
ಕಲಬುರ್ಗಿ: ಐವರು ಮುಸುಕುಧಾರಿಗಳು ಏಕಾಏಕಿ ಮನೆಗೆ ನುಗ್ಗಿ ಪತಿ ಪತ್ನಿಯ ಕೊಲೆಗೈದು ಪರಾರಿಯಾಗಿದ್ದರೆಂಬ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಮುನಕನಪಲ್ಲಿ ಗ್ರಾಮದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿ ಸ್ವತಹ ಮಗನೇ ಎಂಬ ಅಂಶ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಘಟನೆ ಏನು ?
ಅಕ್ಟೋಬರ್ 25 ರಂದು ಬೆಳಗಿನಜಾವ ಮುಸುಕುಧಾರಿಗಳು ಮನೆಗೆ ನುಗ್ಗಿ ದರೋಡೆಗೆ ಯತ್ನಿಸಿ, ಅಡ್ಡ ಬಂದರೆಂಬ ಕಾರಣಕ್ಕೆ ಇಬ್ಬರನ್ನು ಕೊಲೆಗೈದಿದ್ದಾರೆ ಎಂದು ವೆಂಕಟೇಶ್ ಎಂಬಾತ ದೂರು ನೀಡಿದ್ದ. ಘಟನೆಯಲ್ಲಿ ಬಸವರಾಜ ಮತ್ತು ಬಾಲಮ್ಮ ಎಂಬುವರ ಮೃತಪಟ್ಟಿದ್ದರೆ, ವೆಂಕಟೇಶ್ ತಲೆಗೂ ಗಾಯಗಳಾಗಿದ್ದವು. ದರೋಡೆಕೋರರ ಕೃತ್ಯ ಇರಬಹುದೆಂದು ತನಿಖೆ ಆರಂಭಿಸಿದ್ದ ಪೊಲೀಸರಿಗೆ ದೂರುದಾರ ವೆಂಕಟೇಶ್ ಮೇಲೆ ಅನುಮಾನಗಳು ವ್ಯಕ್ತವಾಗಿದ್ದವು.
ಮನೆಯಲ್ಲಿ ಯಾವುದೇ ಆಭರಣ ಅಥವಾ ನಗದು ಕಳುವಾಗಿರಲೇ ಇಲ್ಲ. ಇದರಿಂದ ಅನುಮಾನಗೊಂಡ ಪೊಲೀಸರು ವೆಂಕಟೇಶ್ ನನ್ನು ವಿಚಾರಣೆಗೆ ಗುರಿಪಡಿಸಿದ್ದರು. ಈ ವೇಳೆ ಎರಡೂ ಕೊಲೆಗಲನ್ನು ತಾನೇ ಮಾಡಿರುವುದಾಗಿ ಆರೋಪಿ ವೆಂಕಟೇಶ್ ಒಪ್ಪಿಕೊಂಡಿದ್ದಾನೆ.
ಕೊಲೆ ಮಾಡಿದ ನಂತರ ಅದರಿಂದ ಬಚಾವಾಗಲು ದರೋಡೆ ಕಥೆ ಕಟ್ಟಿದ್ದ. ಅದೇ ಕಥೆಯನ್ನು ಹೇಳುವಂತೆ ತನ್ನ ಪತ್ನಿ ಸವಿತಾ ಮತ್ತು ಚಿಕ್ಕಪ್ಪನ ಮಗ ರವಿಗೆ ತಾಕೀತು ಮಾಡಿದ್ದ. ಆದರೆ ಪೊಲೀಸರ ತನಿಖೆಯ ವೇಳೆ ಎಲ್ಲ ಸತ್ಯವೂ ಹೊರಬಿದ್ದಿದ್ದು, ತಂದೆಯ ಮೇಲಿನ ಸಿಟ್ಟಿನಿಂದ ಈ ಕೃತ್ಯ ಎಸಗಿದ್ದಾನೆ ಎಂದು ಎಸ್ಪಿ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಬುದ್ದಿವಾದ ಹೇಳಿದಕ್ಕೆ ಕೊಲೆ
ಆರೋಪಿ ವೆಂಕಟೇಶ್ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ತಂದೆ ದುಡಿದದ್ದನ್ನೇ ಖರ್ಚು ಮಾಡಿ, ಮಜಾ ಮಾಡುವ ಸ್ವಭಾವ ಹೊಂದಿದ್ದ ಎನ್ನಲಾಗಿದೆ. ಇದನ್ನು ವಿರೋಧಿಸುತ್ತಿದ್ದ ತಂದೆ ಬಸವರಾಜ, ದುಡಿದು ತಿನ್ನುವಂತೆ ಮಗನನ್ನು ತರಾಟೆಗೆ ತೆಗೆದುಕೊಂಡಿದ್ದ ಎನ್ನಲಾಗಿದೆ. ಅಲ್ಲದೆ ಆರೋಪಿ ವೆಂಕಟೇಶ್ ಪತ್ನಿಗೂ ಮೃತ ಬಸವರಾಜ ಆಗಾಗ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಎನ್ನಲಾಗಿದೆ. ಇದರಿಂದ ಕುಪಿತಗೊಂಡು ಆರೋಪಿ ಈ ಕೃತ್ಯ ಎಸಗಿದ್ದಾನೆ. ವಿನಾಕಾರಣ ತನಗೆ ತನ್ನ ತಂದೆ ಹೊಡೆದಿದ್ದ. ಇದರಿಂದ ಬೇಸತ್ತು ಕೊಲೆ ಮಾಡಲು ಹೋಗಿದ್ದೆ. ಈ ವೇಳೆ ಅಡ್ಡ ಬಂದ ತಾಯಿಯನ್ನೂ ಕೊಲೆ ಮಾಡಿರುವುದಾಗಿ ಆರೋಪಿ ವೆಂಕಟೇಶ್ ತಿಳಿಸಿದ್ದಾನೆ.
ಒಟ್ಟಾರೆ ದರೋಡೆಗಾಗಿ ಜೋಡಿ ಕೊಲೆ ನಡೆದಿದ್ದವೆಂಬ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಪ್ರಕರಣದಲ್ಲಿ ವೆಂಕಟೇಶ್ ಪತ್ನಿ ಸವಿತಾಳ ಕೈವಾಡವಿರಬಹುದೆಂಬ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಆಕೆಯ ವಿಚಾರಣೆಗೆ ಮುಂದಾಗಿದ್ದಾರೆ. ಈ ಕುರಿತು ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಲಾಗಿದೆ.
Comments are closed.