ಕರ್ನಾಟಕ

ಇಂಡಿ ಶಾಸಕರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ

Pinterest LinkedIn Tumblr


ವಿಜಯಪುರ: ಜನಪ್ರತಿನಿಧಿಗಳೇ ಎಚ್ಚರ… ನಿಮ್ಮ ಹೆಸರಿನಲ್ಲಿ ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಅಕೌಂಟ್ ಅಂದರೆ ನಕಲಿ ಖಾತೆ ತೆರೆದು ನಿಮ್ಮ ಸ್ನೇಹಿತರಿಗೆ ಯಾಮಾರಿಸುವ ಸೈಬರ್ ಕಳ್ಳರು ಹೆಚ್ಚಾಗುತ್ತಿದ್ದಾರೆ. ಎಚ್ಚರಿಕೆ ವಹಿಸದಿದ್ದರೆ ನಿಮ್ಮನ್ನು ನಂಬಿದವರಿಗೆ ನಿಮ್ಮ ಹೆಸರಿನ್ಲಲ್ಲಿಯೇ ವಂಚನೆಯಾದೀತು ಜೋಕೆ.

ವಿಜಯಪುರ ಜಿಲ್ಲೆಯ ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಅವರಿಗೆ ಇಂಥದ್ದೇ ಕಹಿ ಅನುಭವವಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕರ ಆಪ್ತ ಸಹಾಯಕ ಎಸ್​.ಸಿ. ರುದ್ರೇಶ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸರಿಗೆ ಲಿಖಿತ ದೂರು ನೀಡಿದ್ದು, ಫೇಸ್​ಬುಕ್​ನಲ್ಲಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಹೆಸರಿನಲ್ಲಿ ನಕಲಿ ಖಾತೆ ಸ್ಥಾಪಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಅಷ್ಟೇ, ಅಲ್ಲ. ಶಾಸಕರ ಹೆಸರಿನಲ್ಲಿ Y. V. Patil ಹೆಸರಿನಲ್ಲಿ ಫೇಸ್​ಬುಕ್​ ಫ್ರೆಂಡ್​ ಒಬ್ಬರಿಗೆ ನನಗೆ ತುರ್ತಾಗಿ 5 ಸಾವಿರ ಡಾಲರ್​ ಬೇಕಿದೆ. ಫ್ರೆಂಡ್ ನನಗೆ ನೀನು ಹಣ ನೀಡಿದರೆ, ಅದನ್ನು ದ್ವಿಗುಣಗೊಳಿಸಿ ನೀಡುವುದಾಗಿ ಮೆಸೆಂಜರ್​ನಲ್ಲಿ ಚಾಟ್ ಮಾಡಲಾಗಿದೆ. ಈ ವಿಷಯ ಗೊತ್ತಾದ ತಕ್ಷಣ ಯಶವಂತರಾಯಗೌಡ ವಿ. ಪಾಟೀಲ ತಮ್ಮ ಪಿಎ ಮೂಲಕ ದೂರು ಸಲ್ಲಿಸಿದ್ದಾರೆ. ತಮ್ಮ ಹೆಸರಿನಲ್ಲಿ ಇಷ್ಟೊಂದು ಫೇಸ್ಬುಕ್ ಖಾತೆಗಳಿರುವುದನ್ನು ಕಂಡು ಸ್ವತಃ ಯಶವಂತರಾಯಗೌಡ ವಿ. ಪಾಟೀಲ ಬೆಚ್ಚಿ ಬಿದ್ದು, ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೊಡಿಸಿದ್ದಾರೆ.

ಜನಪ್ರತಿನಿಧಿಗಳು ಮತ್ತು ಗಣ್ಯರು ತಮ್ಮ ಹೆಸರಿನಲ್ಲಿರುವ ನಕಲಿ ಫೇಸ್ ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿರುವ ನಕಲಿ ಖಾತೆಗಳ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ, ಅವರ ಹೆಸರಿನಲ್ಲಿ ಮೋಸ ನಡೆಯುವುದಷ್ಟೇ ಅಲ್ಲ, ಅವರ ಚಾರಿತ್ರ್ಯ ವಧೆಯೂ ನಡೆಯುವುದು ಖಂಡಿತ.

Comments are closed.