ಬೆಂಗಳೂರು: ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ವಿರುದ್ಧವೇ ದುನಿಯಾ ವಿಜಿ ದ್ವಿತೀಯಾ ಪುತ್ರಿ ಮೋನಿಷಾ ಮಕ್ಕಳ ಆಯೋಗಕ್ಕೆ ದೂರು ನೀಡಿದ್ದಾರೆ.
ದುನಿಯಾ ವಿಜಿ ಕೌಟುಂಬಿಕ ಕಲಹ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರು ವಿಜಿ ಅವರ ಎರಡನೇ ಪತ್ನಿ ಕೀರ್ತಿ ಗೌಡರ ಮೇಲೆ ಹಲ್ಲೆ ನಡೆಸಿದ್ದ, ಮೊದಲ ಪತ್ನಿ ನಾಗರತ್ನರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಅಲ್ಲದೇ ದುನಿಯಾ ವಿಜಿ ಮಕ್ಕಳನ್ನು ಸಹ ವಿಚಾರಣೆಗೆ ಒಳಪಡಿಸಿದ್ದರು. ಪೊಲೀಸರ ವಿಚಾರಣೆಯಿಂದ ಮಾನಸಿಕವಾಗಿ ನೊಂದಿದ್ದ ದ್ವಿತೀಯಾ ಪುತ್ರಿ ಮೋನಿಷಾ ಈಗ ಅಣ್ಣಾಮಲೈ ವಿರುದ್ಧವೇ ಮಕ್ಕಳ ಆಯೋಗಕ್ಕೆ ದೂರು ನೀಡಿದ್ದಾರೆ.
ದೂರಿನಲ್ಲಿ ಗಿರಿನಗರ ಪೊಲೀಸರು ನಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಪದೇ ಪದೇ ಮನಗೆ ಬಂದು ತಾಯಿ ಎಲ್ಲಿ ಎಂದು ಪ್ರಶ್ನಿಸುತ್ತಾರೆ. ಮನೆಗೆ ಬಂದಾಗ ಏಕಾಏಕಿ ಫೋನ್ ಕಿತ್ತುಕೊಂಡು, ಅಮ್ಮನಿಂದ ಕರೆ ಬಂದಿದ್ಯಾ ಎಂದು ಪರಿಶೀಲಿಸುತ್ತಾರೆ. ಪೊಲೀಸರ ವರ್ತನೆಯಿಂದಾಗಿ ನಮಗೆ ತುಂಬಾ ಹಿಂಸೆಯಾಗುತ್ತಿದೆ. ಇದರಿಂದಾಗಿ ನಾವು ನೆಮ್ಮದಿಯಾಗಿ ಓದಲು ಸಾಧ್ಯವಾಗುತ್ತಿಲ್ಲ. ಒಂದು ಕಡೆ ಅಪ್ಪನಿಂದ ಕಿರುಕುಳ, ಇನ್ನೊಂದು ಕಡೆ ಪೊಲೀಸರ ಟಾರ್ಚರ್ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮೋನಿಕಾ ದೂರು ಆಧರಿಸಿ ಅಣ್ಣಾಮಲೈಗೆ ಕರೆ ಮಾಡಿ ಮಾಹಿತಿ ಪಡೆದ ಮಕ್ಕಳ ಆಯೋಗ, ಮೋನಿಕಾಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಮಕ್ಕಳನ್ನು ಈ ಪ್ರಕರಣದಿಂದ ದೂರವಿಡಿ. ನಟ ವಿಜಯ್ ಕೂಡ ಮಕ್ಕಳ ಬಗ್ಗೆ ಮಾತನಾಡದಂತೆ ಸೂಚಿಸಿದ್ದಾರೆ. ಅಲ್ಲದೇ ಈ ಬಗ್ಗೆ ಆಯೋಗದಿಂದ ಸೂಚನಾ ಪತ್ರ ರವಾನೆಯಾಗಿರುವ ಮಾಹಿತಿ ಲಭ್ಯವಾಗಿದೆ.
ವಿಜಿ ಪುತ್ರಿ ದೂರು ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅಣ್ಣಾಮಲೈ, ನಟ ದುನಿಯಾ ವಿಜಿ ಪ್ರಕರಣದಲ್ಲಿ ಮಕ್ಕಳ ಆಯೋಗದಿಂದ ನಮಗೆ ನೋಟಿಸ್ ಬಂದಿದ್ದು, ಈಗಾಗಲೇ ನಾನು ಅದಕ್ಕೆ ಉತ್ತರಿಸಿದ್ದೇನೆ. ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯನ್ನು ಕೊಟ್ಟಿಲ್ಲ. ತನಿಖಾ ಸಂದರ್ಭದಲ್ಲಿ ನಾಗರತ್ನ ಅವರ ಬಗ್ಗೆ ವಿಚಾರಣೆ ಮಾಡಬೇಕಿತ್ತು. ಹೀಗಾಗಿ ಘಟನಾವಳಿಯ ಬಗ್ಗೆ ಪುತ್ರಿ ಮೋನಿಕಾರಿಂದ ಹೇಳಿಕೆಯನ್ನು ಪಡೆದುಕೊಂಡಿದ್ದೇವೆ. ಆದರೆ ದ್ವಿತೀಯಾ ಪುತ್ರಿ ಮೋನಿಷಾರಿಂದ ಯಾವುದೇ ಮಾಹಿತಿಯನ್ನು ಕೇಳಿಲ್ಲ. ಪೊಲೀಸರು ಮಕ್ಕಳ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವ ಹಾಗೆ ನಡೆದುಕೊಂಡಿಲ್ಲ ಎಂದು ಸ್ಪಷ್ಟ ಪಡಿಸಿದರು.
ಮೋನಿಷಾ ಆರೋಪ ಮಾಡಿದ ಹಾಗೆ, ಪೊಲೀಸರು ಅವರ ಮೊಬೈಲ್ ತಪಾಸಣೆ ಮಾಡಿಲ್ಲ. ತನಿಖಾ ಸಂದರ್ಭಗಳಲ್ಲಿ ಕೆಲವೊಂದು ಈ ರೀತಿಯ ತೊಂದರೆ ಆಗುತ್ತದೆ. ತೊಂದರೆ ಆಗಿದ್ದರೆ ಕ್ಷಮೆ ಇರಲಿ. ಆದರೆ ನಮ್ಮ ಗಮನಕ್ಕೆ ಬಂದ ಹಾಗೆ, ನಾವು ಯಾವುದೇ ರೀತಿಯ ತೊಂದರೆ ಕೊಟ್ಟಿಲ್ಲ. ಮಕ್ಕಳ ಆಯೋಗಕ್ಕೆ ಈಗಾಗಲೇ ಮೌಖಿಕವಾದ ಹೇಳಿಕೆಯನ್ನು ನೀಡಿದ್ದೇನೆ. ಅವರು ಲಿಖಿತ ರೂಪದಲ್ಲಿ ತಿಳಿಸುವಂತೆ ಹೇಳಿದ್ದಾರೆ. ಹೀಗಾಗಿ ಗುರುವಾರ ಲಿಖಿತ ರೂಪದಲ್ಲಿ ನೀಡಲು ಸಿದ್ಧರಿದ್ದೇವೆ ಎಂದು ಹೇಳಿದರು.
Comments are closed.