
ಬೆಂಗಳೂರು: ರಾಜ್ಯದ ಮೂರು ಲೋಕಸಭಾ/ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಇಂದು ಹೊರಬಿದ್ದಿದೆ. ಐದು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಕೇಂದ್ರ ಚುನಾವಣಾ ಆಯೋಗವೂ ಅಧಿಕೃತವಾಗಿ ಘೋಷಣೆ ಮಾಡಿದೆ. ಇದೀಗ ಬಳ್ಳಾರಿ ಲೋಕಸಭಾ ಮರುಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರು 243161 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಇದರ ಸುತ್ತ ಭಾರೀ ಚರ್ಚೆಗಳು ನಡೆಯುತ್ತಿವೆ.
ಡಿಕೆಶಿ ಮತ್ತು ಶ್ರೀರಾಮುಲು ಪಾಲಿಗೆ ಪ್ರತಿಷ್ಠೆಯ ಕಣವಾಗಿದ್ದ ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರಿಗೆ 627365 ಮತಗಳು ಲಭಿಸಿವೆ. ಇನ್ನು ಶ್ರೀರಾಮುಲು ಸಹೋದರಿ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಅವರು ಅಂಚೆ ಮತ ಸೇರಿದಂತೆ 385204 ಮತಗಳನ್ನು ಪಡೆದಿದ್ದಾರೆ. ಪಕ್ಷೇತರವಾಗಿ ಸ್ಪರ್ಧಿಸಿದ್ದ ಬಿಜೆಪಿ ಬಂಡಾಯ ಅಭ್ಯರ್ಥಿ ಡಾ.ಟಿ.ಆರ್.ಶ್ರೀನಿವಾಸ್ರಿಗೆ 13714, ಪಕ್ಷೇತರ ಪಂಪಾಪತಿ 7697 ಮತಗಳು ಮತ್ತು ನೋಟಾಕ್ಕೆ 12413 ಮತಗಳು ಬಿದ್ದಿವೆ. ಇಲ್ಲಿ ಉಗ್ರಪ್ಪನವರು ಬಿಜೆಪಿ ಅಭ್ಯರ್ಥಿ ವಿರುದ್ಧ 243161 ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಒಂದೆಡೆ ಕಾಂಗ್ರೆಸ್ನ ಕಟ್ಟಾಳು, ಬಳ್ಳಾರಿ ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ ಅವರ ರಾಜಕೀಯ ತಂತ್ರವೇ ಶ್ರೀರಾಮುಲು ಸಹೋದರಿ ಸೋಲಿಗೆ ಕಾರಣ ಎಂಬ ಚರ್ಚೆ ನಡೆಯುತ್ತಿದ್ದರೇ, ಇನ್ನೊಂದೆಡೆ ಕೇಸರಿ ಪಕ್ಷದ ಹಿರಿಯ ನಾಯಕರೇ ಸ್ವಪಕ್ಷದ ಮುಖಂಡ ಶ್ರೀರಾಮುಲುಗೆ ಬೆನ್ನುಚೂರಿ ಹಾಕಿ ಮೋಸ ಮಾಡಿದ್ದಾರೆ ಎಂಬ ವದಂತಿಯೂ ಹಬ್ಬಿದೆ. ಜೊತೆಗೆ ಬಳ್ಳಾರಿಯಲ್ಲಿ ಪ್ರಚಾರಕ್ಕೆ ಬಿಜೆಪಿ ನಾಯಕರು ಆಗಮಿಸದೇ ಸೋಲಿಗೆ ಕಾರಣವಾಯ್ತು ಎನ್ನುತ್ತಿವೆ ಮೂಲಗಳು.
ಶ್ರೀರಾಮುಲು ನಿರ್ಣಾಮಕ್ಕೆ ಚಿಂತನೆ: ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕ ಶ್ರೀರಾಮುಲು ತನ್ನ ವರ್ಚಸ್ಸಿನಿಂದಲೇ ಗೆಲುವು ಸಾಧಿಸಿದ್ದರು. ಬಳಿಕ ಕರ್ನಾಟದಲ್ಲಿ 2018 ರ ವಿಧಾನಸಭಾ ಚುನಾವಣೆ ಸಮೀಸುತ್ತಿದ್ದಂತೆಯೇ ರೆಡ್ಡಿ ಪಾಳೆಯವನ್ನು ಮಟ್ಟಹಾಕಲು ಚಿಂತಿಸಿದ್ದರಂತೇ ಬಿಜೆಪಿ ವರಿಷ್ಠರು. ಹೀಗಾಗಿಯೇ ಬಳ್ಳಾರಿಯಿಂದ ಶ್ರೀರಾಮುಲು ಟಿಕೆಟ್ ನೀಡದೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕೇತ್ರದಿಂದ ಸ್ಪರ್ಧಿಸುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.
ಶಾಸಕ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವಿಷಯ ಖಾತ್ರಿಯಾದ ಕೂಡಲೇ ಬೆಜೆಪಿಯ ಸ್ಥಳೀಯ ನಾಯಕರಲ್ಲಿ ಬಂಡಾಯ ಶುರುವಾಗಿತ್ತು. ಅಲ್ಲದೇ ಇದೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಪೈಪೋಟಿ ನೀರಿಕ್ಷಿಸಲಾಗಿತ್ತು. ಈ ಕಾರಣಕ್ಕಾಗಿಯೇ ಬಿ. ಶ್ರೀರಾಮುಲು ವಿರುದ್ಧ ಮೊದಲಿಗೆ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪರನ್ನು ಕಣಕ್ಕಿಳಿಸುತ್ತೇವೆ ಎಂದು ಕಾಂಗ್ರೆಸ್ ಹೊರಟಿತ್ತು.
ವಲಸಿಗರು V/S ಸ್ಥಳೀಯರು: ಬಳ್ಳಾರಿಯ ಬಿ. ಶ್ರೀರಾಮುಲು ಮತ್ತು ಬೆಂಗಳೂರಿನಿಂದ ವಿ.ಎಸ್. ಉಗ್ರಪ್ಪ ಕ್ಷೇತ್ರಕ್ಕೆ ಕಾಲಿಟ್ಟರೆ ಸ್ಥಳೀಯರಲ್ಲಿ ಬಂಡಾಯ ಶುರುವಾಗಬಹುದು ಎಂದು ಹೇಳಲಾಗಿತ್ತು. ಅದರಂತೆಯೇ ಬಿಜೆಪಿಯಲ್ಲಿ ಶ್ರೀರಾಮುಲು ವಿಚಾರಕ್ಕೆ ಆಂತರಿಕವಾಗಿ ಪರಸ್ಪರ ಕಿತ್ತಾಟ ಹೆಚ್ಚಾಯ್ತು. ವಲಸಿಗರ ಬದಲಿಗೆ ಸ್ಥಳೀಯರಾದ ತಿಪ್ಪೇಸ್ವಾಮಿಯವರೇ ಅಭ್ಯರ್ಥಿಯಾಗಲಿ ಎಂದು ಕ್ಷೇತ್ರದ ಜನರು ಅಭಿಪ್ರಾಯಪಟ್ಟಿದ್ದರು. ಸ್ಥಳೀಯರ ಆಶೀರ್ವಾದ ತಿಪ್ಪೇಸ್ವಾಮಿ ಮೇಲಿದ್ದ ಕಾರಣ ಶ್ರೀರಾಮುಲುಗೆ ಅಗ್ನೀಪರೀಕ್ಷೆ ಎದುರಾಗಿತ್ತು. ಅಲ್ಲದೇ ಶ್ರೀರಾಮುಲು ಸೋಲಲಿ, ಗೆಲ್ಲಲಿ ಅವರ ರಾಜಕೀಯ ಭವಿಷ್ಯ ನಮಗೇಕೆ? ಎಂದು ಬಿಜೆಪಿ ನಾಯಕರು ಕೂಡ ಪ್ರಚಾರದಿಂದ ದೂರ ಉಳಿದಿದ್ದರು ಎನ್ನುತ್ತಿವೆ ಮೂಲಗಳು.
ಮಾಜಿ ಸಿಎಂ ವಿರುದ್ಧ ಶ್ರೀರಾಮುಲು: ಈ ಹಿಂದೆ ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಬಿಜೆಪಿ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. ಒಂದೆಡೆ ಲಿಂಗಾಯತ ಮತಗಳನ್ನು ಕಳೆದುಕೊಳ್ಳುವ ಭೀತಿಯನ್ನು ಬಿಜೆಪಿ ಎದುರಿಸುತ್ತಿತ್ತು. ಹೀಗಾಗಿ ಬಾಗಲಕೋಟೆಯಲ್ಲಿಯೇ ಬಿಡಾರ ಹೂಡಿದ್ದ ಬಿಜೆಪಿ ನಾಯಕರು ಸಿದ್ದರಾಮಯ್ಯನವರ ಎದುರು ಮತ್ತೆ ಶ್ರೀರಾಮುಲು ನಿಲ್ಲಿಸಲು ನಿರ್ಧರಿಸಿದ್ದರು. ಹೀಗಾಗಿ ಇಲ್ಲಿಯೂ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ಶ್ರೀರಾಮುಲು ಸೋಲುವಂತಾಯ್ತು.
ಶ್ರೀರಾಮುಲುಗೆ ಬೆನ್ನುಚೂರಿ: ಈ ಬಾರಿ ಬಳ್ಳಾರಿ ಉಪಚುನಾವಣೆಯನ್ನು ಕಾಂಗ್ರೆಸ್ ಡಿಕೆಶಿ ಮತ್ತು ಶ್ರೀರಾಮುಲು ನಡುವಿನ ನೇರ ಯುದ್ದವೇ ಎಂದು ಬಿಂಬಿಸಲಾಗಿತ್ತು. ಪ್ರತಿಷ್ಠೆ ಕಣವಾಗಿ ಸ್ವೀಕರಿಸಿದ್ದ ಕಾಂಗ್ರೆಸ್ ಪಾಳೆಯದ ಎಲ್ಲಾ ನಾಯಕರೂ ಕ್ಷೇತ್ರದಲ್ಲಿ ಟಿಕ್ಕಾಣಿ ಹೂಡಿ ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡಿದರು. ಆದರೆ, ಬಿಜೆಪಿ ನಾಯಕರು ಮಾತ್ರ ಶ್ರೀರಾಮುಲು ಒಬ್ಬರನ್ನೇ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಿಟ್ಟು ಮೋಸ ಮಾಡಿದರು. ರೆಡ್ಡಿಗಳು ಕೂಡ ಕೊನೆಗೂ ಸಿದ್ದರಾಮಯ್ಯನ ಮಗನ ಸಾವಿನ ಬಗ್ಗೆ ಮಾತಾಡಿ ಗೆಲುವನ್ನು ಕಾಂಗ್ರೆಸ್ ಪಾಲು ಮಾಡಿದರು ಎಂಬ ಚರ್ಚೆಯೂ ನಡೆಯುತ್ತಿದೆ.
ಶಾಸಕ ಶ್ರೀರಾಮು ಸಹೋದರಿ ಸೋಲಿಗೆ ಬಿಜೆಪಿ ನಾಯಕರೇ ಪ್ರಮುಖ ಕಾರಣ ಎಂದು ಮೇಲಿ ಎಲ್ಲಾ ಅಂಶಗಳು ಹೇಳುತ್ತವೆ ಎನ್ನಲಾಗಿದೆ. ಎಲ್ಲಿಂದಲೋ ಬಂದ ಡಿಕೆಶಿ ಮತ್ತು ಕಾಂಗ್ರೆಸ್ ಪಾಳೆಯ ತಳಮಟ್ಟದ ಕೆಲಸಕ್ಕಿಂತ ಶ್ರೀರಾಮುಲು ಸೋಲಿಗೆ ಬಿಜೆಪಿ ನಾಯರ ಕಡೆಗಣನೆಯೇ ಪ್ರಮುಖ ಕಾರಣ ಎಂದು ಚರ್ಚಿಸಲಾಗುತ್ತಿದೆ. ಇನ್ನೊಂದೆಡೆ ರೆಡ್ಡಿ ಪಾಳೆಯದ ಭ್ರಷ್ಟಾಚಾರ, ಬಿಜೆಪಿ ವಿರೋಧಿ ಅಲೆ, ಕಾರ್ಯಕರ್ತರ ಒಳಜಗಳವೇ ಸೋಲಿಗೆ ಶಾಂತಾ ಅವರ ಸೋಲಿಗೆ ಕಾರಣ ಎನ್ನುತ್ತಿವೆ ಮೂಲಗಳು.
Comments are closed.