ಕರ್ನಾಟಕ

ರೈತರ ಎಲ್ಲಾ ಸಾಲಗಳ ಮನ್ನಾ ಅರ್ಥಹೀನ: ದೇವೇಗೌಡ

Pinterest LinkedIn Tumblr


ಬೆಂಗಳೂರು: ರೈತರ ಬೆಳೆ ಸಾಲ ಮಾತ್ರವಲ್ಲದೆ, ಇತರೆ ಸಾಲಗಳನ್ನೂ ಒಳಗೊಂಡಂತೆ ರೈತರ ಎಲ್ಲಾ ಸಾಲಗಳನ್ನೂ ಸಂಪೂರ್ಣ ಮನ್ನಾ ಮಾಡಬೇಕೆಂಬ ಬೇಡಿಕೆ ಅರ್ಥಹೀನವಾಗಬಹುದು ಎಂದು ಜಾತ್ಯಾತೀತ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡರು ಎಚ್ಚರಿಸಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆ ನ.17ರಂದು ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದ 204 ನೇ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದ ಅವರು, ರೈತರ ಬೆಳೆ ಸಾಲಮನ್ನಾ ಮಾಡುವ ಮುನ್ನ ಯಾವುದೇ ಸರ್ಕಾರ ತನ್ನ ಸಂಪನ್ಮೂಲವನ್ನು ಕ್ರೋಢೀಕರಿಸಿಕೊಳ್ಳುವತ್ತಲೂ ಗಮನಹರಿಸಬೇಕಾಗುತ್ತದೆ. ಕೇವಲ ತೆರಿಗೆದಾರರ ಮೇಲೆ ಹೊರೆ ಹೊರಿಸಲು ಸಾಧ್ಯವಿಲ್ಲ ಹಾಗೂ ಅದು ಸಾಧುವೂ ಅಲ್ಲ ಎಂದು ಅಭಿಪ್ರಾಯಪಟ್ಟರು.

ಸಾಲ ಮನ್ನಾ ಮಾಡಲು ಮೊದಲನೆಯದಾಗಿ ಕೇಂದ್ರ ಸರ್ಕಾರದ ನೆರವು ಪಡೆಯುವ ಪ್ರಯತ್ನಿಸಬಹುದು, ಇಲ್ಲವಾದಲ್ಲಿ ಎ. ಟಿ. ರಾಮಸ್ವಾಮಿ ಅವರ ವರದಿಯನ್ನು ಆಧರಿಸಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಜ್ಯ ಸರ್ಕಾರವು ವಶಪಡಿಸಿಕೊಂಡಿರುವ ಐವತ್ತು ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಮಾರಾಟ ಮಾಡಿ ಸಂಪನ್ಮೂಲ ಸಂಗ್ರಹಿಸುವತ್ತ ಚಿಂತನೆ ನಡೆಸಬಹುದು ಎಂದು ಅಭಿಪ್ರಾಯ ಪಟ್ಟರು.

ಸಾಲಮನ್ನಾ ಆತ್ಮಹತ್ಯೆ ತಡೆಗೆ ಪರಿಹಾರವಾಗುವುದಿಲ್ಲ. ಎಲ್ಲರಿಗೂ ಅನ್ನ ಕೊಡುವ ರೈತ ಯಾವುದೇ ಕಾರಣಕ್ಕೂ ಅಧೀರನಾಗಬಾರದು. ಯಾವುದೇ ರೈತ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ರೈತ ಬಾಂಧವರಲ್ಲಿ ಕಳಕಳಿಯ ಮನವಿ ಮಾಡಿದರು.

Comments are closed.