ಬೆಂಗಳೂರು: ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಬರೋಬ್ಬರಿ 2 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ಇದಾದ ಬೆನ್ನಲ್ಲೇ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಬಳ್ಳಾರಿಯಲ್ಲಿ ನರಕ ಚತುರ್ದಶಿಯ ಅರ್ಥಪೂರ್ಣ ಆಚರಣೆ, ಕತ್ತಲಿನಿಂದ ಬೆಳಕಿನ ಕಡೆಗೆ ಜನಪಯಣ’ ಎಂದಿದ್ದಾರೆ. ಈ ಮೂಲಕ ರೆಡ್ಡಿ ಹಾಗೂ ಶ್ರೀರಾಮುಲು ಆಡಳಿತದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ.
14 ವರ್ಷಗಳ ನಂತರ ಕಾಂಗ್ರೆಸ್ ಬಳ್ಳಾರಿಯಲ್ಲಿ ಗೆಲುವಿನ ನಗೆ ಬೀರಿದೆ. ಉಗ್ರಪ್ಪ ಭಾರಿ ಅಂತರದಲ್ಲಿ ಗೆಲುವು ಸಾಧಿಸುತ್ತಿದ್ದಾರೆ ಎನ್ನುವ ವಿಚಾರ ತಿಳಿದಿದ್ದೇ ತಡ ಬಿಜೆಪಿ ನಾಯಕರು ಮನೆ ಹೊಕ್ಕವರು ಹೊರ ಬೀಳಲೇ ಇಲ್ಲ! ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ನೀರವ ಮೌನ. ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸಿಕೊಳ್ಳುತ್ತಿರುವ ಬಿಜೆಪಿಗೆ ಈ ಫಲಿತಾಂಶ ದೊಡ್ಡ ಶಾಕ್ ನೀಡಿದೆ.
ಬಳ್ಳಾರಿ, ಶಿವಮೊಗ್ಗ ಹಾಗೂ ಮಂಡ್ಯ ಲೋಕಸಭಾ ಸ್ಥಾನಕ್ಕೆ ಚುನಾವಣಾ ಆಯೋಗ ಉಪಚುನಾವಣೆ ಘೋಷಿತ್ತು. ಬಳ್ಳಾರಿಯಲ್ಲಿ ಯಾವ ಅಭ್ಯರ್ಥಿಯನ್ನು ನಿಲ್ಲಿಸಬೇಕು ಎನ್ನುವ ಗೊಂದಲಕ್ಕೆ ಕಾಂಗ್ರೆಸ್ ಒಳಗಾಗಿತ್ತು. ಅದಕ್ಕೆ ಕಾರಣ ಬಳ್ಳಾರಿಯಲ್ಲಿ ರಾಮುಲು ಪಡೆ ವಿರುದ್ಧ ಸೆಣೆಸಲು ಗಟ್ಟಿ ಅಭ್ಯರ್ಥಿಯೇ ಕಾಂಗ್ರೆಸ್ ಬಳಿ ಇರಲಿಲ್ಲ! ನಂತರ ಹೊರಗಿನ ಅಭ್ಯರ್ಥಿಯನ್ನು ತಂದು ಕಣಕ್ಕೆ ಇಳಿಸುವ ತೀರ್ಮಾನವಾಯಿತು. ಉಗ್ರಪ್ಪ ಉಪಚುನಾವಣೆಯ ಕಣದಲ್ಲಿ ಸ್ಪರ್ಧಿಸಿದರು.
ಬಳ್ಳಾರಿಯಲ್ಲಿ ಬಿಜೆಪಿ ಪಾಳೆಯವನ್ನು ಸೋಲಿಸಬೇಕು ಎಂದು ಕಾಂಗ್ರೆಸ್ ಧುರೀಣರಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಹಾಗೂ ಡಿ.ಕೆ. ಶಿವಕುಮಾರ್ ಯೋಜನೆ ರೂಪಿಸಿದರು. ಅಂತೆಯೇ 80 ದೊಡ್ಡ ಹಾಗೂ ಚಿಕ್ಕ ನಾಯಕರನ್ನು ಬಳ್ಳಾರಿ ಅಂಗಳದಲ್ಲಿ ಪ್ರಚಾರಕ್ಕೆ ಇಳಿಸಿದರು. ಅವರು ಮನೆ ಮನೆಗೂ ತೆರಳಿ ಪ್ರಚಾರ ಕಾರ್ಯ ನಡೆಸಿದರು.
ಇನ್ನು ಬಿಜೆಪಿಯಿಂದ ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರು ಶಾಂತಾ ಪರವಾಗಿ ಪ್ರಚಾರ ನಡೆಸಿದ್ದರು. ಯಡಿಯೂರಪ್ಪ ಕೂಡ ಬಳ್ಳಾರಿಗೆ ಬಂದು ಮತ ಯಾಚಿಸಿದ್ದರು. ಆದರೆ ಪ್ರಚಾರದ ವೇಳೆ ಮೇಲುಗೈ ಸಾಧಿಸಿದ್ದು ರೆಡ್ಡಿ ಸಹೋದರರೇ.
ಚುನಾವಣೆ ಫಲಿತಾಂಶ ಹೊರಬಂತು. ಬಿಜೆಪಿ ಅಭ್ಯರ್ಥಿ ಬಳ್ಳಾರಿಯಲ್ಲಿ ಸೋತಿದ್ದರು. ‘ಸೋಲು ಎಂಬುದು ಯಾವಾಗಲೂ ಅನಾಥ. ನಾನು ಸೋಲಿನ ಹೊಣೆ ಹೊತ್ತುಕೊಳ್ಳುತ್ತಿದ್ದೇನೆ’ ಎಂದರು ಶ್ರೀರಾಮುಲು. ಉಗ್ರಪ್ಪ ಗೆದ್ದಿರುವುದರ ಹಿಂದೆ ಪಕ್ಷದ ಸಂಘಟಿತ ಕೆಲಸವಿದೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಮಾತು.
ಇದು ಪಕ್ಷಕ್ಕೆ ಸಂದ ಗೆಲುವು ಎಂದು ಸ್ವತಃ ಡಿ.ಕೆ. ಶಿವಕುಮಾರ್ ಹೇಳಿಕೊಂಡಿದ್ದಾರೆ. ‘ನಾನು ಬಳ್ಳಾರಿ ಉಪಚುನಾವಣೆಯ ಜವಾಬ್ದಾರಿ ಹೊತ್ತಿದ್ದೆ. ಹಾಗಾಗಿ ನಾನು ಗೆದ್ದಿದ್ದೇನೆ ಎಂದು ಎಲ್ಲರೂ ಬಣ್ಣಿಸುತ್ತಿದ್ದಾರೆ. ಆದರೆ ಇದರ ಕ್ರೆಡಿಟ್ ಹೋಗಬೇಕಾದುದ್ದು ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರಿಗೆ’ ಎಂದಿದ್ದಾರೆ.
ಉಗ್ರಪ್ಪ ಬಳ್ಳಾರಿಯಿಂದ ಸೆಣೆಸಲು ಮೂಲ ಕಾರಣ ಕೆಪಿಸಿಸಿ ಅಧ್ಯಕ್ಷ ದಿಶೇಶ್ ಗುಂಡೂರಾವ್. ಅವರು ಇದೊಂದು ಐತಿಹಾಸಿಕ ಜಯ ಎಂದೇ ಬಣ್ಣಿಸಿದ್ದಾರೆ. ಇನ್ನು ಜೆಡಿಎಸ್ ಹಿರಿಯ ನಾಯಕ ಹೆಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ‘ಇದು ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ಬಿಜೆಪಿ ಆಡಳಿತ ಅಂತ್ಯಗೊಳ್ಳುತ್ತದೆ’ ಎಂದು ಬಣ್ಣಿಸಿದ್ದಾರೆ.
ಬಿಜೆಪಿ ಪಾಳಯದಲ್ಲಿ ಇತ್ತೀಚೆಗೆ ರೆಡ್ಡಿ ಸಹೋದರರನ್ನು ಕಡೆಗಣಿಸಿಲಾಗಿತ್ತು. ಆದರೆ ಮೊನ್ನೆ ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೆಲ ಸ್ಥಾನಗಳನ್ನು ಗೆಲ್ಲಲು ಇವರ ಪಾತ್ರ ಹೆಚ್ಚಿತ್ತು. ಅಷ್ಟೇ ಏಕೆ, ಯಡಿಯೂರಪ್ಪ ನಡೆಸಿದ 56 ಗಂಟೆಗಳ ಸರ್ಕಾರದಲ್ಲಿ ಕೆಲ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಕೊಂಡುಕೊಳ್ಳುವಲ್ಲಿ ಈ ಸಹೋದರರು ಪ್ರಮುಖ ಪಾತ್ರವಹಿಸಿದ್ದರು.
ಮೊದಲಿನ ಕಾಲದಲ್ಲಿ ರಾಜರು ಅನೇಕ ದಶಕಗಳ ಕಾಲ ಒಂದೇ ರಾಜ್ಯವನ್ನು ಆಳಿದ ಉದಾಹರಣೆ ಇದೆ. ಶ್ರೀರಾಮುಲು-ರೆಡ್ಡಿ ಕೂಡ ಬಳ್ಳಾರಿಯನ್ನು ಅದೇ ರೀತಿ ಆಳಿದ್ದರು. ಆದರೆ ಈಗ ಅವರಿಗೆ ಸೋಲುಂಟಾಗಿದೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮುಂದಿನ ದಿನಗಳಲ್ಲಿ ಕಷ್ಟಪಡಬೇಕಾಗಬಹುದು.
Comments are closed.