ರಾಷ್ಟ್ರೀಯ

ವೇಶ್ಯೆಯಾದರೂ ಆಕೆಯ ಇಚ್ಛೆಗೆ ವಿರುದ್ಧವಾಗಿ ಸೆಕ್ಸ್ ಮಾಡುವಂತಿಲ್ಲ: ಸುಪ್ರೀಂ

Pinterest LinkedIn Tumblr


ನವದೆಹಲಿ: ಒಬ್ಬ ಮಹಿಳೆ ನೈತಿಕವಾಗಿ ಏನೇ ಇರಲಿ, ಎಷ್ಟು ಜನರೊಂದಿಗಾದರೂ ಹಾಸಿಗೆ ಹಂಚಿಕೊಂಡಿರಲಿ, ವೇಶ್ಯೆಯೇ ಆಗಿರಲಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಆಕೆಯನ್ನು ಬಲವಂತವಾಗಿ ಸಂಭೋಗಿಸುವ ಹಕ್ಕು ಪುರುಷನಿಗಿರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. 1997ರ ಅತ್ಯಾಚಾರ ಪ್ರಕರಣವೊಂದರಲ್ಲಿ ದೆಹಲಿ ಹೈಕೋರ್ಟ್ ತೀರ್ಪನ್ನು ಬದಿಗೆ ಸರಿಸಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಈಗ ನಡೆಯುತ್ತಿರುವ ಮೀ ಟೂ ಅಭಿಯಾನದ ಹಿನ್ನೆಲೆಯಲ್ಲೂ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಗಮನಾರ್ಹವಾಗಿದೆ.

ನಟಿಯರು ತಮ್ಮ ಪಾತಿವ್ರತ್ಯವನ್ನು ತೋರಿಸಿಕೊಳ್ಳಲು ಮೀಟೂ ಆರೋಪ ಮಾಡುತ್ತಿದ್ದಾರೆಂದು ಸ್ಯಾಂಡಲ್ವುಡ್ ನಿರ್ದೇಶಕ ಗುರುಪ್ರಸಾದ್ ಹೇಳಿಕೆ ನೀಡಿದ ಬೆನ್ನಲ್ಲೇ ಈ ಸುಪ್ರೀಂ ತೀರ್ಪು ಬಂದಿದೆ.

1997ರ ಈ ರೇಪ್ ಪ್ರಕರಣದ ನಾಲ್ವರು ಆರೋಪಿಗಳಿಗೆ ಟ್ರಯಲ್ ಕೋರ್ಟ್ ವಿಧಿಸಿದ್ದ 10 ವರ್ಷದ ಕಾರಾಗೃಹ ಶಿಕ್ಷೆಯ ತೀರ್ಪನ್ನು ಸುಪ್ರೀಂ ಎತ್ತಿಹಿಡಿದಿದೆ. ಈ ಪ್ರಕರಣದಲ್ಲಿ ದೂರುದಾರೆ ಮಹಿಳೆಯು ಒಬ್ಬ ವ್ಯಭಿಚಾರಿ ಹಾಗೂ ಚರಿತ್ರಹೀನೆ ಎಂದು ಆರೋಪಿಗಳು ವಾದಿಸಿದ್ದರು. ಆದರೆ, ಆರೋಪಿಗಳ ವಾದವನ್ನು ಆರ್. ಬಾನುಮತಿ ಮತ್ತು ಇಂದಿರಾ ಬ್ಯಾನರ್ಜಿ ಅವರಿದ್ದ ಸುಪ್ರೀಂ ಪೀಠ ಪುರಸ್ಕರಿಸಲಿಲ್ಲ.

ಒಬ್ಬ ಮಹಿಳೆ ನಡತೆಗೆಟ್ಟವಳೇ ಆಗಿದ್ದರೂ ಆಕೆ ಯಾರೊಂದಿಗೆ ಬೇಕಾದರೂ ಮಲಗಲು ನಿರಾಕರಿಸುವ ಹಕ್ಕು ಹೊಂದಿರುತ್ತಾಳೆ. ಯಾರೂ ಕೂಡ ಆಕೆಯನ್ನು ಬಲವಂತಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ಏನಿದು ಪ್ರಕರಣ?

1997ರ ಜುಲೈ 28ರಂದು ದೆಹಲಿಯ ಕತ್ವಾರಿಯಾ ಸರಾಯ್ ಎಂಬಲ್ಲಿನ ಸ್ಲಮ್​ವೊಂದರ ಜೋಪಡಿಯಲ್ಲಿ ಮಹಿಳೆಯೊಬ್ಬಳ ಮೇಲೆ ನಾಲ್ವರು ಅತ್ಯಾಚಾರ ಎಸಗಿದ ಆರೋಪ ಎದುರಿಸಿದ್ದರು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376(2-ಜಿ) ಅಡಿಯಲ್ಲಿ ಪ್ರಕರನ ದಾಖಲಾಯಿತು. ಮಹಿಳೆಯು ನಡತೆಗೆಟ್ಟವಳಾಗಿದ್ದು, ವೇಶ್ಯಾವಾಟಿಕೆ ನಡೆಸುತ್ತಿದ್ದಳು. ತಮ್ಮ ಮೇಲೆ ಆಕೆ ಸುಳ್ಳು ಆರೋಪ ಹೊರಿಸಿದ್ದಾಳೆ ಎಂದು ಆರೋಪಿಗಳು ವಾದಿಸಿದ್ದರು. ಆದರೆ, ಟ್ರಯಲ್ ಕೋರ್ಟ್ ಆ ಮಹಿಳೆಯ ಪರವಾಗಿ ನಿಂತು ನಾಲ್ವರು ಆರೋಪಿಗಳಿಗೆ 10 ವರ್ಷ ಜೈಲುಶಿಕ್ಷೆ ವಿಧಿಸಿತು.

ಅದಾದ ನಂತರ, ಆರೋಪಿಗಳು ಟ್ರಯಲ್ ಕೋರ್ಟ್ ತೀರ್ಪು ಪ್ರಶ್ನಿಸಿ ದೆಹಲಿ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದರು. ಉಚ್ಚ ನ್ಯಾಯಾಲಯವು ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿ ಟ್ರಯಲ್ ಕೋರ್ಟ್ ತೀರ್ಪನ್ನು ತಲೆಕೆಳಗು ಮಾಡಿ ನಾಲ್ವರನ್ನು ಖುಲಾಸೆಗೊಳಿಸಿತು. ಇದೀಗ ಸುಪ್ರೀಂ ಕೋರ್ಟ್ ಈ ಆರೋಪಿಗಳಿಗೆ ಟ್ರಯಲ್ ಕೋರ್ಟ್ ಕೊಟ್ಟ ಶಿಕ್ಷೆಯನ್ನೇ ಪುನರುಚ್ಚರಿಸಿದೆ.

Comments are closed.