ಕರ್ನಾಟಕ

ಶಿವಮೊಗ್ಗ ಉಪಚುನಾವಣೆ: ಜೆಡಿಎಸ್ ಗೆ ಬಿಟ್ಟು ಕೊಡಲು ನಿರ್ಧಾರ

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್​ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಉಪಚುನಾವಣೆ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಅಲ್ಲದೇ, ಶಿವಮೊಗ್ಗ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಶಿವಮೊಗ್ಗ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್​ನಿಂದ ಸೂಕ್ತ ಅಭ್ಯರ್ಥಿ ಸಿಗದ ಕಾರಣಕ್ಕೆ ಈ ಕ್ಷೇತ್ರವನ್ನು ಉಪಚುನಾವಣೆಗೆ ಮಾತ್ರ ಅನ್ವಯವಾಗುವಂತೆ ಜೆಡಿಎಸ್​ ಬಿಟ್ಟುಕೊಡಲು ವೇಣುಗೋಪಾಲ್​ ಮತ್ತು ಮುಖಂಡರು ನಿರ್ಧರಿಸಿದರು. ಇಂದು ಬೆಂಗಳೂರಿಗೆ ಬಂದಿರುವ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಈ ನಿರ್ಧಾರಕ್ಕೆ ಅಂಕಿತ ಹಾಕುವುದೊಂದೇ ಬಾಕಿ ಉಳಿಸಿದೆ.

ಉಪಚುನಾವಣೆಯಲ್ಲಿ ಕಾಂಗ್ರೆಸ್​ ಸ್ಪರ್ಧಿಸಲಿರುವ ಜಮಖಂಡಿ ವಿಧಾನಸಭೆ ಹಾಗೂ ಬಳ್ಳಾರಿ ಲೋಕಸಭೆ ಅಭ್ಯರ್ಥಿಗಳ ಹೆಸರನ್ನು ಫೈನಲ್​ ಮಾಡಲಾಗಿದೆ. ಜಮಖಂಡಿಯಿಂದ ಆನಂದ್ ನ್ಯಾಮಗೌಡ ಹಾಗೂ ಬಳ್ಳಾರಿಯಿಂದ ಶಾಸಕ ನಾಗೇಂದ್ರ ಸಹೋದರ ವೆಂಕಟೇಶ ಪ್ರಸಾದ್ ಹೆಸರನ್ನು ಫೈನಲ್ ಮಾಡಲಾಗಿದ್ದು, ಇಂದು ರಾಹುಲ್​ ಗಾಂಧಿ ಅವರು ಅಧಿಕೃತವಾಗಿ ಹೆಸರನ್ನು ಘೋಷಣೆ ಮಾಡಲಿದ್ದಾರೆ.

ನಿರೀಕ್ಷೆಯಂತೆ ಶಿವಮೊಗ್ಗ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡಲಾಗಿದೆ. ಅದರಂತೆ ಜೆಡಿಎಸ್​ನಿಂದ ಮಧುಬಂಗಾರಪ್ಪ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಮಧು ಬಂಗಾರಪ್ಪ ಅಭ್ಯರ್ಥಿ ಎಂಬುದನ್ನು ಕಳೆದ ಮೂರು ದಿನಗಳ ಹಿಂದೆಯೇ ಜೆಡಿಎಸ್​ ವರಿಷ್ಠ ದೇವೇಗೌಡರು ಘೋಷಿಸಿದ್ದರು.

ಸಭೆಯಲ್ಲಿ ವೇಣುಗೋಪಾಲ್​ ಅವರು ಉಪಚುನಾವಣೆಯ ಉಸ್ತುವಾರಿ, ಪ್ರಚಾರದ ಬಗ್ಗೆ ಚರ್ಚೆ ನಡೆಸಿದರು. ಅಲ್ಲದೇ, ಉತ್ತಮವಾಗಿ ಕಾರ್ಯನಿರ್ವಹಿಸದ ಸಚಿವರಿಗೆ ಮೌಲ್ಯಪಾಮನದ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಕಾಂಗ್ರೆಸ್​ನ ಎಲ್ಲ ಸಚಿವರು ಭಾಗಿಯಾಗಿದ್ದರು.

Comments are closed.