ಕರ್ನಾಟಕ

197 ಮತಗಳ ಪೈಕಿ 188 ಮತ ಪಡೆದು ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಗೆ ಭಾರತ ಆಯ್ಕೆ

Pinterest LinkedIn Tumblr


ಬೆಂಗಳೂರು: ವಿಶ್ವಸಂಸ್ಥೆಯ ಮಾನವ ಹಕ್ಕು ವಿಭಾಗಕ್ಕೆ ಭಾರತ ನಿರಾಯಾಸ ಪ್ರವೇಶ ಪಡೆದಿದೆ. ಮಾನವ ಹಕ್ಕು ಮಂಡಳಿ ಸದಸ್ಯ ಸ್ಥಾನಕ್ಕೆ ನಡೆದ ಚನಾವಣೆಯಲ್ಲಿ ಭಾರತ 197 ಮತಗಳ ಪೈಕಿ 188 ಮತ ಪಡೆದು ಭರ್ಜರಿ ಗೆಲುವು ಕಂಡಿದೆ. 2019ರ ಜನವರಿ 1ರಿಂದ ಭಾರತವು 3 ವರ್ಷಗಳ ಕಾಲ ಮಂಡಳಿಯ ಸದಸ್ಯರಾಷ್ಟ್ರವಾಗಿರಲಿದೆ. ಭಾರತ ಸೇರಿದಂತೆ 18 ಹೊಸ ಸದಸ್ಯರಾಷ್ಟ್ರಗಳು ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯ ಸದಸ್ಯ ಸ್ಥಾನ ಗಿಟ್ಟಿಸಿವೆ.

ಏಷ್ಯಾ ಪೆಸಿಫಿಕ್ ವಿಭಾಗಕ್ಕೆ ಇದ್ದ 5 ಸ್ಥಾನಗಳಿಗೆ ಭಾರತ ಸೇರಿ 5 ರಾಷ್ಟ್ರಗಳು ಸ್ಪರ್ಧಿಸಿದ್ದವು. ಚುನಾವಣಾ ಕಣದಲ್ಲಿದ್ದ ಭಾರತ, ಬಹರೇನ್, ಬಾಂಗ್ಲಾದೇಶ, ಫಿಜಿ ಮತ್ತು ಫಿಲಿಪ್ಪೈನ್ಸ್ ಎಲ್ಲಾ ದೇಶಗಳೂ ಆಯ್ಕೆಯಾಗುವ ನಿರೀಕ್ಷೆ ಇತ್ತು. ಭಾರತ ಅತೀ ಹೆಚ್ಚು ಮತಗಳನ್ನ ಪಡೆದು ಚುನಾಯಿತಗೊಂಡಿದ್ದು ವಿಶೇಷ.

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಡೆದ ಚುನಾವಣೆಗೆ ರಹಸ್ಯ ಮತದ ಕ್ರಮ ಅನುಸರಿಸಲಾಗಿತ್ತು. ರಹಸ್ಯ ಮತದಾನದಲ್ಲಿ ಭಾರತಕ್ಕೆ ಅತೀ ಹೆಚ್ಚು ಮತ ಸಿಕ್ಕಿರುವುದು ಅಂತಾರಾಷ್ಟ್ರೀಯವಾಗಿ ಭಾರತಕ್ಕಿರುವ ಮಾನ್ಯತೆಯ ದ್ಯೋತಕವಾಗಿದೆ.

ಏನಿದು ಮಾನವ ಹಕ್ಕು ಮಂಡಳಿ?

ಅಂತಾರಾಷ್ಟ್ರೀಯ ಮಾನವ ಹಕ್ಕು ವಿವಾದವನ್ನು ನಿರ್ವಹಿಸುವ ಉದ್ದೇಶದಿಂದ ವಿಶ್ವಸಂಸ್ಥೆಯು 2006ರಲ್ಲಿ ಈ ಮಂಡಳಿಯನ್ನು ರಚಿಸಿತು. ಈ ಮಾನವ ಹಕ್ಕು ಮಂಡಳಿಯಲ್ಲಿ 47 ಚುನಾಯಿತ ಸದಸ್ಯ ರಾಷ್ಟ್ರಗಳಿರುತ್ತವೆ. ಭೌಗೋಳಿಕ ಪ್ರಾಧಾನ್ಯತೆಗೆ ಅನುಗುಣವಾಗಿ ವಿವಿಧ ಪ್ರದೇಶಗಳಿಗೆ ನಿರ್ದಿಷ್ಟ ಸ್ಥಾನಗಳನ್ನ ಮೀಸಲಿಟ್ಟಿದೆ. ಅದರಂತೆ ಆಫ್ರಿಕಾ ಖಂಡಕ್ಕೆ 13, ಏಷ್ಯಾಪೆಸಿಫಿಕ್ ಪ್ರದೇಶಕ್ಕೆ 13, ಪೂರ್ವ ಯೂರೋಪ್​ಗೆ 6, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ರಾಷ್ಟ್ರಗಳಿಗೆ 8, ಪಶ್ಚಿಮ ಯೂರೋಪ್ ಮತ್ತಿತರ ರಾಷ್ಟ್ರಗಳಿಗೆ 7 ಸೀಟುಗಳನ್ನ ಮೀಸಲಾಗಿಡಲಾಗಿದೆ.

ಇವತ್ತು ನಡೆದ ಚುನಾವಣೆಯಲ್ಲಿ ಸ್ಪರ್ಧೆಗಿದ್ದ ಸ್ಥಾನಗಳಿಗೆ ತಕ್ಕಷ್ಟೇ ದೇಶಗಳು ಸ್ಪರ್ಧಿಸಿದ್ದರಿಂದ ಎಲ್ಲಿಯೂ ಸ್ಪರ್ಧೆ ಇರಲಿಲ್ಲ. ಎಲ್ಲಾ ಸ್ಪರ್ಧಿ ರಾಷ್ಟ್ರಗಳು ಮಂಡಳಿಗೆ ಆಯ್ಕೆಯಾಗುವುದು ನಿಶ್ಚಿತವಾಗಿತ್ತು. ಆದರೆ, ಬಹರೇನ್ ಮತ್ತು ಕ್ಯಾಮರೂನ್ ದೇಶಗಳ ಸ್ಪರ್ಧೆ ಬಗ್ಗೆ ಮಾತ್ರ ತುಸು ಅಪಸ್ವರ ಎದ್ದಿತ್ತು ಬಿಟ್ಟರೆ ಚುನಾವಣೆಯಲ್ಲಿ ಯಾವುದೇ ಬಿಸಿ ಇರಲಿಲ್ಲ.

ಭಾರತ ಈ ಹಿಂದೆ 20114ರಿಂದ ಸತತ ಎರಡು ಬಾರಿ ಮಾನವ ಹಕ್ಕು ಮಂಡಳಿಯ ಸದಸ್ಯನಾಗಿ ಕಾರ್ಯನಿರ್ವಹಿಸಿದೆ. ಒಂದು ವರ್ಷದ ಕೂಲಿಂಗ್ ಆಫ್ ಅವಧಿಯ ಬಳಿಕ ಈಗ ಮತ್ತೆ ಮಂಡಳಿಯ ಚುನಾವಣೆಗೆ ಸ್ಪರ್ಧಿಸಿ ಮತ್ತೊಮ್ಮೆ ಆಯ್ಕೆಯಾಗಿದೆ.

Comments are closed.