ಕರ್ನಾಟಕ

ಕೊಡಗು ಬಂದ್ ಹಿನ್ನೆಲೆ: ಶುಕ್ರವಾರ ಸಂಜೆ 6ರಿಂದ ಭಾನುವಾರದವರೆಗೆ ಕೊಡಗಿನಲ್ಲಿ ನಿಷೇಧಾಜ್ಞೆ

Pinterest LinkedIn Tumblr


ಕೊಡಗು: ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಶನಿವಾರ ಕೊಡಗು ಬಂದ್ ನೀಡಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ಸಂಜೆ 6 ರಿಂದ ಭಾನುವಾರ ಬೆಳಗ್ಗೆ 6ರವರೆಗೆ ಜಿಲ್ಲೆಯಲ್ಲಿ ಸಂಪೂರ್ಣ ನಿಷೇಧಾಜ್ಞೆ ಜಾರಿಯಾಗಲಿದೆ.

ಟಿಪ್ಪು ಜಯಂತಿ ಆಚರಣೆ ಕುರಿತು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಡಾ.ಸುಮನಾ ಡಿ ಪನ್ನೇಕರ್, ಕೊಡಗು ಜಿಲ್ಲೆಯ ಸೋಮವಾರಪೇಟೆ, ಮಡಿಕೇರಿ ಹಾಗೂ ವಿರಾಜಪೇಟೆಗಳಲ್ಲಿ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಹೊರ ಜಿಲ್ಲೆಯಿಂದ ಕಿಡಿಗೇಡಿಗಳು ಬಾರದಂತೆ 10 ಚೆಕ್‍ಪೋಸ್ಟ್‍ಗಳನ್ನು ತೆರೆಯಲಾಗಿದೆ. ಇವುಗಳು ಈಗಾಗಲೇ ಬುಧವಾರದಿಂದ ಕಾರ್ಯಚರಣೆ ನಡೆಸುತ್ತಿವೆ. ಇದಲ್ಲದೇ ಆಂತರಿಕ ತಪಾಸಣೆಗಾಗಿ 30 ಚೆಕ್ ಪೋಸ್ಟ್‍ಗಳನ್ನು ಆರಂಭಿಸಲಾಗಿದ್ದು, ಇವುಗಳು ಇಂದಿನಿಂದ ಕಾರ್ಯಾರಂಭ ಮಾಡಿವೆ ಎಂದು ಹೇಳಿದರು.

ಈಗಾಗಲೇ ಜಿಲ್ಲೆಯಾದ್ಯಂತ 10 ಕೆಎಸ್ಆರ್‌ಪಿ ತುಕಡಿ, ಒಂದು ವಜ್ರ ಪಡೆ ಕಾರ್ಯ ನಿರ್ವಹಿಸುತ್ತಿದೆ. ಭದ್ರತೆಗಾಗಿ ಒಟ್ಟು 2 ಸಾವಿರ ಪೊಲೀಸರು ನಿಯೋಜನೆಗೊಂಡಿದ್ದಾರೆ. ಯಾರಾದರೂ ಕಾನೂನು ಉಲ್ಲಂಘನೆ ಮಾಡಿದರೆ, ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಬಂದ್‍ಗೆ ಕರೆ ಕೊಟ್ಟಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಬಲವಂತವಾಗಿ ಬಂದ್ ಮಾಡಿಸಿದರೆ, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ಸಂಜೆ 6 ರಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.

ಬಂದ್ ಏಕೆ?
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಟಿಪ್ಪು ಜಯಂತಿಗೆ ರಾಜ್ಯಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದರ ನಡುವೆಯೇ ಸಿದ್ದರಾಮಯ್ಯನವರು ಟಿಪ್ಪು ಜಯಂತಿಯನ್ನು ಆಚರಿಸಿದ್ದರು. ಈ ವೇಳೆ 2015ರ ನವೆಂಬರ್ 11ರಂದು ಮಡಿಕೇರಿಯಲ್ಲಿ ಟಿಪ್ಪು ಜಯಂತಿಯಂದು ನಡೆದ ಘರ್ಷಣೆಯ ವೇಳೆ ಕುಟ್ಟಪ್ಪ ಎಂಬವರು ಮೃತಪಟ್ಟಿದ್ದರು. ಇದರಿಂದಾಗಿ ಜಿಲ್ಲೆಯಲ್ಲಿ ಟಿಪ್ಪು ಜಯಂತಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಈ ಬಾರಿಯೂ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿತ್ತು. ರಾಜ್ಯ ಸರ್ಕಾರದ ನಿರ್ಧಾರದಿಂದಾಗಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಶನಿವಾರ ಕೊಡಗು ಬಂದ್‍ಗೆ ಕರೆ ನೀಡಿತ್ತು.

Comments are closed.