ಕರ್ನಾಟಕ

ಆಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣ; ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು

Pinterest LinkedIn Tumblr

ಬೆಂಗಳೂರು: ಆಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್ ಸಿಕ್ಕಿದ್ದು ಒಂದನೇ ಎಸಿಎಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ನವೆಂಬರ್ 10ರಂದು ಸಿಸಿಬಿ ಪೊಲೀಸರ ವಿಚಾರಣೆಗೆ ಹಾಜರಾಗಿದ್ದ ಜನಾರ್ದನ ರೆಡ್ಡಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. 1ನೇ ಎಸಿಎಂಎಂಎಂ ನ್ಯಾಯಾಧೀಶ ಜಗದೀಶ್ ಅವರು ನವೆಂಬರ್ 24 ರವರೆಗೂ 14 ದಿನಗಳ ಕಾಲ ಜನಾರ್ದನ ರೆಡ್ಡಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಮಂಜೂರು ಆಗಿರುವುದು ನ್ಯಾಯಾಂಗದ ಜಯ ಆಗಿದೆ. ಮೊದಲ ದಿನದಿಂದ ಜನಾರ್ದನ ರೆಡ್ಡಿ ಅವರು ಅಂಬಿಡೆಂಟ್ ಸಂಸ್ಥೆಗೆ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದರು. ಆದರೆ ಶಾಸಕಾಂಗದ ಒತ್ತಡದಿಂದ ರೆಡ್ಡಿ ಅವರನ್ನು ಬಂಧನ ಮಾಡಲಾಯಿತು. ಮೂಲ ಪ್ರಕರಣ ಬಿಟ್ಟು ಬೇರೆ ಯಾವುದೇ ಅಂಶದ ಮೇಲೆ ತನಿಖೆ ನಡೆಸಲಾಯಿತು. ಇದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದೇವೆ. ಸಿಸಿಬಿ ಪೊಲೀಸರ ವಿಚಾರಣೆಯನ್ನು ಸತತ 24 ಗಂಟೆಗಳ ಕಾಲ ಎದುರಿಸಿದ್ದೇವು. ಅದ್ದರಿಂದ ಕಾನೂನು ನಮಗೆ ನ್ಯಾಯ ನೀಡಿದೆ ಎಂದು ವಕೀಲ ಚಂದ್ರಶೇಖರ್ ತಿಳಿಸಿದ್ದಾರೆ.

ಜಾಮೀನು ನೀಡಲು ನ್ಯಾಯಾಲಯ 1 ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಪಡೆದಿದೆ. ಮುಂದಿನ ಹಂತದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡುತ್ತೇವೆ. ಇಂದು ಜಾಮೀನು ಪ್ರಕ್ರಿಯೆಗೆ ನಡೆಯಬೇಕಾದ ಎಲ್ಲಾ ಪ್ರಕ್ರಿಯೆಗಳು ನಡೆಯಲಿದೆ. ಅದ್ದರಿಂದ ಇಂದು ಜನಾರ್ದನ ರೆಡ್ಡಿ ಅವರು ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ. ಮುಂದಿನ ಹಂತದಲ್ಲಿ ಜನಾರ್ದನ ರೆಡ್ಡಿ ಅವರಿಗೆ ಸಿಸಿಬಿ ಎಷ್ಟೇ ನೋಟಿಸ್ ನೀಡಿದರು ವಿಚಾರಣೆಗೆ ಹಾಜರಾಗಿ ಸಹಕಾರ ನೀಡುತ್ತಾರೆ ಎಂದು ಸ್ಪಷ್ಟಪಡಿಸಿದರು.

ಅಂಬಿಡೆಂಟ್ ಪ್ರಕರಣದಲ್ಲಿ ಜನರಿಗೆ ಮೋಸ ಮಾಡಿದ ಜನರಿಗೆ ನ್ಯಾಯ ನೀಡುವ ಕಾರ್ಯಕ್ಕೆ ಪೊಲೀಸರು ತನಿಖೆ ನಡೆಸಬೇಕಿತ್ತು. ಆದರೆ ಪ್ರಕರಣದ ತನಿಖೆ ಬದಲಾಗಿ ಬೇರೆ ಹಾದಿಯಲ್ಲಿ ನಡೆದಿತ್ತು. ಈ ಅಂಶವೇ ನಮಗೆ ಪ್ರಕರಣದಲ್ಲಿ ಮೊದಲ ಜಯ ಸಿಗಲು ಕಾರಣವಾಯಿತು ಎಂದು ತಿಳಿಸಿದರು.

ಉಳಿದಂತೆ ಇಂದು ಸಂಜೆ 7 ಗಂಟೆ ಒಳಗೆ ಜಾಮೀನು ಪ್ರತಿ ಪರಪ್ಪನ ಅಗ್ರಹಾರ ಜೈಲಿಗೆ ತಲುಪಿದರೆ ಇಂದೇ ಜನಾರ್ದನ ರೆಡ್ಡಿ ಅವರು ಬಿಡುಗಡೆ ಆಗಲಿದ್ದಾರೆ. ಒಂದೊಮ್ಮೆ ಆದೇಶ ಪ್ರತಿ ತಲುಪುವುದು ತಡವಾದರೆ ನಾಳೆವರೆಗೂ ಜನಾರ್ದನ ರೆಡ್ಡಿ ಅವರು ಜೈಲಿನಲ್ಲೇ ಇರಬೇಕಾಗುತ್ತದೆ.

ಅಂಬಿಡೆಂಟ್ ಕಂಪನಿ ಜೊತೆ ಬಹುಕೋಟಿ ಡೀಲ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಜನಾರ್ದನ ರೆಡ್ಡಿ ತಲೆಮರೆಸಿಕೊಂಡಿದ್ದರು ಎನ್ನಲಾಗಿತ್ತು. ಆದರೆ ನ.10 ರ ಮಧ್ಯಾಹ್ನ ತಮ್ಮ ವಕೀಲರ ಜೊತೆ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದರು. ಅಂದು ತಡರಾತ್ರಿವರೆಗೂ ಸುದೀರ್ಘ ವಿಚಾರಣೆ ನಡೆದಿತ್ತು. ಬಳಿಕ ನ.11 ರಂದು ಸಿಸಿಬಿ ಪೊಲೀಸರು ರೆಡ್ಡಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಧೀಶರ ಮುಂದೇ ಹಾಜರು ಪಡಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆ ನಡೆಸಿದ್ದ ನ್ಯಾಯಾಲಯ ರೆಡ್ಡಿ ಜಾಮೀನು ಅರ್ಜಿ ವಿಚಾರಣೆ ರೆಡ್ಡಿ ಬಂಧನ ವಿಚಾರದಲ್ಲಿ ಸೂಕ್ತ ಸಾಕ್ಷ್ಯಗಳನ್ನು ನೀಡುವಂತೆ ತಿಳಿಸಿತ್ತು. ಇಂದು ಬೆಳಗ್ಗೆಯೇ ಪ್ರಕರಣದ ತನಿಖಾಧಿಕಾರಿ ಎಸಿಪಿ ವೆಂಕಟೇಶ ಪ್ರಸನ್ನ, ಎಸಿಪಿ ಸುಬ್ರಮಣಿ, ಎಸಿಪಿ ಮಂಜುನಾಥ ಚೌಧರಿ ಅವರು ನ್ಯಾಯಾಲಯದ ಮುಂದೇ ಹಾಜರಿದ್ದರು.

ಇತ್ತ ಜನಾರ್ದನ ರೆಡ್ಡಿ ಅವರ ಜಾಮೀನು ಅರ್ಜಿ ವಿಚಾರಣೆ ಸುದ್ದಿ ತಿಳಿದ ಅವರ ಬೆಂಬಲಿಗರು ನಗರದ ಪರಪ್ಪನ ಅಗ್ರಹಾರ ಜೈಲಿನ ಬಳಿ ಆಗಮಿಸಿದ್ದಾರೆ. ರಾಜ್ಯದ ಚಿಕ್ಕಮಗಳೂರು, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

Comments are closed.