ ಹಲ್ಲೆ ಪ್ರಕರಣ ಮಾನವ ಹಕ್ಕುಗಳ ಆಯೋಗದ ಮೆಟ್ಟಿಲೇರಿತ್ತು. ಈ ಸಂಬಂಧ ಆಯೋಗದ ಅಧ್ಯಕ್ಷರಾದ ಪಿ ಮೋಹನ್ ವಿಚಾರಣೆ ಕೂಡ ನಡೆಸಿದ್ದಾರೆ.

ಎಲ್​​ಡಿಎಫ್​​ ರಾಜಕಾರಣಿಗಳ ವಿರೋಧ: 2015ರಲ್ಲಿ ಪ್ರಧಾನಿ ಮೋದಿ ಅವರು ಕೇರಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮೋದಿ ಅವರಿಗೆ ವಿರುದ್ಧವಾಗಿ ಎಡ ಪಂಥೀಯರು ಪ್ರತಿಭಟನೆಗಳನ್ನು ನಡೆಸಿದರು. ಪ್ರಧಾನಿಯವರ ಪ್ರವಾಸ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಲು ಯತೀಶ್​ ಚಂದ್ರ ಎಡಪಕ್ಷದ ಕಾರ್ತಕರ್ತರ ಮೇಲೆ ಲಾಠಿ ಬೀಸಿದ್ದರು.

ಬಳಿಕ ಐಪಿಎಸ್​​ ಅಧಿಕಾರಿಯಾಗಿದ್ದ ಅವರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.ಆದರೆ, ಐಪಿಎಸ್ ಅಧಿಕಾರಿ ಹಲ್ಲೆ ಆರೋಪವನ್ನು ತಳ್ಳಿಹಾಕಿದರು. ಪ್ರಧಾನಿ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ಕೈಗೊಂಡಿದ್ದೆವು. ಅಂತೆಯೇ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದೆವು ಎಂದು ಹೇಳಿದರು. ಇದರಿಂದ ಎಲ್​ಡಿಎಫ್ ರಾಜಕಾರಣಿಗಳ ವಿರೋಧ ಕಟ್ಟಿಕೊಳ್ಳಬೇಕಾಯಿತು.

ಕೇರಳದ ಪ್ರವಾಹ ಪರಿಸ್ಥಿತಿಯಲ್ಲಿಯೂ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಯತೀಶ್​​ ಚಂದ್ರ ಅವರಿಗೆ ಶ್ಲಾಘನೆ ವ್ಯಕ್ತವಾಗಿತ್ತು. ನಂತರ ಪುನರ್ವಸತಿ ಕೇಂದ್ರ, ಸ್ವಚ್ಛತೆಗೆ ಆದ್ಯತೆ ನೀಡುವ ಕಾರ್ಯಾದಲ್ಲಿ ಯತೀಶ್ ಚಂದ್ರ ತೊಡಗಿಸಿಕೊಂಡಿದ್ದರು. ಅಲ್ಲಿನ ಪರಿಸ್ಥಿತಿಯ ಚಿತ್ರಣ ನೀಡಿದ ಯತೀಶ್ ಸಾಮಾಜಿಕ ಜಾಲ ತಾಣಗಳಲ್ಲಿ ನಿರಂತರವಾಗಿ ಸಾರ್ವಜನಿಕರು, ಸಂತ್ರಸ್ತರೊಡನೆ ಸಂಪರ್ಕದಲ್ಲಿದ್ದು, ಪರಿಹಾರ ಒದಗಿಸಿದ್ದರು. ಕಾಲಕ್ಕೆ ತಕ್ಕಂತೆ ಯತೀಶ್​​ ಅವರನ್ನು ಎಲ್ಲರೂ ಹೊಗಳುತ್ತಾ ಜೊತೆಗೆ ತೆಗಳುತ್ತಾ ಬಂದಿದ್ದಾರೆ. ನಮ್ಮ ದಾವಣಗೆರೆ ಈ ಹುಲಿ ಕೇರಳದಲ್ಲಿ ಪಕ್ಷಭೇದವಿಲ್ಲದೆ ಘರ್ಜಿಸುತ್ತಿರುವುದು ಕರುನಾಡಿಗೆ ಒಂದು ಹೆಮ್ಮೆಯ ವಿಚಾರ.

Comments are closed.