ಕರ್ನಾಟಕ

ಅವ್ಯವಸ್ಥೆಗೆ ಕಾರಣವಾದ ಜಂಬೂ ಸವಾರಿ

Pinterest LinkedIn Tumblr


ಮೈಸೂರು: ಈ ಹಿಂದಿನ ಸಂಪ್ರದಾಯವನ್ನು ಮುರಿದ ದಸರಾ ಜಂಬೂಸವಾರಿ ಮೆರವಣಿಗೆಯೂ ಅವ್ಯವಸ್ಥೆ, ಗೊಂದಲಕ್ಕೂ ಸಾಕ್ಷಿಯಾಯಿತು.
ಅರ್ಜುನ ಹೊತ್ತ ಅಂಬಾರಿಯಲ್ಲಿ ಪ್ರತಿಷ್ಠಾಪಿತ ನಾಡದೇವಿ ಚಾಮುಂಡೇಶ್ವರಿ ದೇವಿಗೆ ಮುಖ್ಯಮಂತ್ರಿ ಪುಷ್ಪಾರ್ಚನೆ ಮಾಡುವ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡುವುದು ಪ್ರಮುಖ ಘಟ್ಟ. ಸ್ತಬ್ಧಚಿತ್ರಗಳು, ಕಲಾತಂಡಗಳು ಸಾಗಿದ ಬಳಿಕ ಕೊನೆಯಲ್ಲಿ ಇದು ನಡೆಯುವುದು ಸಂಪ್ರದಾಯ. ಆದರೆ, ಈ ಸಲ ಇದಕ್ಕೆ ಧಕ್ಕೆ ಬಂತು.
ನಿಗದಿತ ಶುಭ ಗಳಿಗೆ(ಮಧ್ಯಾಹ್ನ 3.40ರಿಂದ 4.10ರವರೆಗೆ) ಮೀರಲಿದೆ ಎಂಬ ಕಾರಣಕ್ಕೆ ಪುಷ್ಪಾರ್ಚನೆ ಪ್ರಕ್ರಿಯೆಯನ್ನು ಮೆರವಣಿಗೆಯ ಮಧ್ಯದಲ್ಲೇ ಮಾಡಲಾಯಿತು. ಇದು ಈ ಹಿಂದಿನಿಂದ ನಡೆದುಕೊಂಡ ಪದ್ಧತಿಯನ್ನು ಕೈಬಿಟ್ಟು, ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತು. ಇಷ್ಟಾದರೂ ಪುಷ್ಪಾರ್ಚನೆ ಮೂರು ನಿಮಿಷ ತಡವಾಯಿತು.
ಕೆಲ ದಶಕಗಳ ಹಿಂದೆ ನಂದಿಪೂಜೆ ಸಲ್ಲಿಸಿದ ಬಳಿಕ ಅಂಬಾರಿಯಲ್ಲಿ ಕುಳಿತ ಚಾಮುಂಡಿದೇವಿಗೆ ಪುಷ್ಪಾರ್ಚನೆ ಮಾಡಿ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತಿತ್ತು. ಕಲಾತಂಡಗಳು, ಸ್ತಬ್ಧಚಿತ್ರಗಳು, ಸಂಗೀತಗಾಡಿ ಸಾಗಿದ ಬಳಿಕ ಕೊನೆಯಲ್ಲಿ ಅಂಬಾರಿ ಸಾಗುತ್ತಿತ್ತು. ಅಲ್ಲಿಯವರೆಗೆ ಸುಮಾರು 2-3 ಗಂಟೆ ಕಾಲ ಅಂಬಾರಿ ಹೊತ್ತುಕೊಂಡು ಆನೆ ಕಾಯಬೇಕಿತ್ತು. ಇದು ಆನೆಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಪದ್ಧತಿಯಲ್ಲಿ ತುಸು ಬದಲಾವಣೆ ಮಾಡಿಕೊಳ್ಳಲಾಯಿತು.
ಹೀಗಾಗಿ, ನಂದಿಧ್ವಜ ಪೂಜೆ ಬಳಿಕ ಮೆರವಣಿಗೆ ಚಾಲನೆ ದೊರೆಯುತ್ತಿತ್ತು. ಪುಷ್ಪಾರ್ಚನೆಗೂ ಒಂದು ತಾಸು ಮುನ್ನ ಆನೆ ಮೇಲೆ ಅಂಬಾರಿ ಕಟ್ಟುವ ಕೆಲಸ ನಡೆಯುತ್ತಿತ್ತು. ಅದು ಪೂರ್ಣಗೊಂಡ ಬಳಿಕ ಸಿಎಂ ದೇವಿಗೆ ಪುಷ್ಪಾರ್ಚನೆ ಮಾಡಿಕೊಂಡು ಬರುತ್ತಿದ್ದ ಪದ್ಧತಿ ಈವರೆಗೆ ಚಾಲ್ತಿಯಲ್ಲಿ ಇತ್ತು. ಆದರೆ, ಈ ಸಲ ಇದಕ್ಕೆ ಭಂಗವಾಗಿದೆ. ಮೆರವಣಿಗೆಯ ಆರಂಭದಲ್ಲೂ ಅಥವಾ ಅಂತ್ಯದಲ್ಲೂ ಮಾಡದೆ, ಅದರ ಮಧ್ಯಂತರದಲ್ಲೇ ಈ ಪ್ರಕ್ರಿಯೆ ನೆರವೇರಿತು. ಇದೀಗ ಚರ್ಚೆಗೆ ಗ್ರಾಸವಾಗಿದೆ.
ಅಲ್ಲದೆ, ಪುಷ್ಪ ನಮನ ಕಾರ್ಯ ಹಿನ್ನೆಲೆಯಲ್ಲಿ ಕಲಾತಂಡಗಳು, ಸ್ತಬ್ಧಚಿತ್ರಗಳನ್ನು ತಡೆಹಿಡಿಯಲಾಯಿತು. ಪುಷ್ಪಾರ್ಚನೆ ಬಳಿಕ ಕೆಲ ಹೆಜ್ಜೆ ಹಾಕಿದ ಗಜಪಡೆಯ ನಾಯಕ ಅರ್ಜುನ 750 ಕೆ.ಜಿ. ತೂಕದ ಅಂಬಾರಿ ಹೊತ್ತು ಅರಮನೆ ಆವರಣದಲ್ಲೇ 15 ನಿಮಿಷ ಕಾದು ನಿಂತ. ತಡೆ ಹಿಡಿದಿದ್ದ ಸ್ತಬ್ಧಚಿತ್ರಗಳು, ಕಲಾತಂಡಗಳು ಮೆರವಣಿಗೆಯಲ್ಲಿ ಸೇರಿಕೊಂಡು ಮುಂದಕ್ಕೆ ಸಾಗಿದವು. ಕೊನೆಯಲ್ಲಿ ಬರಬೇಕಿದ್ದ ಫಿರಂಗಿ ಗಾಡಿಗಳು, ತುರ್ತುಚಿಕಿತ್ಸಾ ವಾಹನ, ಪೊಲೀಸ್ ಗಾಡಿಗಳು ಇವುಗಳೊಂದಿಗೆ ನುಸುಳಿಕೊಂಡವು. ಇದು ಮೆರವಣಿಗೆಗೆ ಅಭಾಸ ಎನಿಸಿತು. ಆಗ ಅವುಗಳನ್ನು ಪಕ್ಕ ಸರಿಸಿ ಕಲಾವಿದರು, ಸ್ತಬ್ಧಚಿತ್ರಗಳು ಸಾಗಲು ಅವಕಾಶ ಮಾಡಿಕೊಡಲಾಯಿತು.
ಅಂಬಾರಿಯನ್ನು ಕಾಯಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ಮತ್ತೆ ಮೆರವಣಿಗೆಯಲ್ಲಿ ಅದು ಸಾಗಲು ಅವಕಾಶ ನೀಡಲಾಯಿತು. ಬಲರಾಮ ದ್ವಾರ ದಾಟಿದಾಗ ಚಾಮರಾಜೇಂದ್ರ ವೃತ್ತದಲ್ಲಿ ಅರ್ಜುನನಿಗೆ ಮತ್ತೆ ಕಾಯುವಿಕೆ ಸರದಿ ಎದುರಾಯಿತು. ಇದು ಇಷ್ಟಕ್ಕೆ ನಿಲ್ಲಲಿಲ್ಲ. ಬನ್ನಿಮಂಟಪ ತಲುಪುವವರೆಗೂ ಮೇಲಿಂದ ಮೇಲೆ ವೇಟಿಂಗ್ ಮಾಡುವ ಪ್ರಹಸನ ಎದುರಾಯಿತು. ಇದರಿಂದ ಅರ್ಜುನ ಆನೆ ಹೈರಾಣನಾದ. ಆದರೆ, ಆತ ಇದನ್ನು ತೋರಿಸಿಕೊಳ್ಳಲಿಲ್ಲ. ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಜಿಲ್ಲಾಡಳಿತ ನೆಮ್ಮದಿ ನಿಟ್ಟುಸಿರು ಬಿಡುವಂತೆ ಮಾಡಿದ.
ಮೆರವಣಿಗೆ ಸಾಗಿದ ರಾಜಪಥದಲ್ಲಿ ಎಗ್ಗಿಲ್ಲದೆ ಸಾಗಿದ ಜನರು, ನೂಕುನುಗ್ಗಲು ಹೀಗೆ ನಾನಾ ಅವ್ಯವಸ್ಥೆಗಳು ರಾರಾಜಿಸಿದವು. ಇದು ಮೆರವಣಿಗೆ ಸಾಗಲು ತೊಂದರೆ ಆಯಿತು. ಜತೆಗೆ, ಜಂಬೂಸವಾರಿಯಲ್ಲಿ ಅಚ್ಚುಕಟ್ಟುತನವೂ ಮಾಯವಾಗಿತ್ತು.
ಕಲಾಪ್ರದರ್ಶನಕ್ಕೆ ಸರಿಯಾಗಿ ಸಿಗದ ಅವಕಾಶ
ತರಾತುರಿಯಲ್ಲಿ ಮೆರವಣಿಗೆ ಸಾಗಿತು. ಸಮಯ ಕೊರತೆಯಿಂದ ಕಲಾತಂಡಗಳು ತಮ್ಮ ಕಲೆ ಪ್ರದರ್ಶನಕ್ಕೆ ಸರಿಯಾಗಿ ಅವಕಾಶ ನೀಡಲಿಲ್ಲ. ಪೊಲೀಸರು ಅವರನ್ನು ಬೇಗನೆ ಮುಂದಕ್ಕೆ ಸಾಗುವಂತೆ ಬೆನ್ನಿಗೆ ಕೈ ಹಾಕಿ ನೂಕಿದರು. ಹೀಗಾಗಿ, ಕಲಾವಿದರು ಓಡುತ್ತಲೇ ಮುಂದಕ್ಕೆ ಸಾಗಿದರು. ಸ್ತಬ್ಧಚಿತ್ರಗಳೂ ತ್ವರಿತವಾಗಿ ಮುಂದೆ ಹೋಗಲು ಸೂಚಿಸಿದರು.
ಜಾಗ ಖಾಲಿ ಮಾಡಿದ ಜನ
ಎಲ್ಲರ ಕೇಂದ್ರ ಬಿಂದುವಾದ ಅಂಬಾರಿ ಹೊತ್ತ ಅರ್ಜುನ ಅರಮನೆಯಿಂದ ನಿರ್ಗಮಿಸುತ್ತಿದ್ದಂತೆ ಇತ್ತ ಜನರು ಕೂಡ ಅಲ್ಲಿಂದ ಜಾಗ ಖಾಲಿ ಮಾಡಿದರು. ಇದು ಸಂಪ್ರದಾಯ ಮುರಿದ ಪರಿಣಾಮ.
ಆದರೆ, ಮೆರವಣಿಗೆ ಇನ್ನು ಪ್ರಗತಿಯಲ್ಲಿ ಇತ್ತು. ಸಾಗುತ್ತಿದ್ದ ಕಲಾತಂಡಗಳ ನೃತ್ಯ, ಸ್ತಬ್ಧಚಿತ್ರಗಳು ವೀಕ್ಷಿಸಲು ಮನಸ್ಸು ಮಾಡದ ಸಭಿಕರು ಮನೆ ಕಡೆಗೆ ಹೊರಟರು. ಹೀಗಾಗಿ, ಮೆರವಣಿಗೆ ವೇಳೆಯೇ ಅರಮನೆಯಲ್ಲಿ ಹಾಕಲಾಗಿದ್ದ ಅರ್ಧದಷ್ಟು ಕುರ್ಚಿಗಳು ಖಾಲಿ ಆದವು. ಈ ಹಿಂದೆ ಈ ರೀತಿ ಘಟನೆಗಳು ನಡೆದಿರಲಿಲ್ಲ.
ಜನಪ್ರತಿನಿಧಿಗಳ ಕುಟುಂಬದ ಸವಾರಿ!
ಜಂಬೂಸವಾರಿಯಲ್ಲಿ ಜನಪ್ರತಿನಿಧಿಗಳ ಕುಟುಂಬದ ಸವಾರಿಯೂ ನಡೆಯಿತು. ಈ ಹಿಂದೆ ಜನಪ್ರತಿನಿಧಿಗಳ ಕುಟುಂಬಸ್ಥರು ನಿಗದಿತ ಸ್ಥಳಕ್ಕೆ ಅವಧಿಗೆ ಮುನ್ನವೇ ಬಂದು ಕುಳಿತುಕೊಂಡಿರುತ್ತಿದ್ದರು. ಇದು ಯಾರಿಗೂ ಕಿರಿಕಿರಿ ಉಂಟು ಮಾಡುತ್ತಿರಲಿಲ್ಲ. ಆದರೆ, ಈ ಸಲ ಇದು ಎದ್ದು ಕಂಡಿತು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಂಬದವರೇ ಹೆಚ್ಚಿದ್ದು, ಅರಮನೆಗೆ ಕರೆ ತಂದ ಬಸ್ ಅವರ ಸಂಬಂಧಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಅವರ ಪತ್ನಿ ಚನ್ನಮ್ಮ, ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ, ಅವರ ಸಂಬಂಧಿ ಪ್ರೊ.ಕೆ.ಎಸ್.ರಂಗಪ್ಪ ಪತ್ನಿ, ಸಚಿವ ಜಿ.ಟಿ.ದೇವೇಗೌಡ ಪತ್ನಿ ಲಲಿತಾ ಅವರೆಲ್ಲರೂ ರಾಜಪಥದಲ್ಲೇ ಸಾಗಿ ಬಂದರು. ಇದುವೇ ಚರ್ಚೆಗೆ ಗ್ರಾಸವಾಯಿತು.

Comments are closed.