![]()
ಬೆಂಗಳೂರು: ರಾಷ್ಟ್ರದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ಜಾತ್ಯತೀತ ಪಕ್ಷಗಳು ಒಂದಾಗುವುದು ಅನಿವಾರ್ಯವಾಗಿದೆ. ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿರುವ ಎನ್ಡಿಎ ನೇತೃತ್ವದ ಕೇಂದ್ರ ಸರಕಾರವನ್ನು ಕಿತ್ತೊಗೆಯುವ ಕಾಲ ಬಂದಿದೆ ಎಂದು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಇಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಬಾಬು ನಾಯ್ಡು, ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಕೇಂದ್ರ ಸರಕಾರವು ಐಟಿ, ಇ.ಡಿ., ಸಿಬಿಐಗಳಂಥ ಸ್ವಾಯತ್ತ ಸಂಸ್ಥೆಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕರ್ನಾಟಕ, ತೆಲಂಗಾಣ, ಬಿಹಾರ, ತಮಿಳುನಾಡು, ಗುಜರಾತ್ ರಾಜ್ಯಗಳಲ್ಲಿ ಈ ಸಂಸ್ಥೆಗಳ ಮೂಲಕ ವಿಪಕ್ಷಗಳನ್ನು ಹಣಿಯುವ ಕೆಲಸ ಮಾಡುತ್ತಿದೆ. ಈ ಸ್ವಾಯತ್ತ ಸಂಸ್ಥೆಗಳ ನಡವಳಿಕೆಗಳು ಅನುಮಾನಕ್ಕೆ ಎಡೆ ಮಾಡಿಕೊಟ್ಟಿವೆ ಎಂದು ಚಂದ್ರಬಾಬು ನಾಯ್ಡು ಆತಂಕ ತೋರ್ಪಡಿಸಿದ್ದಾರೆ.
ನೋಟ್ ಬ್ಯಾನ್ ಮಾಡಿ ಎರಡು ವರ್ಷವಾಯಿತು. ಆ ಕ್ರಮದಿಂದ ಜನಸಾಮಾನ್ಯರು ಸಂಕಷ್ಟಕ್ಕೊಳಗಾಗಿದ್ದಾರೆ. ಪದೇ ಪದೇ ಪೆಟ್ರೋಲ್ ಬೆಲೆ ಏರುತ್ತಲೇ ಇದೆ. ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಲ್ಪಸಂಖ್ಯಾತರಿಗೆ ರಕ್ಷಣೆಯೇ ಇಲ್ಲದೆ, ಅವರಿಗೆ ಅಭದ್ರತೆ ಕಾಡುತ್ತಿದೆ. ದೆಹಲಿಯಲ್ಲಿ ಪತ್ರಕರ್ತರಿಗೆ ನೆಲೆ ಇಲ್ಲದಂತಾಗಿದೆ ಎಂದು ನಾಯ್ಡು ಕಳವಳ ವ್ಯಕ್ತಪಡಿಸಿದ್ದಾರೆ.
ಮಹಾಮೈತ್ರಿಯ ಪ್ರಧಾನಿ ಅಭ್ಯರ್ಥಿ ವಿಚಾರದ ಬಗ್ಗೆ ಮಾತನಾಡಿದ ಚಂದ್ರಬಾಬು ನಾಯ್ಡು, ಆ ವಿಚಾರದ ಬಗ್ಗೆ ತಾವು ಚರ್ಚಿಸಿಲ್ಲ. ಆದರೆ, ದೇಶವನ್ನು ಉಳಿಸುವತ್ತ ಮೊದಲು ಗಮನ ಹರಿಸುತ್ತಿದ್ದೇವೆ. ದೇಶಾದ್ಯಂತ ಬಿಜೆಪಿಯೇತರ ಹಾಗೂ ಜಾತ್ಯತೀತ ಮನೋಭಾವದ ಪಕ್ಷಗಳನ್ನು ಒಂದಾಗಿ ಸೇರಿಸುವ ಕೆಲಸ ನಡೆಯುತ್ತಿದೆ ಎಂದು ಆಂಧ್ರದ ಸಿಎಂ ವಿವರಿಸಿದ್ದಾರೆ.
ಮಹಾಮೈತ್ರಿ ರಚನೆ ವಿಫಲವಾಗುತ್ತದೆ ಎಂಬ ಬಿಜೆಪಿಯ ಆರೋಪವನ್ನು ಅಲ್ಲಗಳೆದ ನಾಯ್ಡು, ಕರ್ನಾಟಕದ ಉಪಚುನಾವಣೆಯು ಎಲ್ಲಕ್ಕೂ ಉತ್ತರ ಕೊಟ್ಟಿದೆ ಎಂದು ತಿಳಿಸಿದ್ದಾರೆ.
ದೇವೇಗೌಡ, ಕುಮಾರಸ್ವಾಮಿ ಅವರು ಬೆಂಬಲ ಕೊಡುತ್ತಿದ್ದಾರೆ. ಮಾಯಾವತಿ, ಅಖಿಲೇಶ್ ಯಾದವ್ ಜೊತೆಯೂ ಮಾತುಕತೆ ನಡೆಸಿದ್ದೇವೆ. ನಾಳೆ ತಮಿಳುನಾಡಿನ ಸ್ಟಾಲಿನ್ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಜನವರಿಯಲ್ಲಿ ಮಮತಾ ಬ್ಯಾನರ್ಜಿ ದೊಡ್ಡ ಸಮಾವೇಶ ಇಟ್ಟುಕೊಂಡಿದ್ದಾರೆ. ನಾವೂ ಕೂಡ ಆ ತಿಂಗಳಲ್ಲೇ ಬೃಹತ್ ಸಮಾವೇಶ ನಡೆಸುತ್ತಿದ್ದೇವೆ. ಪ್ರಮುಖ ವಿಪಕ್ಷವಾದ ಕಾಂಗ್ರೆಸ್ ಪಕ್ಷವು ನಮಗೆ ಬಾಹ್ಯ ಬೆಂಬಲವಾಗಿ ನಿಂತಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
Comments are closed.