ಮುಂಬೈ

ಮಾರ್ಚ್ ವೇಳೆಗೆ ಅರ್ಧದಷ್ಟು ಎಟಿಎಂಗಳು ಸ್ಥಗಿತ!

Pinterest LinkedIn Tumblr


ಮುಂಬೈ: ಎಟಿಎಂ ವ್ಯವಸ್ಥೆಯಲ್ಲಿ ತಂದಿರುವ ಕೆಲ ಹೊಸ ಬದಲಾವಣೆಗಳಿಂದ ಮುಂದಿನ ಮಾರ್ಚ್​​ ವೇಳೆಗೆ ಬರೋಬ್ಬರಿ 1.13 ಲಕ್ಷ ಎಟಿಎಂಗಳು ಸ್ಥಗಿತಗೊಳ್ಳಲಿವೆ ಎಂದು ಎಟಿಎಂ ಉದ್ಯಮದ ಒಕ್ಕೂಟ ತಿಳಿಸಿದೆ.

ಸದ್ಯ ಭಾರತದಲ್ಲಿ 2.38 ಲಕ್ಷ ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ. ಇನ್ನು ಕೆಲವೇ ತಿಂಗಳಲ್ಲಿ ಇದರ ಸಂಖ್ಯೆ ಅರ್ಧಕ್ಕೆ ಇಳಿಮುಖವಾಗಲಿದೆ ಎಂದು ಎಟಿಎಂ ಉದ್ಯಮದ ಒಕ್ಕೂಟ ತಿಳಿಸಿದೆ. ಈ ಬೆಳವಣಿಗೆಯಿಂದ ಸಾವಿರಾರು ಜನರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಇತ್ತೀಚೆಗೆ ಎಟಿಎಂಗಳ ಸಾಪ್ಟ್​ವೇರ್​ ಹಾಗೂ ಹಾರ್ಡ್​ವೇರ್​ಗಳನ್ನು ಅಪ್​ಗ್ರೇಡ್​ ಮಾಡಲಾಗಿತ್ತು. ಇದರಿಂದ ಕೆಲವಷ್ಟು ದಿನಗಳ ಕಾಲ ಎಟಿಎಂಗಳಲ್ಲಿ ಸರಿಯಾಗಿ ಹಣ ಲಭ್ಯವಾಗುತ್ತಿರಲಿಲ್ಲ. ಇದಲ್ಲದೆ, ಎಟಿಎಂ ನಿಯಮಗಳಲ್ಲಿ ಸರ್ಕಾರ ಕೆಲ ಬದಲಾವಣೆ ಮಾಡಿತ್ತು. ಇದರಿಂದಾಗಿ ಇನ್ನೂ ಕೆಲ ಎಟಿಎಂಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವುಗಳನ್ನು ಸಂಪೂರ್ಣವಾಗಿ ಮುಚ್ಚಲು ನಿರ್ಧರಿಸಲಾಗಿದೆ. ಆ ಪೈಕಿ ಗ್ರಾಮೀಣ ಪ್ರದೇಶಗಳಲ್ಲಿರುವ ಎಟಿಎಂಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮುಚ್ಚಲಿವೆ.

ಇನ್ನು, ಎಟಿಎಂಗಳ ನಿರ್ವಹಣೆಗೆ ತಗಲುತ್ತಿರುವ ವೆಚ್ಛ ದಿನೇ ದಿನೇ ಹೆಚ್ಚುತ್ತಿದೆ. ಎಟಿಎಂ ಸೇವೆ ನೀಡುವವರಿಗೆ ಇದನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಎಟಿಎಂಗಳು ಸ್ಥಗಿತಗೊಳ್ಳಲು ಇದೂ ಒಂದು ಕಾರಣ. ಮಾರ್ಚ್​​ ವೇಳೆಗೆ ಇಷ್ಟು ದೊಡ್ಡ ಮೊತ್ತದಲ್ಲಿ ಎಟಿಎಂ ಮುಚ್ಚುತ್ತಿರುವುದರಿಂದ ಸಾರ್ವಜನಿಕರಿಗೆ ಹಣದ ಕೊರತೆ ಎದುರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Comments are closed.