ಕರ್ನಾಟಕ

ಜಮಖಂಡಿಯಲ್ಲಿ ಬಿಜೆಪಿಯನ್ನು ಸೋಲಿಸಿದ ಲಿಂಗಾಯತ ಮತದಾರರು!

Pinterest LinkedIn Tumblr


ಜಮಖಂಡಿ/ಬೆಳಗಾವಿ: ಬಿಜೆಪಿ ಅವ್ಯಾಹತ ಪ್ರಚಾರದ ನಡುವೆಯೂ ಕಾಂಗ್ರೆಸ್ ನ ಆನಂದ್ ನ್ಯಾಮಗೌಡ ಮೊದಲ ಪ್ರಯತ್ನದಲ್ಲಿಯೇ ಶಾಸನಸಭೆ ಪ್ರವೇಶಿಸಿದ್ದಾರೆ. ಬಿಜೆಪಿಯ ಹಿರಿಯ ಮುಖಂಡ ಶ್ರೀಕಾಂತ್ ಕಲುಕರ್ಣಿ ಅವರನ್ನು ಪರಾಭವಗೊಳಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಜಮಖಂಡಿ ಹೈವೋಲ್ಚೇಜ್ ಕದನಕ್ಕಾಗಿ ಅವಿರತವಾಗಿ ಪ್ರಚಾರದಲ್ಲಿ ಭಾಗವಹಿಸಿದ್ದರು. ಕೈ ನಾಯಕರ ಬೃಹತ್ ರ್ಯಾಲಿ ಹಾಗೂ ಪ್ರಚಾರದ ಹಿನ್ನೆಲೆಯಲ್ಲಿ ಆನಂದ ನ್ಯಾಮಗೌಡ 39.480 ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಯಡಿಯೂರಪ್ಪರಂತ ಪ್ರಭಾವಿ ನಾಯಕರು ಜಮಖಂಡಿಗೆ ಬಂದು ಪ್ರಚಾರದಲ್ಲಿ ಭಾಗವಹಿಸಿದರೂ ಕೂಡ ದೊಡ್ಡ ಪ್ರಮಾಣದ ಲಿಂಗಾಯತ ಮತದಾರರು ಕೇಸರಿ ಪಕ್ಷವನ್ನು ತಿರಸ್ಕರಿಸಿದ್ದಾರೆ, ಆನಂದ ನ್ಯಾಮಗೌಡ 97,018 ಮತಗಳನ್ನು ಪಡೆದಿದ್ದಾರೆ, 1970 ರಲ್ಲಿ ನಡೆದಿದ್ದ ಜಮಖಂಡಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನ ಶ್ರೀಶೈಲಪ್ಪ ಅಥಣಿ 70 ಸಾವಿರ ಮತಗಳಿಂದ ಜಯ ಸಾಧಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿದ್ದು ನ್ಯಾಮಗೌಡ ವಿರುದ್ಧ ಶ್ರೀಕಾಂತ್ ಕುಲಕರ್ಣಿ ಕೇವಲ 2,795 ಮತಗಳಿಂದ ಸೋತಿದ್ದರು.ಈ ಬಾರಿ 57, 537 ಮತ ಪಡೆದಿದ್ದಾರೆ, ಪಕ್ಷದ ಬಂಡಾಯಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು, ಒಗ್ಗಟ್ಟು ಇಲ್ಲದಿರುವುದು ಕುಲಕರ್ಣಿ ಅವರ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ.
ನಿರಾಣಿ ಸಹೋದರರ ಅಸಹಕಾರ, ಹಿಂದುತ್ವ ಅಜೆಂಡಾ ಪ್ರಮುಖ ನಾಯಕರು ಜಮಖಂಡಿಯಲ್ಲಿ ಬೃಹತ್ ರ್ಯಾಲಿ ನಡೆಸದಿರುವುದು, ಪಕ್ಷದ ಆಂತರಿಕ ಕಲಹ, ಕಾಂಗ್ರೆಸ್ ರಣ ತಂತ್ರವನ್ನು ಕಡೆಗಣಿಸಿದ್ದು ಕುಲಕರ್ಣಿ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ, ಚುನಾವಣೆಗಾಗಿ ಕಾಂಗ್ರೆಸ್ 30 ಕೋಟಿ ರು ಹಣ ಖರ್ಚು ಮಾಡಿದೆ ಎಂದು ಸೋಲಿನ ನಂತರ ಕುಲಕರ್ಣಿ ಆರೋಪಿಸಿದ್ದಾರೆ.

Comments are closed.